ಲಂಡನ್: ಐಸಿಸಿ ವಿಶ್ವಕಪ್ ಟೂರ್ನಿಯ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಭಾರತವನ್ನು ಮಣಿಸಿದ ನ್ಯೂಜಿಲೆಂಡ್ ತಂಡ ಟೂರ್ನಿಯ ಫೈನಲ್ ಪ್ರವೇಶ ಮಾಡಿದೆ.
ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ 18 ರನ್ ಗಳ ರೋಚಕ ಜಯ ಸಾಧಿಸಿತು. ನ್ಯೂಜಿಲೆಂಡ್ ನೀಡಿದ 240 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ ಆರಂಭದಲ್ಲೇ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು.
ಈ ಹಂತದಲ್ಲಿ ಜೊತೆಯಾದ ರಿಷಬ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯಾ ಜೋಡಿ ಉತ್ತಮವಾಗಿ ಬ್ಯಾಟಿಂಗ್ ಮಾಡಿ ಕೊಂಚ ನಿರಾಳ ತಂದರಾದರೂ, ದೊಡ್ಡ ಹೊಡೆತಕ್ಕೆ ಕೈ ಹಾಕಿ ಇಬ್ಬರೂ 32 ರನ್ ಗಳಿಗೆ ಪೆವಿಲಿಯನ್ ಸೇರಿಕೊಂಡರು. ಈ ಹಂತದಲ್ಲಿ ಭಾರತ ತಂಡ ಅಕ್ಷರಶಃ ನಲುಗಿ ಹೋಗಿತ್ತು. ಕೇವಲ 92 ರನ್ ಗಳಿಗೆ ಪ್ರಮುಖ ಐದು ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಆದರೆ ಈ ಹಂತದಲ್ಲಿ ಜೊತೆಗೂಡಿದ ಮಹೇಂದ್ರ ಸಿಂಗ್ ಧೋನಿ ಮತ್ತು ರವೀಂದ್ರ ಜಡೇಜಾ ಜೋಡಿ ತಂಡದ ಇನ್ನಿಂಗ್ಸ್ ಗೆ ಜೀವ ತುಂಬಿದರು.
ಶತಕದ ಜೊತೆಯಾಟವಾಡಿದ ಈ ಜೋಡಿ ಸೋಲಿನತ್ತ ಮುಖ ಮಾಡಿದ್ದ ತಂಡವನ್ನು ಗೆಲುವಿನತ್ತ ತಿರುಗುವಂತೆ ಮಾಡಿದರು. ಅಂತಿಮ ಓವರ್ ಗಳು ಸಮೀಪಿಸುತ್ತಿದ್ದಂತೆಯೇ ರನ್ ವೇಗಕ್ಕೆ ಮುಂದಾದ ಜಡೇಜಾ ಬೌಲ್ಟ್ ಬೌಲಿಂಗ್ ನಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ವಿಲಿಯಮ್ಸನ್ ಗೆ ಕ್ಯಾಚ್ ನೀಡಿ ಹೊರ ನಡೆದರು. ಬಳಿಕ ಧೋನಿ ಕೂಡ ಇನ್ನಿಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. ಮಾರ್ಟಿನ್ ಗಪ್ಟಿಲ್ ಎಸೆದ ಚೆಂಡು ಕ್ಷಣಮಾತ್ರದಲ್ಲಿ ಬೇಲ್ಸ್ ಎಗರಿಸಿತ್ತು. ಆ ಮೂಲಕ ಭಾರತದ ಫೈನಲ್ ಗೇರುವ ಕನಸು ಬಹುತೇಕ ಭಗ್ನವಾಗಿತ್ತು. ಅಂತಿಮವಾಗಿ ಭುವನೇಶ್ವರ್ ಕುಮಾರ್ ಮತ್ತು ಚಹಲ್ ಔಟಾಗುವುದರೊಂದಿಗೆ ಭಾರತದ ಇನ್ನಿಂಗ್ಸ್ ಗೆ ತೆರೆ ಬಿತ್ತು.
ಅಲ್ಲದೇ ಕೇವಲ 18 ರನ್ ಗಳ ಅಂತರದಲ್ಲಿ ಭಾರತ ಸೋಲುಕಾಣುವುದರೊಂದಿಗೆ ಭಾರತದ ವಿಶ್ವಕಪ್ ಅಭಿಯಾನ ಕೊನೆಗೊಂಡಿದೆ.