ಬೆಂಗಳೂರು, ಜು.10- ಮಹಾರಾಷ್ಟ್ರ ಸರ್ಕಾರ ಡಿ.ಕೆ.ಶಿವಕುಮಾರ್ ಅವರನ್ನು ಹೋಟೆಲ್ ಪ್ರವೇಶಿಸದಂತೆ ತಡೆಯುವ ಮೂಲಕ ಕೇಂದ್ರ ಸರ್ಕಾರದ ಅಣತಿಯಂತೆ ನಡೆದುಕೊಳ್ಳುತ್ತಿದ್ದು, ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಬಿಜೆಪಿ ಕೈ ಹಾಕಿರುವುದು ಸ್ಪಷ್ಟವಾಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ಕೆ.ಸಿ.ವೇಣುಗೋಪಾಲ್ ಆರೋಪಿಸಿದರು.
ಕುಮಾರಕೃಪ ಅತಿಥಿಗೃಹದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರನ್ನು ಮಹಾರಾಷ್ಟ್ರದ ರಿಸೈನನ್ಸ್ ಹೋಟೆಲ್ ಪ್ರವೇಶಿಸದಂತೆ ತಡೆದಿರುವುದು ಸರಿಯಲ್ಲ. ಆ ಹೋಟೆಲ್ನಲ್ಲಿ ಡಿ.ಕೆ.ಶಿವಕುಮಾರ್ ಅವರು ರೂಂ ಬುಕ್ ಮಾಡಿಕೊಂಡಿದ್ದಾರೆ. ಹೀಗಾಗಿ ಹೋಟೆಲ್ ಒಳಗೆ ಹೋಗುವ ಎಲ್ಲಾ ಅಧಿಕಾರ ಅವರಿಗಿದೆ. ಅವರನ್ನು ಯಾವ ಕಾರಣಕ್ಕಾಗಿ ತಡೆದರು ಎಂಬುದು ಗೊತ್ತಿಲ್ಲ. ಬಿಜೆಪಿಯ ಹುನ್ನಾರ ಈ ಮೂಲಕ ಸ್ಪಷ್ಟವಾಗುತ್ತಿದೆ.
ಒಂದು ಕಡೆ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ನಾವು ಮಾಡುತ್ತಿಲ್ಲ ಎನ್ನುತ್ತಾರೆ. ಮತ್ತೊಂದು ದಿಕ್ಕಿನಲ್ಲಿ ತೆರೆಮರೆಯಲ್ಲಿ ನಾಟಕವಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ರಾಜೀನಾಮೆ ನೀಡಿರುವ ಶಾಸಕರು ತಾವು ಈಗಲೂ ಕಾಂಗ್ರೆಸಿಗರು ಎಂದು ಹೇಳಿರುವುದನ್ನು ನಾನು ನಿನ್ನೆ ನೋಡಿದ್ದೇನೆ. ಕಾಂಗ್ರೆಸ್ನ ತಮ್ಮ ಸ್ನೇಹಿತರನ್ನು ಭೇಟಿ ಮಾಡಲು ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರವಿದೆ. ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಮಹಾರಾಷ್ಟ್ರ ಸರ್ಕಾರ ಡಿಕೆಶಿ ಅವರ ನಿಯೋಗವನ್ನು ತಡೆಯುತ್ತಿದೆ. ಈ ಮೂಲಕ ಮಹಾರಾಷ್ಟ್ರ ಸರ್ಕಾರ ಕರ್ನಾಟಕ ಸರ್ಕಾರ ಅಸ್ಥಿರಗೊಳಿಸುವ ಸಂಚಿನಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸಿಗರು ಕೂಡಲೇ ವಾಪಸ್ ಬರಬೇಕು. ಎಲ್ಲವನ್ನು ಕುರಿತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ರಾಮಲಿಂಗಾರೆಡ್ಡಿ ನಮ್ಮ ಪಕ್ಷದ ಹಿರಿಯ ನಾಯಕರು.ಅವರ ಜತೆ ನಮ್ಮೆಲ್ಲ ಹಿರಿಯ ನಾಯಕರು ಮಾತುಕತೆ ನಡೆಸಿದ್ದು, ಮನವೊಲಿಸುವ ಪ್ರಯತ್ನ ನಡೆಸಿದ್ದೇವೆ. ಅವರು ಕಾಂಗ್ರೆಸ್ನಲ್ಲಿ ಉಳಿಯುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಬಿಜೆಪಿಯ ಸಂಚಿನ ವಿರುದ್ಧ ಕಾಂಗ್ರೆಸ್ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುತ್ತದೆ. ಈ ಹಿಂದೆ ಈ ರೀತಿಯ ಸಂಚುಗಳು ನಡೆದಾಗ ಬೇರೆ ರಾಜ್ಯಗಳಲ್ಲೂ ಪ್ರತಿಭಟನೆ ನಡೆಸಲಾಗಿತ್ತು. ಅದೇ ರೀತಿ ಕರ್ನಾಟಕ ಸರ್ಕಾರದ ವಿರುದ್ಧ ನಡೆದಿರುವ ಸಂಚಿನ ವಿರುದ್ಧ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ವೇಣುಗೋಪಾಲ್ ಸ್ಪಷ್ಟಪಡಿಸಿದರು.