ಸಚಿವ ಡಿ.ಕೆ.ಶಿವಕುಮಾರ್ ಅವರ ನಿಯೋಗಕ್ಕೆ ಹೋಟೆಲ್ ಪ್ರವೇಶಕ್ಕೆ ನಿರ್ಬಂಧ

ಬೆಂಗಳೂರು, ಜು.10- ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನ ಹೋಟೆಲ್‍ನಲ್ಲಿ ತಂಗಿರುವ ಜೆಡಿಎಸ್-ಕಾಂಗ್ರೆಸ್‍ನ ಅತೃಪ್ತ ಶಾಸಕರ ಜತೆ ಮಾತುಕತೆ ನಡೆಸಲು ತೆರಳಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮತ್ತವರ ನಿಯೋಗಕ್ಕೆ ಹೋಟೆಲ್ ಪ್ರವೇಶ ನಿರ್ಬಂಧಿಸಿದ್ದರಿಂದ ಮುಂಬೈನಲ್ಲಿ ರಾಜಕೀಯದ ನಾಟಕೀಯ ಬೆಳವಣಿಗೆಗಳು ನಡೆದಿವೆ.

ಕಾಂಗ್ರೆಸ್ ಪರವಾಗಿ ಸಚಿವ ಡಿ.ಕೆ.ಶಿವಕುಮಾರ್, ಜೆಡಿಎಸ್ ಪರವಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಅರಸೀಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ, ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಅವರು ಇಂದು ಮುಂಜಾನೆ 5 ಗಂಟೆಗೆ ಬೆಂಗಳೂರು ಬಿಟ್ಟು 8 ಗಂಟೆಗೆ ಮುಂಬೈ ತಲುಪಿದರು.

ಆದರೆ, ಈ ನಾಲ್ಕೂ ಮಂದಿಗೆ ಹೋಟೆಲ್ ಪ್ರವೇಶಿಸಲು ಸ್ಥಳೀಯ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ. ಆರಂಭದಲ್ಲಿ ಗ್ರಾಹಕರಿಗೆ ಮಾತ್ರ ಹೋಟೆಲ್ ಪ್ರವೇಶವಿದೆ.ಅನ್ಯರಿಗೆ ಇಲ್ಲ ಎಂದು ಮುಂಬೈ ಪೊಲೀಸರು ಸಬೂಬು ಹೇಳಿದರು.

ಆ ಸಂದರ್ಭದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರು ನಾವು ಆನ್‍ಲೈನ್‍ನಲ್ಲಿ ರಿಸೈನನ್ಸ್ ಹೋಟೆಲ್‍ನಲ್ಲಿ ರೂಂ ಬುಕ್ ಮಾಡಿಕೊಂಡಿದ್ದೇವೆ ಎಂದು ಬುಕಿಂಗ್ ಆಗಿರುವ ದಾಖಲಾತಿ ತೋರಿಸಿದ್ದಲ್ಲದೆ, ಹೋಟೆಲ್ ಸಿಬ್ಬಂದಿ ನೀಡಿರುವ ರೂಂನ ಬೀಗದ ಕೀಗಳನ್ನು ಪೊಲೀಸರಿಗೆ ಸಚಿವ ಡಿ.ಕೆ.ಶಿವಕುಮಾರ್ ತೋರಿಸಿದರು. ಆದರೂ ಹೋಟೆಲ್ ಪ್ರವೇಶಿಸಲು ಪೊಲೀಸರು ಬಿಡಲಿಲ್ಲ.

ಆಗಲೂ ತಾಳ್ಮೆ ಕಳೆದುಕೊಳ್ಳದ ಡಿ.ಕೆ.ಶಿವಕುಮಾರ್, ಮುಂಜಾನೆಯೇ ಬೆಂಗಳೂರಿನಿಂದ ಬಂದಿದ್ದೇನೆ. ಸ್ನಾನ ಮಾಡಿಲ್ಲ. ನಿತ್ಯ ಕರ್ಮಗಳನ್ನು ಮುಗಿಸಬೇಕು. ದಯವಿಟ್ಟು ರೂಂಗೆ ಹೋಗಲು ಅವಕಾಶ ಮಾಡಿಕೊಡಿ ಎಂದು ಪೊಲೀಸರಲ್ಲಿ ಮನವಿ ಮಾಡಿದರು.

ಡಿ.ಕೆ.ಶಿವಕುಮಾರ್ ಹಾಗೂ ಮತ್ತವರ ನಿಯೋಗಕ್ಕೆ ವಾಸ್ತವ್ಯ ಹೂಡಲು ಬೇರೆ ಕಡೆ ಅವಕಾಶ ಮಾಡಿಕೊಡುತ್ತೇವೆ. ಆದರೆ, ಈ ರಿಸೈನನ್ಸ್ ಹೋಟೆಲ್‍ಗೆ ಬಿಡಲು ಅವಕಾಶ ಕೊಡುವುದಿಲ್ಲ ಎಂದು ಪೊಲೀಸರು ಪಟ್ಟು ಹಿಡಿದರು.

ಇದಕ್ಕೆ ಪ್ರತಿ ಪಟ್ಟು ಹಾಕಿದ ಡಿಕೆಶಿ ಸುಮಾರು 2ರಿಂದ 3 ಗಂಟೆ ಕಾಲ ರಿಸೈನನ್ಸ್ ಹೋಟೆಲ್ ಮುಂದೆಯೇ ನಿಂತು ಪ್ರವೇಶಕ್ಕೆ ಅವಕಾಶ ನೀಡುವಂತೆ ಕಾದು ಕುಳಿತರು.

ಜತೆಯಲ್ಲಿ ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವರು ಹಾಗೂ ಸರ್ಕಾರಿ ಅಧಿಕಾರಿಗಳ ಪರಿಚಯವಿದೆ. ಅವರ ಜತೆ ಮಾತನಾಡುತ್ತೇನೆ ಎಂದು ದೂರವಾಣಿಯಲ್ಲಿ ಕೆಲವರನ್ನು ಸಂಪರ್ಕಿಸಲು ಆರಂಭಿಸಿದರು.

ಡಿ.ಕೆ.ಶಿವಕುಮಾರ್ ಹೇಗಾದರೂ ಮಾಡಿ ಹೋಟೆಲ್ ಪ್ರವೇಶಿಸಬಹದು ಎಂಬ ಅನುಮಾನದಿಂದ ಈ ಹೋಟೆಲ್‍ನಲ್ಲಿದ್ದ ಅತೃಪ್ತ ಶಾಸಕರನ್ನು ಹಿಂಬಾಗಿಲ ಮೂಲಕ ಕರೆದುಕೊಂಡು ಹೋಗಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗಿದೆ.

ನಿನ್ನೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಉನ್ನತ ನಾಯಕರ ಸಭೆ ಬಳಿಕ ಡಿ.ಕೆ.ಶಿವಕುಮಾರ್ ಮುಂಬೈಗೆ ತೆರಳುವ ವಿಷಯವನ್ನು ಬಹಿರಂಗ ಪಡಿಸಿದ್ದರು. ತಕ್ಷಣವೇ ಬಿಜೆಪಿಯ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಮುಂಬೈಗೆ ತೆರಳಿದ್ದರು.

ಡಿ.ಕೆ.ಶಿವಕುಮಾರ್ ಮತ್ತವರ ನಿಯೋಗ ಬರುವುದರಿಂದ ಪರಿಸ್ಥಿತಿ ಹದಗೆಡಬಹುದು ಎಂಬ ಮುನ್ನೆಚ್ಚರಿಕೆಯಿಂದ ಹೋಟೆಲ್‍ನಲ್ಲಿ ತಂಗಿರುವ ಅತೃಪ್ತ ಶಾಸಕರಿಂದ ಮುಂಬೈ ಆಯುಕ್ತರಿಗೆ ದೂರು ಬರೆಸಿದ್ದು, ಅದರಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಇತರ ನಾಯಕರಿಂದ ತಮಗೆ ಒತ್ತಡ ಹಾಕುವ ಸಾಧ್ಯತೆ ಇದ್ದು, ರಕ್ಷಣೆ ನೀಡುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ.

ಆ ದೂರನ್ನೇ ಆಧರಿಸಿ ಮುಂಬೈ ಪೊಲೀಸರು ಸಚಿವ ಡಿ.ಕೆ.ಶಿವಕುಮಾರ್ ಮತ್ತು ಇತರರನ್ನು ಹೋಟೆಲ್ ಪ್ರವೇಶಿಸದಂತೆ ನಿರ್ಬಂಧಿಸಿದರು.

ಈ ಎಲ್ಲಾ ಹೈಡ್ರಾಮಗಳ ನಡುವೆ ಮಹಾರಾಷ್ಟ್ರದ ಕೆಲವು ಕಾರ್ಯಕರ್ತರು ಹೋಟೆಲ್ ಮುಂದೆ ಪ್ರತಿಭಟನೆ ನಡೆಸಿ ಕುಮಾರಸ್ವಾಮಿ ವಿರುದ್ಧ ಧಿಕ್ಕಾರ ಕೂಗಿದರು.ಡಿ.ಕೆ.ಶಿವಕುಮಾರ್ ವಾಪಸ್ ಹೋಗಿ ಎಂದು ಘೋಷಣೆ ಕೂಗಿದ್ದಲ್ಲದೆ. ಶಾಸಕ ನಾರಾಯಣಗೌಡರೇ ನಿಮ್ಮ ಪರವಾಗಿದ್ದೇವೆ ಎಂದು ಬೆಂಬಲ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಇದು ಪ್ರಜಾಪ್ರಭುತ್ವದ ವಿರೋಧಿ ನಡೆ.ಹೋಟೆಲ್‍ನಲ್ಲಿರುವ ಶಾಸಕರು ಸುಮಾರು 30-40 ವರ್ಷಗಳಿಂದಲೂ ನನ್ನ ಸ್ನೇಹಿತರು. ಜತೆಯಲ್ಲೇ ರಾಜಕೀಯ ಮಾಡಿ ಪಕ್ಷ ಸಂಘಟಿಸಿದವರು. ಅವರನ್ನು ಮಾತನಾಡಿಸಲು ಒಳಗೆ ಬಿಡದೆ ಅಡ್ಡಿಪಡಿಸಲಾಗಿದೆ. ಇದು ಸರಿಯಲ್ಲ. ಅತ್ಯಂತ ತಾಳ್ಮೆಯಿಂದಲೇ ವರ್ತಿಸಿದ್ದೇನೆ. ಪೊಲೀಸ್ ಅಧಿಕಾರಿಗಳು ಒಳ್ಳೆಯವರಿದ್ದಾರೆ. ನಾನು ಒಳಹೋಗಲು ಅವಕಾಶ ಕೊಡುತ್ತಾರೆ ಎಂಬ ನಂಬಿಕೆಯಿದೆ ಎಂದರಲ್ಲದೆ, ಬೆಂಗಳೂರಿನಿಂದ ಬಂದಿರುವ ನಾನು ಯಾವುದೇ ಆಯುಧಗಳನ್ನು ತಂದಿಲ್ಲ. ಬೇಕಿದ್ದರೆ ನನ್ನನ್ನು ಪರಿಶೀಲಿಸಲಿ. ಇನ್ನೂ ಅಗತ್ಯವಿದ್ದರೆ ಪೊಲೀಸ್ ಅಧಿಕಾರಿಗಳೇ ನಮ್ಮ ಜತೆ ಬರಲಿ. ಹೋಟೆಲ್‍ನಲ್ಲಿರುವ ಶಾಸಕರನ್ನು ಭೇಟಿ ಮಾಡಲು ನನಗೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಬಿಜೆಪಿಯವರು ರಣಹೇಡಿಗಳು. ಪರೋಕ್ಷವಾಗಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಜಿ.ಟಿ.ದೇವೇಗೌಡ, ಹೋಟೆಲ್ ಪ್ರವೇಶಕ್ಕೆ ಅವಕಾಶ ನೀಡದೆ ಗೂಂಡಾ ರಾಜಕಾರಣ ಮಾಡಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ವ್ಯವಸ್ಥೆ ಅಲ್ಲ. ಮುಂಬೈನಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಘೋಷಿತ ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದರು. ಆದರೆ, ಮಹಾರಾಷ್ಟ್ರ ಸರ್ಕಾರ ಬಿಜೆಪಿ ನಾಯಕರ ಸೂಚನೆ ಮೇರೆಗೆ ಅಘೋಷಿತ ತುರ್ತು ಪರಿಸ್ಥಿತಿ ಘೋಷಿಸಿದೆ ಎಂದು ಕಿಡಿಕಾರಿದರು.

ಶಾಸಕ ಶಿವಲಿಂಗೇಗೌಡ ಮಾತನಾಡಿ, ನಾವಿಲ್ಲಿ ಯಾರ ಪ್ರತಿನಿಧಿಗಳಾಗಿ ಬಂದಿಲ್ಲ. ದೇವೇಗೌಡರಾಗಲಿ, ಕುಮಾರಸ್ವಾಮಿಯವರಾಗಲಿ ಇಲ್ಲಿಗೆ ಕಳುಹಿಸಿಲ್ಲ.

ಹೋಟೆಲ್‍ನಲ್ಲಿರುವ ಶಾಸಕರು ನಮ್ಮ ಹಳೆಯ ಸ್ನೇಹಿತರು. ಅವರ ಜತೆ ಮಾತುಕತೆ ನಡೆಸಲು ಬಂದಿದ್ದೇವೆ. ಸಣ್ಣಪುಟ್ಟ ಮನಸ್ತಾಪಗಳಿಂದ ಬೇಸರಗೊಂಡಿದ್ದಾರೆ. ಅವರ ಜತೆ ಮಾತುಕತೆ ನಡೆಸುತ್ತೇವೆ. ಅವರು ಮಾತನಾಡುವುದಿಲ್ಲ ಎಂದರೆ ಬಾಗಿಲು ಮುರಿದು ಒಳ ಹೋಗಲು ಸಾಧ್ಯವಿಲ್ಲ. ಒಂದು ಪಕ್ಷ ಮಾತುಕತೆ ನಂತರವೂ ಅವರು ಬರದೇ ಹೋದರೆ ಬಲವಂತವಾಗಿ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಹೋಟೆಲ್‍ನಲ್ಲಿರುವ ಶಾಸಕರ ಪೈಕಿ ಒಬ್ಬರು ನಮಗೆ ಕರೆ ಮಾಡಿ ನಮ್ಮನ್ನು ಬಲವಂತವಾಗಿ ಕೂಡಿ ಹಾಕಲಾಗಿದೆ. ದಯವಿಟ್ಟು ಇಲ್ಲಿಗೆ ಬಂದು ನಮ್ಮನ್ನು ಕರೆದುಕೊಂಡು ಹೋಗಿ ಎಂದು ಮನವಿ ಮಾಡಿದ್ದರು. ಹಾಗಾಗಿ ನಾವು ಬಂದಿದ್ದೇವೆ. ಇಲ್ಲಿನ ಪರಿಸ್ಥಿತಿ ನೋಡಿದರೆ ಬಿಜೆಪಿ ನಮ್ಮ ಶಾಸಕರನ್ನು ಅಪಹರಣ ಮಾಡಿ ಬಲವಂತವಾಗಿ ಕೂಡಿಹಾಕಿರುವುದು ಸ್ಪಷ್ಟವಾಗಿದೆ. ನಮ್ಮ ಶಾಸಕರು ಸಂಕಷ್ಟದಲ್ಲಿದ್ದಾಗಲೂ ಬಂದು ಮಾತನಾಡಿಸದೇ ಇದ್ದರೆ.ನಾಳೆ ನಾವು ತಪ್ಪು ಮಾಡಿದಂತಾಗುತ್ತದೆ. ಹಾಗಾಗಿ ಬಂದಿದ್ದೇವೆ. ಶಾಸಕರನ್ನು ಭೇಟಿ ಮಾಡಲು ನಮಗೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಮಹಾರಾಷ್ಟ್ರ ಪೊಲೀಸರ ವರ್ತನೆಯನ್ನು ಖಂಡಿಸುತ್ತೇವೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ