ವಿಶ್ವಸಂಸ್ಥೆ, ಜು.10– ಭಯೋತ್ಪಾದನೆ ಮತ್ತು ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ವಾಕ್ಪ್ರಹಾರ ಮುಂದುವರಿಸಿರುವ ಭಾರತ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿಯೂ ಇಸ್ಲಾಮಾಬಾದ್ ಮೇಲೆ ವಾಗ್ದಾಳಿ ನಡೆಸಿದೆ.
ಭೂಗತ ಪಾತಕ ದಾವೂದ್ ಇಬ್ರಾಹಿಂ ಸುರಕ್ಷಿತ ಸ್ವರ್ಗ(ಪಾಕಿಸ್ತಾನ)ದಿಂದ ನಡೆಸುತ್ತಿರುವ ಅಕ್ರಮ ಚಟುವಟಿಕೆಗಳಿಂದ ನೈಜ ಅಪಾಯ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿರುವ ಭಾರತ, ಡಿ-ಕಂಪನಿ(ದಾವೂದ್ ಒಡೆತನದ ಸಂಸ್ಥೆ), ಜೈಷ್-ಎ-ಮಹಮದ್(ಜೆಇಎಂ) ಮತ್ತು ಲಷ್ಕರ್-ಎ-ತೈಬಾ(ಎಲ್ಇಟಿ) ಸಂಘಟನೆಗಳು ಒಡ್ಡುತ್ತಿರುವ ಆತಂಕಗಳನ್ನು ಮೆಟ್ಟಿ ನಿಲ್ಲಬೇಕೆಂದು ಕರೆ ನೀಡಿದೆ.
ಎನ್ಎನ್ಎಸ್ಸಿ ಸಭೆಯಲ್ಲಿ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಆತಂಕ: ಅಂತಾರಾಷ್ಟ್ರೀಯ ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧಗಳ ನಡುವೆ ಸಂಪರ್ಕ ವಿಷಯದ ಮೇಲೆ ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಶಾಶ್ವತ ರಾಯಭಾರಿ ಸೈಯದ್ ಅಕ್ಬರುದ್ದೀನ್, ಪಾಕ್ ವಿರುದ್ಧ ಮತ್ತೊಮ್ಮೆ ಮೊನಚು ದಾಳಿ ನಡೆಸಿದರು. ದಾವೂದ್ ತನ್ನ ದೇಶದಲ್ಲೇ ಇದ್ದರೂ ಕೂಡ ಆ ದೇಶ ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ ಎಂದು ಕಟುವಾಗಿ ಟೀಕಿಸಿದರು.
ಭಯೋತ್ಪಾದನೆ ಸಂಘಟನೆಗಳು ಮತ್ತು ಕ್ರಿಮನಲ್ ಗ್ಯಾಂಗ್ಗಳು ಪರಸ್ಪರ ಕೈ ಜೋಡಿಸಿವೆ. ಉಗ್ರಗಾಮಿ ಸಂಘಟನೆಗಳು ಲಾಭದಾಯಕ ಕ್ರಿಮಿನಲ್ ಚಟುವಟಿಕೆಗಳಲ್ಲಿ ಶಾಮೀಲಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಉಗ್ರಗಾಮಿ ಚಟುವಟಿಕೆಗಳಿಗೆ ಹಣಕಾಸು ಕ್ರೋಢೀಕರಿಸಲು ಅಪರಾಧ ಕೃತ್ಯಗಳು ಮತ್ತು ಮಾನವ ಕಳ್ಳಸಾಗಣೆಕೆಯಲ್ಲಿ ತೊಡಗಿವೆ ಎಂದು ಅವರು ಆರೋಪಿಸಿದರು.
ಅದೇ ರೀತಿ ಕ್ರಿಮಿನಲ್ ಗ್ಯಾಂಗ್ಗಳೂ ಕೂಡ ಉಗ್ರರೊಂದಿಗೆ ಕೈಜೋಡಿಸಿದ್ದಾರೆ. ಆ ಮೂಲಕ ನಕಲಿ ನೋಟು ಚಲಾವಣೆ, ಅಕ್ರಮ ಹಣಕಾಸು ಪೂರೈಕೆ, ಶಸ್ತ್ರಾಸ್ತ್ರ ಕಳ್ಳಸಾಗಣೆ, ಡ್ರಗ್ಸ್ ಸ್ಮಗ್ಲಿಂಗ್, ಮತ್ತು ಗಡಿಯಾದ್ಯಂತ ಭಯೋತ್ಪಾದಕರನ್ನು ನುಸುಳಿಸುವಿಕೆಗೆ ಕುಮ್ಮಕ್ಕು ನೀಡುತ್ತಿವೆ ಎಂದು ಅಕ್ಬರುದ್ದೀನ್ ಆಪಾದಿಸಿದರು.
ದಾವೂದ್ ಇಬ್ರಾಹಿಂಗೆ ಸೇರಿದ ಕ್ರಿಮಿನಲ್ ಸಿಂಡಿಕೇಟ್ ಡಿ-ಕಂಪನಿ ಎಂಬ ಭಯೋತ್ಪಾದಕರ ಜಾಲವಾಗಿ ಮಾರ್ಪಾಡಾಗಿರುವುದನ್ನು ನಾನು ನೋಡಿದ್ದೇವೆ. ಸುರಕ್ಷಿತ ಸ್ವರ್ಗದಿಂದ ಡಿ-ಕಂಪನಿ, ಜೆಇಎಂ ಮತ್ತು ಎಲ್ಇಟಿಗಳ ಆತಂಕವನ್ನು ನಿಭಾಯಿಸುವತ್ತ ದೇಶಗಳು ಒಗ್ಗೂಡಬೇಕು ಎಂದು ಅವರು ಸಲಹೆ ಮಾಡಿದರು.