ಬೆಂಗಳೂರು, ಜು.11-ಬಿಜೆಪಿಗೆ ಸೇರಲು ಕಾಂಗ್ರೆಸ್-ಜೆಡಿಎಸ್ ಶಾಸಕರು ವಲಸೆ ಹೋಗುತ್ತಿರುವ ಬೆನ್ನಲ್ಲೇ ಬಿಬಿಎಂಪಿಯಲ್ಲೂ ವಲಸೆ ಸಂಸ್ಕøತಿ ತಲೆ ಎತ್ತಿದೆ.
ಬೆಂಗಳೂರು ಪ್ರತಿನಿಧಿಸುತ್ತಿರುವ ರಾಮಲಿಂಗಾರೆಡ್ಡಿ, ರೋಷನ್ಬೇಗ್, ಎಸ್.ಟಿ.ಸೋಮಶೇಖರ್, ಭೆರತಿ ಬಸವರಾಜ್, ಮುನಿರತ್ನ ಬೆಂಬಲಿಗ ಸದಸ್ಯರು ಮತ್ತು ಜೆಡಿಎಸ್ನ ಗೋಪಾಲಯ್ಯ ಬೆಂಬಲಿಗರೂ ಸೇರಿದಂತೆ 25ಕ್ಕೂ ಹೆಚ್ಚು ಪಾಲಿಕೆ ಸದಸ್ಯರು ಬಿಜೆಪಿಗೆ ವಲಸೆ ಹೋಗಲು ತೀರ್ಮಾನಿಸಿದ್ದಾರೆ.
ಮುನಿರತ್ನ ಬೆಂಬಲಿಗರಾದ ಎನ್ಟಿಆರ್, ವೇಲುನಾಯ್ಕರ್, ಸೋಮಶೇಖರ್ ಬೆಂಬಲಿಗರಾದ ಆರ್ಯಶ್ರೀನಿವಾಸ್, ಹೇರೋಹಳ್ಳಿ ರಾಜಣ್ಣ, ವಾಸುದೇವಮೂರ್ತಿ, ಭೆರತಿ ಬಸವರಾಜ್ ಬೆಂಬಲಿಗರಾದ ಶ್ರೀಕಾಂತ್, ರೋಷನ್ಬೇಗ್ ಬೆಂಬಲಿಗರಾದ ಗುಣಶೇಖರ್, ರಾಮಲಿಂಗಾರೆಡ್ಡಿ ಪ್ರತಿನಿಧಿಸುವ ಬಿಟಿಎಂ ಬಡಾವಣೆಯ ಬಹುತೇಕ ಕಾಂಗ್ರೆಸ್ ಸದಸ್ಯರು ಬಿಜೆಪಿಗೆ ಹೋಗಲು ನಿರ್ಧರಿಸಿದ್ದಾರೆ.
ಅದೇ ರೀತಿ ಜೆಡಿಎಸ್ ಶಾಸಕ ಗೋಪಾಲಯ್ಯ ಬೆಂಬಲಿಗರಾದ ಗಂಗಮ್ಮರಾಜಣ್ಣ, ಮಹದೇವು ಬಹುತೇಕ ಬಿಜೆಪಿಗೆ ಹೋಗುವುದು ಖಚಿತ.
ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿಂದು ಸಹಕಾರ ಮಹಾಮಂಡಲದ ಚುನಾವಣೆ ನೆಪದಲ್ಲಿ ಸಭೆ ಕರೆಯಲಾಗಿತ್ತು. ಸುಪ್ರೀಂಕೋರ್ಟ್ ಸಂಜೆ ಸ್ಪೀಕರ್ ಮುಂದೆ ಹಾಜರಾಗುವಂತೆ ಶಾಸಕರಿಗೆ ಸೂಚಿಸಿದ್ದರಿಂದ ಸಭೆ ಮುಂದಕ್ಕೆ ಹೋಗಿದೆ.
ನಾಳೆ ಅಥವಾ ನಾಡಿದ್ದು ಮತ್ತೆ ಸಭೆ ಕರೆದು ತಮ್ಮ ಬೆಂಬಲಿತ ಬಿಬಿಎಂಪಿ ಸದಸ್ಯರು ರಾಜೀನಾಮೆ ನೀಡುವ ಕುರಿತು ಸೋಮಶೇಖರ್ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
20ಕ್ಕೂ ಹೆಚ್ಚು ಸದಸ್ಯರು ರಾಜೀನಾಮೆ ನೀಡಿದ್ದೇ ಆದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ಕೊನೆಯ ಮೇಯರ್ ಚುನಾವಣೆಯಲ್ಲಿ 101 ಸ್ಥಾನ ಹೊಂದಿರುವ ಬಿಜೆಪಿಗೆ ಪಟ್ಟ ನಿರಾಯಾಸವಾಗಿ ಒಲಿಯಲಿದೆ.