ಬೆಂಗಳೂರು,ಜು.8- ಅತೃಪ್ತ ಶಾಸಕರನ್ನು ಸಮಾಧಾನಪಡಿಸಲು ಸಚಿವ ಸಂಪುಟವನ್ನು ಸಂಪೂರ್ಣ ಪುನರ್ ರಚನೆ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಶಾಸಕರಿಗೆ ಸಚಿವರಾಗಬೇಕೆಂಬ ಆಸೆ ಇದೆ ಮತ್ತು ಇತರ ಸಮಸ್ಯೆಗಳಿವೆ. ನಾವು ಅದನ್ನು ಬಗೆಹರಿಸುತ್ತೇವೆ. ಯಾರು ಆತುರದ ನಿರ್ಧಾರ ತೆಗೆದುಕೊಂಡು ಬಿಜೆಪಿ ಸೇರಬಾರದು ಎಂದರು.
ಕಾಂಗ್ರೆಸ್ನ 21 ಸಚಿವರು ಸ್ವಯಂಪ್ರೇರಿತರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ ಯಾವುದೇ ನಿರ್ಧಾರ ಕೈಗೊಂಡರೂ ನಾವು ಬದ್ಧ. ರಾಜೀನಾಮೆ ನೀಡಿರುವ ಸಚಿವರಿಗೆ ಅಭಿನಂದನೆ ಹೇಳುತ್ತೇನೆ. ಪಕ್ಷೇತರ ಶಾಸಕರಾದ ಆರ್.ಶಂಕರ್ ಹೊರತುಪಡಿಸಿ ಎಲ್ಲರೂ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದರು.
ಬಿಜೆಪಿಯವರು ನಮ್ಮ ಶಾಸಕರನ್ನು ಬಲವಂತವಾಗಿ ವಿಶೇಷ ವಿಮಾನದಲ್ಲಿ ಬೆಳಗ್ಗೆ ಕರೆದುಕೊಂಡು ಹೋಗಿದ್ದಾರೆ. ಇದರಿಂದಾಗಿ ಕಾಂಗ್ರೆಸ್-ಜೆಡಿಎಸ್ ವರ್ಚಸ್ಗೆ ಧಕ್ಕೆಯಾಗುವುದಿಲ್ಲ. ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆ ನಡೆಸುತ್ತಿರುವ ಬಿಜೆಪಿಗೆ ಹಾನಿಯಾಗಲಿದೆ ಎಂದರು.
ಸಂಪುಟ ಪುನರ್ ರಚನೆ ಬಗ್ಗೆ ಹೈಕಮಾಂಡ್ ಚರ್ಚೆ ಮಾಡುತ್ತೇವೆ. ಅತೃಪ್ತರ ಪೈಕಿ ಕೆಲವರಿಗೆ ಸಚಿವರಾಗಬೇಕೆಂಬ ಆಸೆ ಇದೆ. ಅವರಿಗೆ ಅವಕಾಶ ಕಲ್ಪಿಸಲಾಗುವುದು. ನಾವು ಅವರ ಸಮಸ್ಯೆಗಳನ್ನು ಆಲಿಸಲು ಸಿದ್ದರಾಗಿದ್ದೇವೆ. ಮುಂಬೈನಿಂದ ವಾಪಸ್ ಬರುವಂತೆ ಮನವಿ ಮಾಡಿದ್ದೇವೆ.
ಅತೃಪ್ತರನ್ನು ಕರೆತರಲು ಯಾರು ಹೋಗಿಲ್ಲ. ಅವರೇ ಸ್ವಯಂ ಪ್ರೇರಿತರಾಗಿ ವಾಪಸ್ ಬರುತ್ತಾರೆ ಎಂಬ ವಿಶ್ವಾಸವಿದೆ. ರಾಜೀನಾಮೆ ನೀಡಿರುವ ಸಚಿವರು ನಮಗೆ ಅಧಿಕಾರ ಮುಖ್ಯವಲ್ಲ. ಪಕ್ಷದ ಹಿತದೃಷ್ಟಿ ಮುಖ್ಯ ಎಂದು ಹೇಳಿದ್ದಾರೆ ಎಂದರು.
ಮುಂಬೈನಲ್ಲಿರುವ ಶಾಸಕರ ಜೊತೆ ನಾವು ಸಂಪರ್ಕದಲ್ಲಿದ್ದೇವೆ. ಅವರು ಮರಳಿ ಬರುವ ವಿಶ್ವಾಸವಿದೆ. ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವ ಪ್ರಯತ್ನದಲ್ಲಿ ಯಶಸ್ವಿಯಾಗುವುದಿಲ್ಲ. ಈಗಾಗಲೇ5 ಬಾರಿ ಪ್ರಯತ್ನಿಸಿ ವಿಫಲರಾಗಿದ್ದಾರೆ.ಈಗ 6ನೇ ಬಾರಿಯೂ ವಿಫಲರಾಗುತ್ತಾರೆ ಎಂದರು.
ಕಳೆದ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಜನಾದೇಶ ಸಿಕ್ಕಿಲ್ಲ. ಬಿಜೆಪಿಗೆ ಹೆಚ್ಚಿನ ಮತಗಳು ಮತ್ತು ಹೆಚ್ಚಿನ ಸ್ಥಾನ ಬಂದಿರಬಹುದು. ಸರ್ಕಾರ ರಚಿಸಬೇಕಾದ ಮ್ಯಾಜಿಕ್ ನಂಬರ್ನಷ್ಟು ಸಂಖ್ಯಾಬಲ ಇಲ್ಲ.
ಕಾಂಗ್ರೆಸ್-ಜೆಡಿಎಸ್ ಜೊತೆಗೂಡಿರುವುದರಿಂದ ಶಾಸಕರ ಸಂಖ್ಯೆ 120 ಆಗಿದ್ದು, ಸರ್ಕಾರ ರಚಿಸುವಷ್ಟು ಬಲ ನಮ್ಮ ಬಳಿ ಇದೆ. ಆದರೆ ಬಹುಮತ ಇಲ್ಲದ ಬಿಜೆಪಿ, ಕೇಂದ್ರದ ಅಧಿಕಾರವನ್ನು ದುರುಪಯೋಗಿಪಡಿಸಿಕೊಂಡು ಸರ್ಕಾರ ರಚಿಸಲು ಮುಂದಾಗಿದೆ ಎಂದರು.
ಆದಾಯ ತೆರಿಗೆ, ಸಿಬಿಐ, ಜಾರಿನಿರ್ದೇಶನಾಲಯಗಳಂತ ಸಂಸ್ಥೆಗಳನ್ನು ಬಳಸಿಕೊಂಡು ಶಾಸಕರನ್ನು ಬೆದರಿಸಿ ಸೆಳೆದುಕೊಳ್ಳುವ ಪ್ರಯತ್ನ ಮಾಡಿದೆ. ಬಿಜೆಪಿ ಈ ಬಾರಿ ಹೊಸ ನಾಟಕವಾಡುತ್ತಿದ್ದು, ಆಪರೇಷನ್ ಕಮಲದಲ್ಲಿ ನಮ್ಮ ಹಸ್ತಕ್ಷೇಪ ಇಲ್ಲ ಎಂದು ಹೇಳಿಕೊಳ್ಳುತ್ತಿವೆ. ಆದರೆ ಶಾಸಕರನ್ನು ಸೆಳೆಯುವ ಪ್ರಕ್ರಿಯೆಯಲ್ಲಿ ಬಿಜೆಪಿ ನೇರ ಪಾತ್ರವಿದೆ.ರಾಜೀನಾಮೆ ಕೊಟ್ಟ ಶಾಸಕರು ಮುಂಬೈಗೆ ತೆರಳಲು ವಿಶೇಷ ವಿಮಾನ ವ್ಯವಸ್ಥೆ ಮಾಡಿದ್ದೇ ಬಿಜೆಪಿ ಎಂದು ಸಿದ್ದರಾಮಯ್ಯ ಆರೋಪಿಸಿದರು.