ಸ್ಪೀಕರ್‍ರವರು ಸಾರ್ವಜನಿಕ ಪ್ರಕಟಣೆ ಹೊರಡಿಸಿ ಕ್ರಮ ತೆಗೆದುಕೊಳ್ಳಬೇಕು

Varta Mitra News

ಬೆಂಗಳೂರು, ಜು.10-ಸಂವಿಧಾನ ವಿಧಾನಸಭಾಧ್ಯಕ್ಷರಿಗೆ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಜನರ ಅಹವಾಲನ್ನು ಆಲಿಸಿ ಶಾಸಕರ ರಾಜೀನಾಮೆ ಅಂಗೀಕರಿಸುವ, ತಿರಸ್ಕರಿಸುವ ಹಕ್ಕು ನೀಡಿದ್ದಲ್ಲಿ ಕೂಡಲೇ ಸಾರ್ವಜನಿಕ ಪ್ರಕಟಣೆ ಹೊರಡಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಜಯಪ್ರಕಾಶ್ ವಿಚಾರ ವೇದಿಕೆಯ ಅಧ್ಯಕ್ಷ ಬಿ.ಎಂ ಶಿವಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೈತ್ರಿ ಸರ್ಕಾರದ 14 ಮಂದಿ ಶಾಸಕರು ರಾಜೀನಾಮೆ ನೀಡಿದ್ದು, ರಾಜಕಾರಣಿಗಳನ್ನು ಸಾರ್ವಜನಿಕರು ಅನುಮಾನದ ದೃಷ್ಟಿಯಿಂದ ನೋಡುವ ಪರಿಸ್ಥಿತಿ ಎದುರಾಗಿದೆ. ಶಾಸಕರ ಹೇಳಿಕೆಯ ಪ್ರಕಾರ ತಮ್ಮ ಕ್ಷೇತ್ರದ ಅಭಿವೃದ್ಧಿಯ ಕಡೆಗಣನೆ, ತಾರತಮ್ಯ ಇತ್ಯಾದಿಗಳು ರಾಜೀನಾಮೆಗೆ ಕಾರಣವಾಗಿದೆ.

ಆದರೆ ವಿಧಾನಸಭಾಧ್ಯಕ್ಷರು ರಾಜೀನಾಮೆ ಅಂಗೀಕರಿಸದೆ ಕೆಲವು ಕಾರಣಗಳನ್ನು ನೀಡಿ ಮುಂದೂಡಿದ್ದಾರೆ. ಇದರಿಂದ ಪ್ರಜಾ ತಂತ್ರ ವ್ಯವಸ್ಥೆಯ ಬಗ್ಗೆ ಸಂಶಯ ಮೂಡುವಂತಾಗಿದೆ ಎಂದು ಹೇಳಿದರು.

ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ಹೇಳಿದ ಕೆಲವು ಸಮ್ಮಿಶ್ರ ಸರ್ಕಾರದ ಮುಖಂಡರು ನೈತಿಕತೆ ಮರೆತು ಮತ್ತೆ ವಾಪಸ್‍ಬನ್ನಿ. ಎಲ್ಲ ಪದವಿ ಸೌಲಭ್ಯ ನೀಡುವುದಾಗಿ ಬಹಿರಂಗವಾಗಿ ಆಹ್ವಾನಿಸಿದ್ದಾರೆ. ಓಡಿ ಹೋದ ಕುದುರೆಗೆ ಹುಲ್ಲಿನ ಆಸೆ ತೋರಿಸಿ ಜನರ ಹಿತವನ್ನು ಮರೆತು ಅಧಿಕಾರದ ಆಸೆ ತೋರಿಸುತ್ತಿರುವುದು ಖಂಡನಿಯ ಎಂದು ತಿಳಿಸಿದರು.

ವಿಧಾನಸಭಾಧ್ಯಕ್ಷ ಮಾಧ್ಯಮದ ಮೂಲಕ ಮಾತನಾಡಿ, ಮರುಚುನಾವಣೆಯಿಂದಾಗುವ ತೆರಿಗೆದಾರನ ಆರ್ಥಿಕ ಹೊರೆಯ ಬಗ್ಗೆ ದೂರು ಬಂದಿದ್ದು ಅದನ್ನು ಆಲಿಸಿ ಶಾಸಕರ ರಾಜೀನಾಮೆ ಅಂಗೀಕರಿಸುವ ಬಗ್ಗೆ ನಿರ್ಣಯ ಕೈಗೊಳ್ಳುತ್ತೇನೆ ಎಂದು ತಿಳಿಸಿರುವುದು ಶಾಘ್ಲನೀಯ ಎಂದರು.

ಕೊಡಲೇ ಸಾರ್ವಜನಿಕ ಪ್ರಕಟಣೆ ಹೊರಡಿಸಿ ಆಯಾ ಶಾಸಕರ ಕ್ಷೇತ್ರದ ಎಲ್ಲ ಮತದಾರರ ಅಭಿಪ್ರಾಯವನ್ನು ಆಲಿಸಿ ಬಹುಮತದಾರರ ಅಭಿಪ್ರಾಯದಂತೆ ರಾಜೀನಾಮೆ ಅಂಗೀಕರಿಸುವುದು, ತಿರಸ್ಕರಿಸುವುದರ ತೀರ್ಮಾನಿಸಬೇಕು ಎಂದು ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ