ಬೆಂಗಳೂರು, ಜು.9- ಬಹುಕೋಟಿ ಐಎಂಎ ವಂಚನೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಶಿವಾಜಿನಗರ ಕ್ಷೇತ್ರದ ಶಾಸಕ ರೋಷನ್‍ಬೇಗ್ ಅವರಿಗೆ ಎಸ್‍ಐಟಿ ನೋಟಿಸ್ ನೀಡಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ಗುರುವಾರ (ಜು.11)ರಂದು ಎಸ್‍ಐಟಿ ಮುಂದೆ ಹಾಜರಾಗುವಂತೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೇಳಿದರು.
ಐಎಂಎ ಸಂಸ್ಥೆ ಮುಖ್ಯಸ್ಥ ಮಹಮ್ಮದ್ ಮನ್ಸೂರ್‍ಖಾನ್ ದೇಶಬಿಟ್ಟು ಪರಾರಿಯಾದ ನಂತರ ಬಿಡುಗಡೆ ಮಾಡಿದ್ದ ಮೊದಲ ಆಡಿಯೋದಲ್ಲಿ ಶಿವಾಜಿನಗರ ಕ್ಷೇತ್ರದ ಶಾಸಕರು 400 ಕೋಟಿ ರೂ.ಪಡೆದುಕೊಂಡಿದ್ದಾರೆಂದು ಆರೋಪಿಸಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿರುವ ಎಸ್‍ಐಟಿ, ವಿಚಾರಣೆಗೆ ಹಾಜರಾಗುವಂತೆ ರೋಷನ್‍ಬೇಗ್ ಅವರಿಗೆ ನೋಟಿಸ್ ಜಾರಿಮಾಡಿದೆ.
ಅಲ್ಲದೆ, ಮನ್ಸೂರ್‍ಖಾನ್ ಈಗಾಗಲೇ ಆಡಿಯೋದಲ್ಲಿ ಆರೋಪಿಸಿದ್ದಂತಹ ಬಿಡಿಎ ಎಕ್ಸಿಕ್ಯೂಟಿವ್ ಎಂಜಿನಿಯರ್ ಕುಮಾರ್ ಅವರನ್ನು ಎಸ್‍ಐಟಿ ಬಂಧಿಸಿ ವಿಚಾರಣೆ ನಡೆಸಿದೆ.
ಮುಂದುವರೆದಂತೆ ಈ ಪ್ರಕರಣದಲ್ಲಿ ಗ್ರಾಮಲೆಕ್ಕಿಗ ಮತ್ತು ಉಪವಿಭಾಗಾಧಿಕಾರಿ ನಾಗರಾಜ್ ಮತ್ತು ನಗರ ಜಿಲ್ಲಾಧಿಕಾರಿ ವಿಜಯ್‍ಶಂಕರ್ ಅವರನ್ನೂ ಸಹ ಈಗಾಗಲೇ ಎಸ್‍ಐಟಿ ಬಂಧಿಸಿದೆ.