ರೆಸಾರ್ಟ್‍ನಲ್ಲಿ ವಾಯುವಿಹಾರದಲ್ಲಿ ನಿರತರಾಗಿದ್ದ ಜೆಡಿಎಸ್ ಶಾಸಕರು

ಬೆಂಗಳೂರು, ಜು.10-ಆಪರೇಷನ್ ಕಮಲದ ಭೀತಿಯಿಂದ ಎರಡು ದಿನಗಳಿಂದಲೂ ದೇವನಹಳ್ಳಿ ಬಳಿಯ ರೆಸಾರ್ಟ್‍ನಲ್ಲಿ ಬೀಡು ಬಿಟ್ಟಿರುವ ಜೆಡಿಎಸ್ ಶಾಸಕರು ಇಂದು ಬೆಳಗ್ಗೆ ಯೋಗ, ವ್ಯಾಯಾಮ, ವಾಯುವಿಹಾರದಲ್ಲಿ ನಿರತರಾಗಿದ್ದರು.

ಜು.12 ರಿಂದ ಆರಂಭವಾಗುವ ಮಳೆಗಾಲದ ಅಧಿವೇಶನದವರೆಗೂ ರೆಸಾರ್ಟ್‍ನಲ್ಲೇ ಜೆಡಿಎಸ್ ಶಾಸಕರು ಉಳಿದುಕೊಳ್ಳಲಿದ್ದಾರೆ. ರಾಜ್ಯದ ರಾಜಕೀಯ ಬೆಳವಣಿಗೆಗಳನ್ನು ಅಲ್ಲಿಂದಲೇ ಗಮನಿಸುತ್ತಿದ್ದಾರೆ. ನಿನ್ನೆ ರೆಸಾರ್ಟ್‍ನಲ್ಲಿರುವ ಶಾಸಕರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೈತ್ರಿ ಸರ್ಕಾರಕ್ಕೆ ಎದುರಾಗಿರುವ ಸಂಕಷ್ಟ ಪರಿಹಾರವಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ಶಾಸಕರ್ಯಾರು ಆಮಿಷಕ್ಕೆ ಒಳಗಾಗಬಾರದು. ಒಗ್ಗಟ್ಟನ್ನು ಮುಂದುವರೆಸಬೇಕೆಂದು ಮನವಿ ಮಾಡಿದ್ದಾರೆ.

ಇಂದು ಮತ್ತು ನಾಳೆ ರೆಸಾರ್ಟ್‍ನಲ್ಲೇ ಉಳಿದುಕೊಳ್ಳಲಿದ್ದು, ಕೆಲ ಶಾಸಕರು ಯೋಗ ಮಾಡಿದರೆ, ಮತ್ತೆ ಕೆಲವರು ವಾಯುವಿಹಾರ ಹಾಗೂ ಧ್ಯಾನ ಮಾಡಿದರು.
ಎಲ್ಲ ಶಾಸಕರು ಶುಕ್ರವಾರ ಮಧ್ಯಾಹ್ನ ಒಟ್ಟಾಗಿ ವಿಧಾನಸಭೆಗೆ ಆಗಮಿಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮೈತ್ರಿ ಸರ್ಕಾರಕ್ಕೆ ಎದುರಾಗಿರುವ ಗಂಡಾಂತರವನ್ನು ಪಾರು ಮಾಡಲು ಕಾಂಗ್ರೆಸ್-ಜೆಡಿಎಸ್ ವರಿಷ್ಠರು ಹರಸಾಹಸ ಪಡುತ್ತಿದ್ದು, ಒಗ್ಗಟ್ಟನ್ನು ಕಾಯ್ದುಕೊಳ್ಳಬೇಕೆಂಬ ಉದ್ದೇಶದಿಂದ ಜೆಡಿಎಸ್ ಶಾಸಕರು ರೆಸಾರ್ಟ್‍ನಲ್ಲೇ ವಾಸ್ತವ್ಯ ಹೂಡಿದ್ದಾರೆ. ಮುಂಬೈನಲ್ಲಿ ಉಳಿದುಕೊಂಡಿರುವ ಅತೃಪ್ತ ಶಾಸಕರ ಮನವೊಲಿಕೆ ಪ್ರಯತ್ನವನ್ನು ಉಭಯ ಪಕ್ಷಗಳು ಮುಂದುವರೆಸಿವೆ.

ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಪರಿಸ್ಥಿತಿ ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಜೆಡಿಎಸ್ ಶಾಸಕರು ಹಾಗೂ ನಾಯಕರು ಕಾದು ನೋಡುವ ನಿರ್ಧಾರಕ್ಕೆ ಬಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ