ಕಾಂಗ್ರೇಸ್ಸಿನ ಎಚ್ಚರಿಕೆಗೆ ಕ್ಯಾರೆ ಎನ್ನದ ಭಿನ್ನಮತೀಯ ಶಾಸಕರು

ಮುಂಬೈ,ಜು.9– ಸರ್ಕಾರದ ವಿರುದ್ದ ತೊಡೆ ತಟ್ಟಿ ರಾಜೀನಾಮೆ ನೀಡಿರುವ ಶಾಸಕರು ತಕ್ಷಣವೇ ಹಿಂತಿರುಗದಿದ್ದರೆ ಅನರ್ಹಗೊಳಿಸಲಾಗುವುದು ಎಂಬ ಕಾಂಗ್ರೆಸ್‍ನ ಎಚ್ಚರಿಕೆಗೆ ಕ್ಯಾರೆ ಎನ್ನದ ಭಿನ್ನಮತೀಯ ಶಾಸಕರು ಯಾವುದೇ ಕಾರಣಕ್ಕೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಕೂಡಲೇ ವಾಪಸ್ ಬರದಿದ್ದರೆ ರಾಜೀನಾಮೆ ನೀಡಿರುವ ಶಾಸಕರನ್ನು ಅನರ್ಹಗೊಳಿಸಲಾಗುವುದು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿ, ಸ್ಪೀಕರ್ ಅವರಿಗೆ ದೂರು ನೀಡಿದ್ದಾರೆ.

ಇದರ ಬೆನ್ನಲ್ಲೇ ಮುಂಬೈ ಹೋಟೆಲ್‍ನಲ್ಲಿ ಬೀಡುಬಿಟ್ಟಿರುವ ಹತ್ತು ಮಂದಿ ಶಾಸಕರು ತುರ್ತು ಪತ್ರಿಕಾಗೋಷ್ಠಿಯನ್ನು ನಡೆಸಿ ಯಾವುದೇ ಕಾರಣಕ್ಕೂ ನಾವು ರಾಜೀನಾಮೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಈಗಾಗಲೇ ನಾವು ಬಹುದೂರ ಸಾಗಿದ್ದೇವೆ. ನಮಗೆ ಮಂತ್ರಿ ಸ್ಥಾನ ಕೊಟ್ಟರೂ ಈಗಾಗಲೇ ತೆಗೆದುಕೊಂಡಿರುವ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಪುನರುಚ್ಚರಿಸಿದರು.

ನಾವ್ಯಾರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟಿಲ್ಲ. ರಾಜೀನಾಮೆ ನೀಡಿರುವುದು ಶಾಸಕ ಸ್ಥಾನಕ್ಕೆ. ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ನಮ್ಮ ಶಾಸಕ ಸ್ಥಾನ ಅನರ್ಹಗೊಂಡರೂ ಸರಿಯೇ. ಬೇಕಾದರೆ ಈಗಲೇ ರಾಜಕಾರಣ ಬಿಡುತ್ತೇವೆ. ಆದರೆ ಹಿಂದೆ ಸರಿಯುವ ಪ್ರಶ್ನೆ ಬರುವುದಿಲ್ಲ. ನಾವು ಅಧಿಕಾರಕ್ಕಾಗಿ ಯಾರಿಗೂ ಬ್ಲಾಕ್‍ಮೇಲ್ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, ನಾವ್ಯಾರು ಬಿಜೆಪಿಯ ಹಣದಿಂದ ಮುಂಬೈಗೆ ಬಂದು ಉಳಿದುಕೊಂಡಿಲ್ಲ. ನಮಗೆ ಅಂತಹ ಸ್ಥಿತಿಯೂ ಬಂದಿಲ್ಲ. 13 ತಿಂಗಳಿಂದ ಅನುಭವಿಸಿದ ನೋವು, ಸಂಕಷ್ಟ ಎಲ್ಲವನ್ನೂ ನಮ್ಮ ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇವೆ.

ನಾಲ್ಕು ತಿಂಗಳ ಹಿಂದೆಯೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಡಿಸಿಎಂ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಸಚಿವ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ.

ಕ್ಷೇತ್ರದಲ್ಲಿ ಒಂದೇ ಒಂದು ಕೆಲಸವೂ ಆಗಲಿಲ್ಲ. ಇನ್ನು ಸರ್ಕಾರದಲ್ಲಿ ಯಾವ ಕಾರಣಕ್ಕಾಗಿ ಮುಂದುವರೆಯಬೇಕು. ನಾವೆಲ್ಲರೂ ಸ್ವಇಚ್ಛೆಯಿಂದ ಬಂದಿದ್ದೇವೆ.

ನಮಗೆ ಯಾವುದೇ ಬೆದರಿಕೆಯೂ ಇಲ್ಲ. ಯಾರೊಬ್ಬರೂ ಹೆಗಲ ಮೇಲೆ ಗನ್ ಪಾಯಿಂಟ್ ಇಟ್ಟಿಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್ ಆರೋಪಕ್ಕೆ ತಿರುಗೇಟು ನೀಡಿದರು.

30 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ದುಡಿದಿದ್ದೇನೆ. ಪಕ್ಷದ ಏಳಿಗೆಗೆ ನನ್ನದೇ ಆದ ಸೇವೆ ಸಲ್ಲಿಸಿದ್ದೇನೆ. ಪಕ್ಷಕ್ಕೆ ಎಂದೂ ಕೂಡ ದ್ರೋಹ ಮಾಡುವ ಕೆಲಸ ಮಾಡಿಲ್ಲ. ಪಕ್ಷ ವಿರೋಧ ಚಟುವಟಿಕೆ ನಡೆಸಿರುವವರು ಇಂದು ಸಚಿವರಾಗಿದ್ದಾರೆ.

ಇಚ್ಛೆಯಿಂದ ರಾಜೀನಾಮೆ ನೀಡಿರುವಾಗ ಪಕ್ಷಾಂತರ ನಿಷೇಧ ಕಾಯ್ದೆ ಹೇಗೆ ಅನ್ವಯವಾಗುತ್ತದೆ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯನವರು ಜೆಡಿಎಸ್‍ನಿಂದ ಹೊರಬಂದು ಕಾಂಗ್ರೆಸ್ ಸೇರಿದಾಗ ಅವರನ್ನು ನಾವೆಲ್ಲರೂ ಮುಕ್ತ ಮನಸ್ಸಿನಿಂದ ಸ್ವಾಗತಿಸಿದ್ದೆವು. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಅವರ ಗೆಲುವಿಗೆ ನಮ್ಮದು ಕೂಡ ಅಳಿಲು ಸೇವೆ ಇದೆ.

ನೀವು ಕಾಂಗ್ರೆಸ್ ಸೇರಿದಾಗ ಅದು ಪಕ್ಷ ವಿರೋಧಿ ಚಟುವಟಿಕೆಯಾಗುವುದಿಲ್ಲ ಎನ್ನುವುದಾದರೆ ನಮ್ಮದು ಕೂಡ ಹೇಗೆ ಪಕ್ಷ ವಿರೋಧಿ ಚಟುವಟಿಕೆಯಾಗುತ್ತದೆ ಎಂದು ಸೋಮಶೇಖರ್ ಪ್ರಶ್ನಿಸಿದರು.

ಕೆ.ಆರ್.ಪುರಂ ಶಾಸಕ ಭೆರತಿ ಬಸವರಾಜ್ ಮಾತನಾಡಿ, ನಾವು ಮುಂಬೈಗೆ ಆಟವಾಡಲು ಬಂದಿಲ್ಲ. ಅಥವಾ ಇಲ್ಲಿ ಸಾಮಾನುಗಳನ್ನು ಖರೀದಿಸಲು ಬಂದಿಲ್ಲ. ನಾವು ಏನು ಮಾಡುತ್ತಿದ್ದೇವೆ ಎಂಬ ಅರಿವು ನಮಗಿದೆ.

ನಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದರೂ ತೊಂದರೆ ಇಲ್ಲ. ಸಕ್ರಿಯ ರಾಜಕಾರಣ ಬಿಟ್ಟು ಮನೆಗೆ ಹೋಗುತ್ತೇವೆ. ನಾವು ಯಾವುದೇ ಹಿತಾಸಕ್ತಿಗೆ ಬಲಿಯಾಗಿಲ್ಲ. ಮಂತ್ರಿಗಿರಿಗೆ ಲಾಬಿಯನ್ನೂ ಮಾಡಿಲ್ಲ.

ಕ್ಷೇತ್ರದಲ್ಲಿ ಒಂದೂ ಕೆಲಸವೂ ಆಗುತ್ತಿಲ್ಲ. ಕಾರ್ಯಕರ್ತರ ನೋವು ಹೇಳಿಕೊಂಡರೂ ಪ್ರಯೋಜನವಾಗಲಿಲ್ಲ. ದೃಢ ನಿರ್ಧಾರ ಮಾಡಿ ರಾಜೀನಾಮೆ ನೀಡಿದ್ದೇವೆ ಎಂದು ಹೇಳಿದರು.

ನಮ್ಮನ್ನು ಇಲ್ಲಿ ಯಾರೂ ಕೂಡ ಕೂಡಿ ಹಾಕಿಲ್ಲ. ಸ್ಪೀಕರ್ ಯಾವಾಗ ಕರೆದರೂ ಹೋಗಿ ರಾಜೀನಾಮೆ ನೀಡುತ್ತೇವೆ. ನಾವು ಪಕ್ಷ ವಿರೋಧಿ ನಡೆಸಿದ್ದೇವೆ ಎಂದು ಶಾಸಕಾಂಗ ಪಕ್ಷದ ನಾಯಕರು ಹೇಳಿರುವ ಮಾತು ಮನಸಿಗೆ ಬೇಸರ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಬಿ.ಸಿ.ಪಾಟೀಲ್ ಮಾತನಾಡಿ, ನಾವು ಈಗಾಗಲೇ ದೂರ ಸರಿದು ಬಂದಿದ್ದೇವೆ. ದೇಶದ ಕಾನೂನು ಎಲ್ಲರಿಗೂ ಒಂದೇ. ನಮಗೂ ಕಾನೂನು ಗೊತ್ತು. ನೀವು ಅನರ್ಹತೆಯ ಅಸ್ತ್ರ ಹಿಡಿದುಕೊಂಡು ಬೆದರಿಸಿದರೆ ನಾವು ಹೆದರುವವರಲ್ಲ. ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.

ರಮೇಶ್ ಜಾರಕಿಹೊಳಿ ಮಾತನಾಡಿ, ಯಾವ ಕಾರಣಕ್ಕಾಗಿ ರಾಜೀನಾಮೆಯನ್ನು ವಾಪಸ್ ಪಡೆಯೋಲ್ಲ. 10 ಶಾಸಕರು ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದರೆ. ಸ್ಪೀಕರ್ ಬಗ್ಗೆ ಅಪಾರವಾದ ಗೌರವವಿದೆ. ಅವರು ಯಾವಾಗ ಕರೆದರೂ ಹೋಗಲು ಸಿದ್ದರಿದ್ದೇವೆ ಎಂದು ತಿಳಿಸಿರು.

ಮಸ್ಕಿಯ ಪ್ರತಾಪ್ ಗೌಡ ಪಾಟೀಲ್ ಸೇರಿದಂತೆ ಬಹುತೇಕ ಎಲ್ಲ ಶಾಸಕರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

 ವಿಧಾನಸಭೆಯ ಬಲಾಬಲ
ಒಟ್ಟು ಸದಸ್ಯರ ಸಂಖ್ಯೆ- 224
ಹಾಲಿ ಸದಸ್ಯರು- 209
ಬಿಜೆಪಿ 105+2= 107
ಮೈತ್ರಿಕೂಟ= 102
ಕಾಂಗ್ರೆಸ್ -67
ಜೆಡಿಎಸ್-34
ಬಿಎಸ್‍ಪಿ-01
ಸ್ಪೀಕರ್-01
ರಾಜೀನಾಮೆ ನೀಡಿರುವವರು: 14
ಮ್ಯಾಜಿಕ್ ಸಂಖ್ಯೆ 106

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ