ಶಾಸಕರ ನೇತೃತ್ವದ ಸಮಿತಿ ರಚನೆಗೆ ಕಾನೂನಿನಲ್ಲಿ ಅವಕಾಶವಿಲ್ಲ-ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ

ಬೆಂಗಳೂರು, ಜು.10- ಈಗಾಗಲೇ ವಾರ್ಡ್ ಕಮಿಟಿ ಇರುವುದರಿಂದ ಮತ್ತೆ ಶಾಸಕರ ನೇತೃತ್ವದಲ್ಲಿ ಸಮಿತಿ ಮಾಡುವುದಕ್ಕೆ ಪಕ್ಷಾತೀತವಾಗಿ ವಿರೋಧ ವ್ಯಕ್ತವಾಗಿದ್ದರಿಂದ ನಿರ್ಣಯ ತಿರಸ್ಕøತಗೊಂಡಿತು.

ಬಿಬಿಎಂಪಿ ವಿಶೇಷ ಕೌನ್ಸಿಲ್ ಸಭೆ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಬಿಬಿಎಂಪಿ ವ್ಯಾಪ್ತಿಯಲ್ಲಿ ಶಾಸಕರ ನೇತೃತ್ವದ ಸಮಿತಿ ರಚನೆ ಕುರಿತು ನಿರ್ಣಯ ಮಂಡಿಸಿದರು.ಈ ವೇಳೆ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, ಶಾಸಕರ ನೇತೃತ್ವದ ಸಮಿತಿ ರಚನೆಗೆ ಕಾನೂನಿನಲ್ಲಿ ಅವಕಾಶವಿಲ್ಲ. ಈ ಹಿಂದೆ ಇದೇ ರೀತಿಯ ವಿಚಾರವಾಗಿ ತಮಿಳುನಾಡು ಹೈಕೋರ್ಟ್ ನೀಡಿದ್ದ ತೀರ್ಪನ್ನು ಕೌನ್ಸಿಲ್ ಸಭೆಯಲ್ಲಿ ಅವರು ಓದಿ ಹೇಳಿದರು.

ಈ ಬಗ್ಗೆ ಆರ್ಟಿಕಲ್-243ಡಬ್ಲ್ಯೂ ಸಂವಿಧಾನದಲ್ಲೂ ಉಲ್ಲೇಖವಿದೆ. ಶಾಸಕರ ನೇತೃತ್ವದ ಸಮಿತಿ ರಚನೆಗೆ ಮುನ್ಸಿಪಾಲಿಟಿಗೆ ಮಾತ್ರ ಅಧಿಕಾರವಿದೆ. ರಾಜ್ಯ ಸರ್ಕಾರಕ್ಕಿಲ್ಲ. ಕೂಡಲೇ ಈ ವಿಚಾರ ಕೈಬಿಡಿ ಎಂದು ಒತ್ತಾಯಿಸಿದರು.

ಪದ್ಮನಾಭರೆಡ್ಡಿ ಅವರ ಹೇಳಿಕೆಗೆ ಮಾಜಿ ಮೇಯರ್ ಹಾಗೂ ಕಾಂಗ್ರೆಸ್ ಸದಸ್ಯೆ ಜಿ.ಪದ್ಮಾವತಿ ಕೂಡ ಧ್ವನಿಗೂಡಿಸಿ ಸ್ಥಳೀಯ ಸದಸ್ಯರ ಅಧಿಕಾರ ಮೊಟಕುಗೊಳಿಸುವುದು ಬೇಡ. ಪ್ರಸ್ತಾವನೆ ಕೈಬಿಡಿ ಎಂದು ಮನವಿ ಮಾಡಿದರು. ಇದಕ್ಕೆ ಪಕ್ಷಾತೀತವಾಗಿ ಸದಸ್ಯರು ಧ್ವನಿಗೂಡಿಸಿದರು.
ಕಡೆಗೆ ಶಾಸಕರ ನೇತೃತ್ವದಲ್ಲಿ ಕಮಿಟಿ ರಚನೆಯ ನಿರ್ಣಯವನ್ನು ಕೈ ಬಿಡಲಾಯಿತು.

ಗದ್ದಲ: ನಗರದ ರಸ್ತೆಯೊಂದರ ಹೆಸರು ಬದಲಾಯಿಸುವ ವಿಚಾರದಲ್ಲಿ ಸಭೆಯಲ್ಲಿ ಗದ್ದಲ ಏರ್ಪಟ್ಟಿತು. ಆಲೂರು ವೆಂಕಟರಾಯರ ರಸ್ತೆ ಹೆಸರನ್ನು ಬದಲಾಯಿಸುವ ಬಗ್ಗೆ ಚರ್ಚೆ ಪ್ರಾರಂಭವಾಗುತ್ತಿದ್ದಂತೆ ಬಿಜೆಪಿಯವರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಆಲೂರು ವೆಂಕಟರಾಯರಿಗೆ ಟಿಪ್ಪು ಹೆಸರಿಡಲು ಈ ಹಿಂದೆ ಮನವಿ ಬಂದಿತ್ತು. ಇಂದು ಸಭೆಯಲ್ಲಿ ಆಡಳಿತ ಪಕ್ಷ ಈ ಬಗ್ಗೆ ವಿಷಯ ಪ್ರಸ್ತಾಪಿಸಿತು. ಕೂಡಲೇ ಬಿಜೆಪಿಯವರು ಆಕ್ರೋಶ ವ್ಯಕ್ತಪಡಿಸಿ ಯಾವುದೇ ಕಾರಣಕ್ಕೂ ಆಲೂರು ವೆಂಕಟರಾಯ ಹೆಸರನ್ನು ಬದಲಾಯಿಸಬಾರದೆಂದು ಪಟ್ಟು ಹಿಡಿದರು. ಮೇಯರ್ ಗಂಗಾಂಬಿಕೆ ತಕ್ಷಣ ಈ ವಿಷಯವನ್ನು ಮುಂದೂಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ