ಬೆಂಗಳೂರು, ಜು.11-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯವರು ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, 2008-09ರಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಳ್ಳುವಂತೆ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ 2008-09ರಲ್ಲಿ ಸಚಿವರಾಗಿದ್ದ ಪಕ್ಷೇತರ ಶಾಸಕರೂ ಸೇರಿದಂತೆ 16 ಮಂದಿ ರಾಜೀನಾಮೆ ಕೊಟ್ಟಿದ್ದರು.ಆಗ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದೀರಾ?ಎಂದು ಪ್ರಶ್ನಿಸಿದರು.
ಈ ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು, ಒಂದೇ ನ್ಯಾಯ.ಆಗ ಬಿಜೆಪಿಯವರು ಸ್ಪೀಕರ್ ಅವರನ್ನು ಬಳಸಿಕೊಂಡು 16 ಮಂದಿಯನ್ನು ಅನರ್ಹಗೊಳಿಸಿರಲಿಲ್ಲವೇ?ಸರ್ಕಾರ ಮುಂದುವರೆಸಿರಲಿಲ್ಲವೇ?ಆಗಿನ ಘಟನೆಗಳ ಎಲ್ಲರಿಗೂ ಚೆನ್ನಾಗಿಯೇ ಮಾಹಿತಿ ಇದೆ ಎಂದರು.
ಕುಮಾರಸ್ವಾಮಿಯವರ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ.ಕುಮಾರಸ್ವಾಮಿ ರಾಜೀನಾಮೆ ನೀಡಲಿದ್ದಾರೆಯೇ ಎಂಬ ಪ್ರಶ್ನೆಗೆ, ಏಕೆ ರಾಜೀನಾಮೆ ನೀಡಬೇಕು ಎಂದು ಖಾರವಾಗಿ ಪ್ರಶ್ನಿಸಿದರು.