ಬೆಂಗಳೂರು, ಜು.10- ಅಕ್ಕ-ಪಕ್ಕದ ಎರಡು ಬಹು ಮಹಡಿ ಕಟ್ಟಡಗಳು ಕುಸಿದು ಮಗು ಸೇರಿದಂತೆ ಐವರು ಸಾವನ್ನಪ್ಪಿದ್ದು , ಅವಶೇಷಗಳಡಿ ಸಿಲುಕಿಕೊಂಡಿದ್ದ ಆರು ಮಂದಿಯನ್ನು ರಕ್ಷಿಸಲಾಗಿದೆ. ಅವಶೇಷಗಳಡಿ ಸಿಲುಕಿಕೊಂಡಿರುವವರ ಮತ್ತಿತರರ ರಕ್ಷಣಾ ಕಾರ್ಯ ಮುಂದುವರೆದಿದೆ.
ದುರಂತದಲ್ಲಿ ಮೃತಪಟ್ಟವರನ್ನು ನಾರಾಯಣ (26), ನಿರ್ಮಲಾ (20), ಮಂಜುದೇವಿ (38) , ಖಗನ್ (48) ಹಾಗೂ 4 ವರ್ಷದ ಅನುಷ್ಕಾ ಎಂದು ಗುರುತಿಸಲಾಗಿದೆ.
ಪುಲಕೇಶಿ ನಗರ ಠಾಣಾ ವ್ಯಾಪ್ತಿಯ ಕುಕ್ಟೌನ್ನಲ್ಲಿ ನಡೆದಿದೆ.ಕುಕ್ಟೌನ್ನ ಎರಡನೆ ಕ್ರಾಸ್ನ ಹಚಿನ್ಸ್ ರಸ್ತೆಯಲ್ಲಿರುವ 4 ಅಂತಸ್ತಿನ ಸಾಯಿ ಆದಿ ಅಂಬಾಲ್ ಅಪಾರ್ಟ್ಮೆಂಟ್ ಹಾಗೂ ಪಕ್ಕದ ನಿರ್ಮಾಣ ಹಂತದಲ್ಲಿರುವ ಮೂರಂತಸ್ತಿನ ಕಟ್ಟಡ ನಿನ್ನೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕುಸಿದು ಬಿದ್ದು ಈ ದುರ್ಘಟನೆ ಸಂಭವಿಸಿದೆ.
ಅಂಬಾಲ್ ಅಪಾರ್ಟ್ಮೆಂಟ್ನ ಬೇಸ್ಮೆಂಟ್ನಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಫ್ಯಾಮಿಲಿ ಹಾಗೂ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಮರಗೆಲಸ ಮಾಡುತ್ತಿದ್ದ 13ಕ್ಕೂ ಹೆಚ್ಚು ಮಂದಿ ಬಿಹಾರ, ರಾಜಸ್ತಾನ, ನೇಪಾಳ ಮೂಲದವರು ಸಿಲುಕಿಕೊಂಡಿದ್ದರು.
ಘಟನಾ ಸ್ಥಳಕ್ಕೆ ದೌಡಾಯಿಸಿದ ಎನ್ಡಿಆರ್ಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಅವಶೇಷಗಳಡಿ ಸಿಲುಕಿದ್ದ ಆರು ಮಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು , ಇವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
ಗಾಯಾಳುಗಳಾದ ಉತ್ತಮ್, ಸಂತೋಷ್, ಉಮೇಶ್, ಅಮೀರ್, ಬೆತ್ತಾಂ, ರಾಮ್ ಮತ್ತು ಶಂಭುಕುಮಾರ್ ಎಂಬುವರನ್ನು ರಕ್ಷಿಸಿ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಿರ್ಮಾಣ ಹಂತದ ಕಟ್ಟಡದಲ್ಲಿದ್ದ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ. ಕಾರ್ಪೆಂಟರ್ ಮೇಸ್ತ್ರಿ ರಾಮಲಿಂಗಂ ಎಂಬುವರು ಅವಶೇಷಗಳಡಿ ಸಿಲುಕಿಕೊಂಡಿರುವ ಸಾಧ್ಯತೆ ಇದೆ. ಅವಶೇಷಗಳಡಿ ಇರುವ ಇಬ್ಬರು ಕಾರ್ಮಿಕರ ಜತೆ ಅಗ್ನಿಶಾಮಕ ಸಿಬ್ಬಂದಿ ಮಾತನಾಡುತ್ತಿದ್ದು , ಅವರನ್ನು ರಕ್ಷಿಸಲು ಹರಸಾಹಸ ಮಾಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವ ಕೆ.ಜೆ.ಜಾರ್ಜ್, ಮೇಯರ್ ಗಂಗಾಂಬಿಕೆ, ಉಪ ಮೇಯರ್ ಭದ್ರೇಗೌಡ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಕ್ರಮ ಕಟ್ಟಡಗಳ ಪತ್ತೆಗೆ ಡಿಸಿಎಂ ಸೂಚನೆ: ಅನುಮತಿ ಪಡೆಯದೆ ಹೆಚ್ಚುವರಿ ಮಹಡಿ ನಿರ್ಮಿಸಲು ಮುಂದಾಗಿರುವುದೇ ಕಟ್ಟಡ ಕುಸಿತಕ್ಕೆ ಪ್ರಮುಖ ಕಾರಣ. ಕಟ್ಟಡಕ್ಕೆ ಸಮರ್ಪಕವಾದ ಮೆಟಿರಿಯಲ್ ಬಳಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು.ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಗೆ ಸೂಚನೆ ನೀಡಿದ್ದೇನೆ ಎಂದು ಪರಮೇಶ್ವರ್ ತಿಳಿಸಿದರು.
ಕಟ್ಟಡದ ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯ ನಡೆಯುತ್ತಿದ್ದು , ರಕ್ಷಿಸಲ್ಪಟ್ಟ ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ ನೀಡಲಾಗುವುದು.ಗಾಯಗೊಂಡಿರುವವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಬಿಬಿಎಂಪಿ ಭರಿಸಲಿದೆ ಎಂದು ಅವರು ಹೇಳಿದರು.
ಬೆಂಗಳೂರು ನಗರದಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದ್ದು , ಅಂತಹ ಕಟ್ಟಡಗಳನ್ನು ಗುರುತಿಸಿ ತೆರವುಗೊಳಿಸುವಂತೆಯೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಡಿಸಿಎಂ ತಿಳಿಸಿದರು.
ಶಿಸ್ತು ಕ್ರಮ: ಕಳಪೆ ಗುಣಮಟ್ಟದ ಕಟ್ಟಡ ನಿರ್ಮಿಸಿದ ಮಾಲೀಕರು ಹಾಗೂ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೊಟ್ಟ ಎಂಜಿನಿಯರ್ಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಮೇಯರ್ ಗಂಗಾಂಬಿಕೆ ಇಂದಿಲ್ಲಿ ತಿಳಿಸಿದರು.
ಎರಡು ಬಹುಮಹಡಿ ಕಟ್ಟಡ ಕುಸಿದು ನಾಲ್ವರು ಕಾರ್ಮಿಕರು ಮೃತಪಟ್ಟ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಟ್ಟಡ ನಿರ್ಮಾಣ ಮಾಡಿರುವ ಜಾಗ ಜೌಗು ಪ್ರದೇಶವೆಂಬ ಮಾಹಿತಿ ಬಂದಿದೆ. ಮಾಲೀಕರು ಅನಧಿಕೃತವಾಗಿ ಒಂದು ಕಟ್ಟಡವನ್ನು ಹೆಚ್ಚಾಗಿ ನಿರ್ಮಾಣ ಮಾಡಿರುವ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಅವರು ವಿವರಣೆ ನೀಡಿದರು.
ಮೂರು ಅಂತಸ್ತಿಗೆ ಮಾತ್ರ ಅನುಮತಿ ಪಡೆದು ಅನಧಿಕೃತವಾಗಿ ನಾಲ್ಕು ಅಂತಸ್ತು ನಿರ್ಮಿಸುವುದರ ಜತೆಗೆ ಅಡಿಪಾಯದ ಗುಣಮಟ್ಟ ಕಳಪೆಯಾಗಿದೆ. ಹೀಗಾಗಿ ಮಾಲೀಕರ ವಿರುದ್ಧ ಹಾಗೂ ಅಕ್ರಮಕ್ಕೆ ಸಹಕಾರ ನೀಡಿದ ಎಂಜಿನಿಯರ್ಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.
ದುರಂತದಲ್ಲಿ ಮೃತಪಟ್ಟವರಿಗೆ ಬಿಬಿಎಂಪಿ ವತಿಯಿಂದ 5 ಲಕ್ಷ ಪರಿಹಾರ ಕೊಡಿಸುವುದರ ಜತೆಗೆ ಕಟ್ಟಡ ಮಾಲೀಕನಿಂದಲೂ ಪರಿಹಾರ ಕೊಡಿಸಲಾಗುವುದು ಎಂದರು.
ಕಟ್ಟಡ ಕುಸಿತದ ನಿಖರ ಕಾರಣ ಪತ್ತೆಹಚ್ಚಲು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಗಂಗಾಂಬಿಕೆ ಹೇಳಿದರು.