ಆಪರೇಷನ್ ಕಮಲ 6ನೇ ಭಾರಿಯೂ ವಿಫಲವಾಗಲಿದೆ-ಕಾಂಗ್ರೇಸ್ ಮುಖಂಡ ಕೆ.ಸಿ.ವೇಣುಗೋಪಾಲ್

ಬೆಂಗಳೂರು,ಜು.8-ಕಾಂಗ್ರೆಸ್-ಜೆಡಿಎಸ್‍ನ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಮುಂದುವರೆಯಲಿದೆ. ಸರ್ಕಾರ ಅಸ್ಥಿರಗೊಳಿಸುವ ಬಿಜೆಪಿಯ ಆಪರೇಷನ್ ಕಮಲ 6ನೇ ಬಾರಿಯೂ ವಿಫಲವಾಗಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್.

ಉಪಮುಖ್ಯಮಂತ್ರಿಗಳ ಗೃಹಕಚೇರಿಯಲ್ಲಿ ನಡೆದ ಉಪಹಾರ ಕೂಟ, ಸರಣಿ ಸಭೆಗಳ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸಾಮಥ್ರ್ಯದ ಮೇಲೆ ನಮಗೆ ನಂಬಿಕೆ ಇದೆ. ಸಮ್ಮಿಶ್ರ ಸರ್ಕಾರವನ್ನು ನಾವು ಉಳಿಸಿಕೊಳ್ಳುತ್ತೇವೆ ಎಂದರು.

ಕೆಲವು ಶಾಸಕರು ರಾಜೀನಾಮೆ ನೀಡಿರುವುದು ನಿಜ. ಅವರಿಗೆ ಬಿಜೆಪಿ ಆಮಿಷವೊಡ್ಡಿ ಕರೆದುಕೊಂಡು ಹೋಗಿದೆ. ಕೇಂದ್ರ ಸರ್ಕಾರದ ಇಡಿ, ಐಟಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಕುದುರೆ ವ್ಯಾಪಾರ ಮಾಡಿ ನಮ್ಮ ಶಾಸಕರಿಂದ ರಾಜೀನಾಮೆ ಕೊಡಿಸಿದ್ದಾರೆ ಎಂದು ಆರೋಪಿಸಿದರು.

ನಾವು ರಾಜೀನಾಮೆ ಕೊಟ್ಟಿರುವ ಶಾಸಕರ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಅವರ ಸಮಸ್ಯೆಗಳನ್ನು ಆಲಿಸಲು ಸಿದ್ದರಿದ್ದೇವೆ. ರಾಜಕೀಯ ಬೆಳವಣಿಗೆಗಳ ಬಗ್ಗೆ ಸುದೀರ್ಘ ಚರ್ಚೆ ಮಾಡಿದ್ದೇವೆ. ಶಾಸಕರು ವಾಪಸ್ ಬಂದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕಿಸುವ ಪ್ರಯತ್ನ ಮಾಡುತ್ತೇವೆ ಎಂದು ಅವರು ಹೇಳಿದರು.

ಸರ್ಕಾರದ ಸುಭದ್ರತೆಗಾಗಿ ಸಂಪುಟ ಪುನರ್‍ರಚಿಸಲು ಅನುಕೂಲವಾಗುವಂತೆ ಕಾಂಗ್ರೆಸ್‍ನ ಎಲ್ಲ ಸಚಿವರು ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿದ್ದಾರೆ ವೇಣುಗೋಪಾಲ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ