ಬೆಂಗಳೂರು, ಜು.10-ಸಮ್ಮಿಶ್ರ ಸರ್ಕಾರ ಅತಂತ್ರಕ್ಕೆ ಸಿಲುಕಿರುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಪರಸ್ಪರ ಕೆಸರರೆಚಾಟದಲ್ಲಿ ತೊಡಗಿದ್ದಾರೆ.
ಸಚಿವ ಡಿ.ಕೆ.ಸಶಿವಕುಮಾರ್ ಅವರು ಅತೃಪ್ತ ಜೊತೆ ಸಂಧಾನಕ್ಕಾಗಿ ಮುಂಬೈಗೆ ತೆರಳಿರುವ ಬಗ್ಗೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಮಾರ ಕೃಪಾ ಅತಿಥಿ ಗೃಹದಲ್ಲಿ ಕಾಂಗ್ರೆಸ್‍ನ ಹಿರಿಯ ನಾಯಕರ ಸಭೆಯಲ್ಲಿ ಸಿದ್ದರಾಮಯ್ಯ ಅವರು, ತಮ್ಮ ಅಸಮಾಧಾನಹೊರಹಾಕಿದ್ದು, ಶಾಸಕಾಂಗ ಪಕ್ಷದ ನಾಯಕನಾದ ನನ್ನ ಗಮನಕ್ಕೆ ತರದೆ ಡಿ.ಕೆ.ಶಿವಕುಮಾರ್ ಮುಂಬೈಗೆ ಹೋಗಿದ್ದು ಹೇಗೆ? ಬಹಳಷ್ಟು ಬೆಳವಣಿಗೆಗಳು ನನ್ನ ಅರಿವಿಗೆ ಬಾರದೆ ನಡೆಯುತ್ತಿವೆ.
ಇದರಿಂದಾಗಿ ಮುಂದಿನ ದಿನಗಳಲ್ಲಿ ಬೇರೆ ರೀತಿಯ ಪರಿಣಾಮಗಳು ಉಂಟಾದರೆ ಅದಕ್ಕೆ ನಾನು ಹೊಣೆ ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ನಿನ್ನೆ ತಡರಾತ್ರಿಯವರೆಗೂ ನಡೆದ ಸಭೆಯಲ್ಲಿ ಸಮ್ಮಿಶ್ರ ಸರ್ಕಾರದ ವಿರುದ್ಧ ರಾಜೀನಾಮೆ ಕೊಟ್ಟಿರುವ ಶಾಸಕರೆಲ್ಲ ನಿಮ್ಮ ಆತ್ಮೀಯ ಬಳಗದಲ್ಲಿದ್ದವರು. ಅವರ ಮನವೊಲಿಸಿ ವಾಪಸ್ ಕರೆತನ್ನಿ ಎಂದು ಹಿರಿಯ ನಾಯಕರಾದ ಗುಲಾಮ್ ನಬಿ ಆಜಾದ್ ಸೂಚನೆ ನೀಡಿದರು.
ಆದರೆ ಇದಕ್ಕೆ ಒಪ್ಪದ ಸಿದ್ದರಾಮಯ್ಯ ಅವರು, ಪರಿಸ್ಥಿತಿ ಕೈ ಮೀರಿ ಹೋಗಿದೆ. ಈ ಮೊದಲೇ ಹಲವಾರು ಬಾರಿ ನಾನು ಎಚ್ಚರಿಕೆ ನೀಡಿದ್ದೆ. ಕಾಂಗ್ರೆಸ್‍ನ ಹೈಕಮಾಂಡ್ ಮತ್ತು ಜೆಡಿಎಸ್ ನಾಯಕತ್ವ ನನ್ನ ಮಾತುಗಳನ್ನು ಕೇಳಲಿಲ್ಲ. ಈಗ ಶಾಸಕರು ಸ್ವಂತನಿರ್ಧಾರ ತೆಗೆದುಕೊಂಡು ರಾಜೀನಾಮೆ ನೀಡಿದ್ದಾರೆ.
ಬಹಿರಂಗವಾಗಿ ನನ್ನ ವಿರುದ್ಧವೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪರಿಸ್ಥಿತಿ ಕೈ ಮೀರಿ ಹೋಗಿದೆ ಎಂದು ಹೇಳಿದರು ಎನ್ನಲಾಗಿದೆ.
ಸಿದ್ದರಾಮಯ್ಯ ಅವರು ಕೈ ಚೆಲ್ಲಿದ ನಂತರ ಗುಲಾಮ್ ನಬಿ ಅಜಾದ್ ಮತ್ತು ವೇಣುಗೋಪಾಲ್ ಅವರು ತಮ್ಮದೇ ಶೈಲಿಯ ಕಾರ್ಯಾಚರಣೆ ರೂಪಿಸಿದ್ದು, ಸಂಧಾನಕ್ಕಾಗಿ ಡಿ.ಕೆ.ಶಿವಕುಮಾರ್ ಅವರನ್ನು ಮುಂಬೈಗೆ ಕಳುಹಿಸಿದ್ದರು ಎನ್ನಲಾಗಿದೆ.
ಆದರೆ ಈ ಕುರಿತು ನಮಗೆ ಮಾಹಿತಿ ನೀಡಲಿಲ್ಲ ಎಂಬ ಕಾರಣಕ್ಕಾಗಿ ಸಿದ್ದರಾಮಯ್ಯ ಹಿಂದಿನ ಸಭೆಯಲ್ಲಿ ಅಸಮಾಧಾನ ಹೊರಹಾಕಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿ ಕೆಲ ಕಾಲ ಮಾತಿನ ಚಕಮಕಿ ನಡೆದಿದೆ ಎಂದು ತಿಳಿದುಬಂದಿದೆ.