ನವದೆಹಲಿ, ಜು.9-ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಾಲಲಿತಾ ಸುಮಾರು 2 ಕೋಟಿ ರೂ.ಗಳ ಅಘೋಷಿತ ಉಡುಗೊರೆಗಳನ್ನು ಸ್ವೀಕರಿಸಿದ ಪ್ರಕರಣವನ್ನು ವಜಾಗೊಳಿಸಿರುವ ಮದ್ರಾಸ್ ಹೈಕೋರ್ಟ್ ಆದೇಶದಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಇಂದು ಸ್ಪಷ್ಟಪಡಿಸಿದೆ.
ಈ ಪ್ರಕರಣದಲ್ಲಿ ಜಯಾ ಅವರೊಂದಿಗೆ ಮಾಜಿ ಸಚಿವ ಅಳಜು ತಿರುನವಕ್ಕರಸು ಮತ್ತು ಈಗಿನ ಎಐಎಡಿಎಂಕೆ ಸರ್ಕಾರದ ಶಾಲಾ ಶಿಕ್ಷಣ ಸಚಿವ ಕೆ.ಎ. ಸೆಂಗೊಟ್ಟಯನ್ ಆರೋಪಿಗಳಾಗಿದ್ದರು. ಇವರಲ್ಲಿ ಜಯಾ ಮತ್ತು ತಿರುವನ್ನಕ್ಕರಸು ಮೃತಪಟ್ಟಿದ್ದಾರೆ.
ಇವರ ವಿರುದ್ಧ ಸಿಬಿಐ ಅಘೋಷಿತ ಉಡುಗೊರೆ ಸ್ವೀಕಾರ ಪ್ರಕರಣಗಳನ್ನು ದಾಖಲಿಸಿತ್ತು. ಇದರ ವಿಚಾರಣೆ ನಡೆಸದಿದ ಮದ್ರಾಸ್ ಹೈಕೋರ್ಟ್ 2011ರಲ್ಲಿ ಈ ಮೂವರ ವಿರುದ್ಧದ ಪ್ರಕರಣವನ್ನು ವಜಾಗೊಳಿಸಿತ್ತು.
ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿರುವ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಭಾನುಮತಿ, ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇಬ್ಬರು ಈಗ ಬದುಕಿಲ್ಲ.
ಈ ವಿಷಯದಲ್ಲಿ ಮೇಲ್ಮನವಿ ಸಲ್ಲಿಸಲು ಸಾಕಷ್ಟು ವಿಳಂಬವಾಗಿದೆ ಎಂಬುದು ಹೈಕೋರ್ಟ್ಗೂ ಮನವರಿಕೆಯಾಗಿದೆ. 2011ರ ಈ ಆದೇಶದಲ್ಲಿ ಮತ್ತೆ ಹಸ್ತಕ್ಷೇಪ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.