ಸುದ್ಧಿ ಮಾಡುತ್ತಿರುವ ಒಳಚರಂಡಿ ಸ್ವಚ್ಚ ಮಾಡುವ ಯಂತ್ರ ಮಾನವ

ತಿರುವನಂತಪುರಂ/ನವದೆಹಲಿ, ಜು.7-ರಾಜಧಾನಿ ದೆಹಲಿ ಸೇರಿದಂತೆ ದೇಶದ ಮಹಾನಗರದಲ್ಲಿ ಶೌಚಾಗುಂಡಿ(ಸೆಪ್ಟಿಕ್ ಟ್ಯಾಂಕ್) ಮತ್ತು ಮ್ಯಾನ್ ಹೋಲ್‍ಗಳನ್ನು ಸ್ವಚ್ಛಗೊಳಿಸುವಾಗ ಪೌರಕಾರ್ಮಿಕರ ದುರಂತ ಸಾವು-ನೋವು ಪ್ರಕರಣಗಳನ್ನು ತಡೆಗಟ್ಟಲು ಕೇರಳದ ಇಂಜಿನಿಯರ್‍ಗಳು ಅಭಿವೃದ್ಧಿಗೊಳಿಸಿರುವ ರೋಬೋಗಳು ಸುದ್ಧಿ ಮಾಡುತ್ತಿವೆ.

ಕೇರಳದ ಯುವ ಇಂಜಿನಿಯರ್‍ಗಳು ಹುಟ್ಟು ಹಾಕಿರುವ ಜೆನ್ ರೋಬೋಟಿಕ್ಸ್ ಸಂಸ್ಥೆಯಿಂದ ನಿರ್ಮಿಸಿರುವ ಯಂತ್ರ ಮಾನವ ಒಳಚರಂಡಿಗೆ ಇಳಿದು ಅತ್ಯಂತ ಕಿರಿದಾದ ಜಾಗದಲ್ಲೂ ಸ್ವಚ್ಛ ಮಾಡುವ ಸಾಮಥ್ರ್ಯ ಹೊಂದಿದೆ.

ಕಳೆದ ಮೂರು ವರ್ಷದ ಅವಧಿ ದೇಶದ ವಿವಿಧ ರಾಜ್ಯಗಳಲ್ಲಿ ಒಳಚರಂಡಿಗಳನ್ನು ಸ್ವಚ್ಛಗೊಳಿಸುವಾಗ 88 ಮಂದಿ ಮೃತಪಟ್ಟಿದ್ದಾರೆಂದು ಮೊನ್ನೆಯಷ್ಟೆ ಕೇಂದ್ರ ಸಾಮಾಜಿಕ ನ್ಯಾಯ ಸಚಿವಾಲಯ ಲೋಕಸಭೆಗೆ ಮಾಹಿತಿ ನೀಡಿತ್ತು. ಇದು ಮಾನವನಿಂದ ಚರಂಡಿ ಸ್ವಚ್ಛಗೊಳಿಸುವ ಅಪಾಯವನ್ನು ಸೂಚಿಸುತ್ತದೆ. ಇದಕ್ಕೆ ಈಗ ಹೊಸಯಂತ್ರ ಮಾನವ ಪರಿಹಾರವಾಗಿದ್ದಾನೆ.

1.15ಮೀ. ಎತ್ತರದ 80ಕೆಜಿ ತೂಕದ ಈ ರೋಬೋಗೆ ಬಂಡಿಕೂಟ್ ಎಂದು ಹೆಸರಿಡಲಾಗಿದೆ. ಇದು 20 ಮೀ. ಆಳದೊಳಗಿನ ಅತ್ಯಂತ ಕಿರಿದಾದ ಸ್ಥಳಗಳನ್ನು ಸುಲಭವಾಗಿ ತಲುಪಬಲ್ಲದು.

ಕೇರಳ, ತಮಿಳುನಾಡು, ಆಂಧ್ರಪದೇಶ ಮೊದಲಾದ ರಾಜ್ಯಗಳಲ್ಲಿ ಈ ರೋಬೋ ಪ್ರಸಿದ್ಧಿಯಾಗಿದ್ದು, ಇವುಗಳನ್ನು ಖರೀದಿಸಲು ದೆಹಲಿ ಸರ್ಕಾರ ಈಗ ಮುಂದಾಗಿದೆ.

ಈ ಸಂಬಂಧ ದೆಹಲಿಯ ಸಾಮಾಜಿಕ ನ್ಯಾಯ ಖಾತೆ ಸಚಿವ ರಾಜೇಂದ್ರಪಾಲ್ ಗೋಪಾಲ ಈಗಾಗಲೇ ಈ ನಿಟ್ಟಿನಲ್ಲಿ ಕೇರಳದ ಜೆನ್ ರೋಬೋಟಿಕ್ಸ್ ಸಂಸ್ಥೆಯನ್ನು ಸಂಪರ್ಕಿಸಿದ್ದಾರೆ.

ದೆಹಲಿಯಲ್ಲಿ ಈಗಾಗಲೇ ಚರಂಡಿ ಸ್ವಚ್ಛಗೊಳಿಸುವ ಯಂತ್ರೋಪಕರಣಗಳು ಸಾಕಷ್ಟು ಸಂಖ್ಯೆಯಲ್ಲಿ ಇದೇ ಆದರೂ ಕಿರಿದಾದ ಸ್ಥಳಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಇದರಿಂದ ಪೌರಕಾರ್ಮಿಕರು ಚರಂಡಿಯೊಳಗೆ ಇಳಿದು ಅಪಾಯಕಾರಿ ಪರಿಸ್ಥಿತಿಯಲ್ಲಿ ಸ್ವಚ್ಛಗೊಳಿಸಬೇಕಾದ ಅನಿವಾರ್ಯತೆಯಿದೆ.

ಇಂತಹ ಸನ್ನಿವೇಶಗಳಲ್ಲಿ ಪೌರಕಾರ್ಮಿಕರು ಉಸಿರುಗಟ್ಟಿ ಅಥವಾ ವಿಷಾನಿಲ ಸೋರಿಕೆಯಿಂದ ಸಾವಿಗೀಡಾಗುತ್ತಿರುವ ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗಿವೆ. ಇಂತಹ ಅಪಾಯಕಾರಿ ಪರಿಸ್ಥಿತಿಗೆ ಈ ಯಂತ್ರಮಾನವ ಅತ್ಯಂತ ಸೂಕ್ತವೆನಿಸಿದೆ.

ಇದು ಮಾನವ ಅಥವಾ ಇತರ ಯಂತ್ರೋಪಕರಣಗಳು ಸಾಧ್ಯವಾಗದೆ ಇರುವ ಸ್ಥಳಗಳಿಗೆ ಸುಲಭವಾಗಿ ಪ್ರವೇಶಿಸುತ್ತವೆ. ಸಣ್ಣ ಒಳಚರಂಡಿಗಳನ್ನು ಸ್ವಚ್ಛಗೊಳಿಸಲು ಬಂಡಿಕೂಟ್ ಯಂತ್ರಮಾನವನಿಗೆ ಕೇವಲ 15 ನಿಮಿಷ ಸಾಕು. ದೊಡ್ಡ ಮ್ಯಾನ್‍ಹೋಲ್‍ಗಳನ್ನು ಇದು 45ನಿಮಿಷಗಳಲ್ಲಿ ಶುಚಿಗೊಳಿಸುತ್ತದೆ. ಈ ಯಂತ್ರದ ಬೆಲೆ 4ಲಕ್ಷರೂ.ಗಳು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ