ಬೆಂಗಳೂರು, ಜು.10- ರಾಜಾಜಿನಗರದ ಡಾ.ಎಂ.ಸಿ.ಮೋದಿ ರಸ್ತೆ ಜಂಕ್ಷನ್ ಬಳಿ ಮೇಯರ್ ಅನುದಾನದಡಿ ಬಸವೇಶ್ವರರ ಪುತ್ಥಳಿ ನಿರ್ಮಿಸಲಾಗುತ್ತಿದ್ದು, ಅಕ್ಟೋಬರ್ ವೇಳೆಗೆ ಪ್ರತಿಮೆ ಅನಾವರಣಗೊಳಿಸಲಾಗುವುದು ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.
ವೆಸ್ಟ್ ಆಫ್ ಕಾರ್ಡ್ ರೋಡ್ ಹಾಗೂ ಮೋದಿ ಆಸ್ಪತ್ರೆ ರಸ್ತೆಯ ಜಂಕ್ಷನ್ ಬಳಿ ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪನೆಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ಬಸವೇಶ್ವರ ನಗರದಲ್ಲಿ ವಿಶ್ವಗುರು ಬಸವಣ್ಣನವರ ಪ್ರತಿಮೆ ನಿರ್ಮಾಣ ಮಾಡಬೇಕೆಂಬುದು ಸ್ಥಳೀಯರು ಹಾಗೂ ಸಾರ್ವಜನಿಕರ ಆಶಯವಾಗಿತ್ತು. ಅವರ ಕನಸು ಇಂದು ನನಸಾಗುತ್ತಿದೆ.ಇಲ್ಲಿ ಪುತ್ಥಳಿ ನಿರ್ಮಾಣ ಮಾಡುವುದರಿಂದ ಈ ಭಾಗದಲ್ಲಿ ಸಂಚರಿಸುವ ಎಲ್ಲರಿಗೂ ಆಶೀರ್ವಾದ ಸಿಗುತ್ತದೆ ಎಂದು ಹೇಳಿದರು.
ಬಸವೇಶ್ವರರ ಪುತ್ಥಳಿಯನ್ನು 73 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಎಲ್ಲರೂ ಅವರ ತತ್ವ-ಆದರ್ಶಗಳನ್ನು ಪಾಲನೆ ಮಾಡಬೇಕೆಂದು ಸಲಹೆ ನೀಡಿದರು.
ಬಸವೇಶ್ವರ ಪುತ್ಥಳಿ ನಿರ್ಮಾಣ ಸಂದರ್ಭದಲ್ಲಿ ಅಧಿಕಾರಿಗಳು ಜಾಗ್ರತೆ ವಹಿಸಬೇಕು. ತ್ವರಿತವಾಗಿ ಕಾಮಗಾರಿ ಮುಗಿಸಬೇಕೆಂದು ಗಂಗಾಂಬಿಕೆ ಸೂಚಿಸಿದರು.
ಶಾಸಕ ಸುರೇಶ್ಕುಮಾರ್ ಮಾತನಾಡಿ, ಬಸವೇಶ್ವರ ನಗರದಲ್ಲಿ ಬಸವೇಶ್ವರರ ಪುತ್ಥಳಿ ನಿರ್ಮಾಣ ಮಾಡಬೇಕೆಂಬ ಕನಸು ಬಹಳ ಹಿಂದಿನಿಂದಲೂ ಇತ್ತು.
ನಮ್ಮೆಲ್ಲರ ಕನಸು ಈಗ ನನಸಾಗುತ್ತಿದೆ. ಕಳೆದ ಒಂದೂವರೆ ವರ್ಷದ ಹಿಂದೆ ಪ್ರತಿಮೆ ನಿರ್ಮಾಣ ಮಾಡಲು ತೀರ್ಮಾನಿಸಲಾಗಿತ್ತು. ಅದರಂತೆ ಅಮೆರಿಕದ ಸ್ಟ್ಯಾಚ್ಯೂ ಆಫ್ ಲಿಬರ್ಟಿ ಮಾದರಿಯಲ್ಲಿ ಬಸವೇಶ್ವರರ ಪುತ್ಥಳಿ ನಿರ್ಮಾಣವಾಗಲಿದೆ ಎಂದು ಹೇಳಿದರು.
ಬೇಲಿಮಠದ ಶ್ರೀ ಶಿವರುದ್ರ ಮಹಾಸ್ವಾಮೀಜಿ, ಅಲ್ಲಮಗಿರಿಯ ಅಲ್ಲಮಪ್ರಭು ಯೋಗಪೀಠದ ಶ್ರೀ ಬಸವ ಕುಮಾರ ಮಹಾಸ್ವಾಮೀಜಿ, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಹಾಗೂ ಸದಸ್ಯರು, ಸ್ಥಳೀಯ ಮುಖಂಡರು, ಮತ್ತಿತರ ಗಣ್ಯರು ಹಾಜರಿದ್ದರು.