ರಾಂಗೈ, ಜು. 8- ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೀಡುತ್ತಿರುವ ಪ್ರಸಾದ ಕಲುಷಿತಗೊಂಡು ಭಕ್ತರು ಅಸ್ವಸ್ಥಗೊಳ್ಳುತ್ತಿರುವ ಪ್ರಕರಣ ಮುಂದುವರೆದಿದೆ.
ಈಶಾನ್ಯ ಪ್ರಾಂತ್ಯದ ಅಸ್ಸಾಂ ರಾಜ್ಯದ ಕಾಮರೂಪ ಜಿಲ್ಲೆಯಲ್ಲಿ ವಿಷ ಪ್ರಸಾದ ಸೇವಿಸಿ ಮಹಿಳೆಯರು, ಮಕ್ಕಳು ಸೇರಿದಂತೆ 150 ಮಂದಿ ಅಸ್ವಸ್ಥರಾಗಿರುವ ಘಟನೆ ನಡೆದಿದೆ.
ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ನೀಡಿದ ಪ್ರಸಾದ ಸೇವಿಸಿದ ಬಳಿಕ ಈ ದುರ್ಘಟನೆ ನಡೆದಿದೆ ಎಂದು ಗ್ರಾಮದ ಮುಖ್ಯಸ್ಥರು ತಿಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸಾದ ಸೇವಿಸಿದ ಬಳಿಕ ಹೊಟ್ಟೆನೋವು, ವಾಂತಿ, ಬೇಧಿ ಕಾಣಿಸಿಕೊಂಡಿದ್ದು, ಅಮಂಗಾನ್ ಸರ್ಕಾರಿ ಆಸ್ಪತ್ರೆಗೆ 150 ಮಂದಿಯನ್ನು ದಾಖಲಿಸಲಾಗಿದೆ. ಇಬ್ಬರ ಪರಿಸ್ಥಿತಿ ಗಂಭೀರವಾಗಿದ್ದು, ಅವರನ್ನು ಗುವಾಹಟಿಯ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಆಸ್ಪತ್ರೆಯಲ್ಲಿರುವವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಎಚ್ಚರಿಕೆ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.