ಬೆಂಗಳೂರು; ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿ ಎರಡು ವಾರಗಳು ಕಳೆದಿವೆ ಆದರೂ, ಮೈತ್ರಿ ನಾಯಕರು ಈವರೆಗೆ ನನಗೆ ಯಾವುದೇ ಖಾತೆಯನ್ನು ನೀಡಿಲ್ಲ ಎಂದು ಬೇಸತ್ತು ಕೋಲಾರದ ಮುಳವಾಗಿಲು ಕ್ಷೇತ್ರದ ಸ್ವತಂತ್ರ್ಯ ಅಭ್ಯರ್ಥಿ ಹೆಚ್. ನಾಗೇಶ್ ಇಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆ ಮೂಲಕ ಮೈತ್ರಿ ನಾಯಕರಿಗೆ ಮತ್ತೊಂದು ಹೊಸ ತಲೆನೋವನ್ನು ಸೃಷ್ಟಿ ಮಾಡಿದ್ದಾರೆ.
ಶನಿವಾರ ಮೈತ್ರಿ ಸರ್ಕಾರದ 13 ಜನ ಅತೃಪ್ತ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ತೆರಳುವ ಮೂಲಕ ಸರ್ಕಾರಕ್ಕೆ ಕಂಟಕವಾಗಿ ಪರಿಣಮಿಸಿದ್ದರು. ಹೀಗಾಗಿ ಸರ್ಕಾರ ಬಹುತೇಕ ಬೀಳುವ ಹಂತಕ್ಕೆ ತಲುಪಿದೆ. ಜುಲೈ.12 ರಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗಲಿದ್ದು, ವಿರೋಧ ಪಕ್ಷ ಬಿಜೆಪಿ ಸರ್ಕಾರವನ್ನು ಬಹುಮತ ಸಾಬೀತುಪಡಿಸುವಂತೆ ಆಗ್ರಹಿಸಿದರೆ ಸರ್ಕಾರ ಬೀಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಹೀಗಾಗಿ ಮೈತ್ರಿ ಪಕ್ಷದ ಹಿರಿಯ ನಾಯಕರು ಹಾಗೂ ಹಾಲಿ ಸಚಿವರು ಇಂದು ಸಂಜೆ ಸಾಮೂಹಿಕ ರಾಜೀನಾಮೆ ನೀಡಿ ಆ ಸ್ಥಾನಗಳನ್ನು ಅತೃಪ್ತರಿಗೆ ನೀಡುವ ಮೂಲಕ ಸರ್ಕಾರ ಉಳಿಸಿಕೊಳ್ಳಲು ಕೊನೆಯ ಕಸರತ್ತು ನಡೆಸಿದ್ದಾರೆ. ಹೀಗಾಗಿ ಬಹುತೇಕ ಎಲ್ಲಾ ಸಚಿವರು ಇಂದು ಸಾಮೂಹಿಕ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ. ಆದರೆ, ಈ ನಡುವೆ ತಮಗೆ ಸಚಿವ ಸ್ಥಾನ ನೀಡಿದರೂ ಖಾತೆ ನೀಡಲಿಲ್ಲ ಎಂಬ ಕಾರಣಕ್ಕೆ ಹೆಚ್. ನಾಗೇಶ್ ತಮ್ಮ ಸಚಿವ ಸ್ಥಾನಕ್ಕೆ ಸೋಮವಾರ ಬೆಳಗ್ಗೆ ರಾಜೀನಾಮೆ ನೀಡಿರುವುದು ಮೈತ್ರಿ ನಾಯಕರಿಗೆ ಹೊಸದೊಂದು ತಲೆನೋವಿಗೆ ಕಾರಣವಾಗಿದೆ.
ಹೆಚ್. ನಾಗೇಶ್ ಸ್ವತಂತ್ರ್ಯ ಅಭ್ಯರ್ಥಿ ಆಗಿರುವುದರಿಂದ ಅವರ ವಿರುದ್ಧ ವಿಪ್ ಜಾರಿಗೊಳಿಸಿ ಶಾಸಕ ಸ್ಥಾನದಿಂದ ಅನೂರ್ಜಿತಗೊಳಿಸುವುದು ಕಾಂಗ್ರೆಸ್ನಿಂದ ಸಾಧ್ಯವಿಲ್ಲ. ಹೀಗಾಗಿ ಶಾಸಕ ಹೆಚ್. ನಾಗೇಶ್ ಯಾವುದೇ ಸಂದರ್ಭದಲ್ಲಿ ಬಿಜೆಪಿ ಪಾಲಾಗಬಹುದು ಈ ಮೂಲಕ ತಮ್ಮ ಸಂಖ್ಯೆ ಮತ್ತಷ್ಟು ಕಡಿಮೆಯಾಗಬಹುದು ಎಂಬ ಆತಂಕಕ್ಕೆ ಮೈತ್ರಿ ನಾಯಕರು ಒಳಗಾಗಿದ್ದಾರೆ.