ಬೆಂಗಳೂರು, ಜು.8- ಆಡಳಿತ ಪಕ್ಷದ ಅತೃಪ್ತ ಶಾಸಕರು ರಾಜೀನಾಮೆ ನೀಡಿ ಮೈತ್ರಿ ಸರ್ಕಾರದಲ್ಲಿ ಉಂಟಾಗಿರುವ ಸಮಸ್ಯೆ ಪರಿಹಾರಕ್ಕೆ ಜೆಡಿಎಸ್ ಸಚಿವರಿಂದ ರಾಜೀನಾಮೆ ಪಡೆದು ಸಂಪುಟ ಪುನಾರಚನೆ ಮಾಡುವ ಉದ್ದೇಶ ಹೊಂದಲಾಗಿದೆ.
ಬಹುತೇಕ ಕಾಂಗ್ರೆಸ್ ಸಚಿವರು ರಾಜೀನಾಮೆ ನೀಡಿದ್ದು, ಅದರಂತೆ ಎಲ್ಲ ಸಚಿವರ ರಾಜೀನಾಮೆ ಪಡೆಯಲು ತೀರ್ಮಾನಿಸಲಾಗಿದೆ. ಕಾಮರಾಜ ಸೂತ್ರದಂತೆ ಎಲ್ಲ ಸಚಿವರ ರಾಜೀನಾಮೆ ಪಡೆದು ಸಂಪುಟ ಪುನಾರಚನೆ ಮಾಡುವ ಸಂದರ್ಭದಲ್ಲಿ ಅತೃಪ್ತ ಶಾಸಕರ ಮನವೊಲಿಸಿ ರಾಜೀನಾಮೆ ಹಿಂಪಡೆಯುವ ತಂತ್ರ ಅನುಸರಿಸಲು ಮುಂದಾಗಿದ್ದಾರೆ.
ಅತೃಪ್ತರಿಗೂ ಸಚಿವ ಸ್ಥಾನ ನೀಡಿ ಮೈತ್ರಿ ಸರ್ಕಾರವನ್ನು ಸಂಕಷ್ಟದಿಂದ ಪಾರು ಮಾಡುವ ಉದ್ದೇಶ ಹೊಂದಿದ್ದು, ಈ ನಿಟ್ಟಿನಲ್ಲಿ ಹಾಲಿ ಸಚಿವರಲ್ಲಿ ಕೆಲವರನ್ನು ಕೈ ಬಿಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಸಚಿವರಿಂದಲೂ ರಾಜೀನಾಮೆ ಪಡೆಯಲು ತೀರ್ಮಾನಿಸಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.