![Goa-BJP](http://kannada.vartamitra.com/wp-content/uploads/2019/07/Goa-BJP-673x381.jpg)
ಪಣಜಿ: ಕರ್ನಾಟಕದ ರಾಜಕೀಯ ಮತ್ತ ಕಾಂಗ್ರೆಸ್ ಶಾಸಕರ ರಾಜಿನಾಮೆ ವಿಚಾರ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಅತ್ತ ಗೋವಾದಲ್ಲೂ ರಾಜಕೀಯ ಬೇಗುದಿ ಉಲ್ಪಣಿಸಿದೆ.
ಹೌದು.. ಕರ್ನಾಟಕದ ಬಳಿಕ ಈಗ ಗೋವಾದಲ್ಲೂ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ. ಗೋವಾ ಕಾಂಗ್ರೆಸ್ಸಿನ 15 ಶಾಸಕರ ಪೈಕಿ 10 ಜನ ಬಿಜೆಪಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ. ವಿರೋಧ ಪಕ್ಷದ ನಾಯಕ ಬಾಬು ಕವಲೇಕರ್ ನೇತೃತ್ವದಲ್ಲಿ 10 ಶಾಸಕರು ಪ್ರತ್ಯೇಕವಾಗಿ ಬಿಜೆಪಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ.
ಈ ಸಂಬಂಧ ಶಾಸಕರೆಲ್ಲ ಸ್ಪೀಕರ್ ಅವರನ್ನು ಭೇಟಿ ಮಾಡಿದ್ದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಒಟ್ಟು 40 ಶಾಸಕರು ಇರವ ವಿಧಾನಸಭೆಯಲ್ಲಿ ಬಿಜೆಪಿ 17, ಕಾಂಗ್ರೆಸ್ 15, ಜೆಎಫ್‍ಎಫ್ 3, ಎಂಜಿಪಿ 1, ಎನ್‍ಸಿಪಿ 2, ಇಬ್ಬರು ಪಕ್ಷೇತರರು ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಗೋವಾ ಸಿಎಂ ಪ್ರಮೋದ್ ಸಾವಂತ್ ಅವರು, ‘ವಿಪಕ್ಷ ನಾಯಕರೂ ಸೇರಿದಂತೆ 10 ಜನ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಬಿಜೆಪಿ ಬಲ 27ಕ್ಕೆ ಏರಿಕೆಯಾಗಿದ್ದು, ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿತೊಂಡು ಅವರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಕ್ಷ ಸೇರ್ಪಡೆಗೆ ಅವರು ಯಾವುದೇ ರೀತಿಯ ಷರತ್ತು ವಿಧಿಸಿಲ್ಲ ಎಂದು ಹೇಳಿದ್ದಾರೆ.