ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾದಾಗ, ಆಪರೇಷನ್ ಕಮಲದ ಭೀತಿ ಎದುರಾದಾಗ, ಶಾಸಕರು ರಾಜೀನಾಮೆ ನೀಡಲು ಮುಂದಾದಾಗ ಹಿರಿಯ ತಲೆಗಳಿಗೆ ನೆನಪಾಗುವುದು ರೆಸಾರ್ಟ್ ರಾಜಕಾರಣ. ಈಗ ಜೆಡಿಎಸ್ ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೊರಡಲು ಸಿದ್ಧತೆ ನಡೆಸಿದೆ. ಅರ್ಥಾತ್, ರಾಜ್ಯ ರಾಜಕೀಯದಲ್ಲಿ ನಡೆದ ಕ್ಷಿಪ್ರ ಬೆಳವಣಿಗೆಯಿಂದಾಗಿ ಕಂಗಾಲಾಗಿರುವ ಜೆಡಿಎಸ್ ಶಾಸಕರು ರೆಸಾರ್ಟ್ ಸೇರುತ್ತಿದ್ದಾರೆ.
ಶಾಸಕರ ರಕ್ಷಣೆಗಾಗಿ ರೆಸಾರ್ಟ್ ಮೊರೆ ಹೋಗಲು ನಿನ್ನೆಯ ಸಭೆಯಲ್ಲಿ ಸಿಎಂ ಎಚ್ಡಿ ಕುಮಾರಸ್ವಾಮಿ ಹಾಗೂ ಹಿರಿಯ ನಾಯಕ ಎಚ್ಡಿ ದೇವೇಗೌಡ ನಿರ್ಧರಿಸಿದ್ದಾರೆ. ಬೆಂಗಳೂರಿಗೆ ಸಮೀಪ ಇರುವ ರೆಸಾರ್ಟ್ಗೆ ತೆರಳಲು ತೀರ್ಮಾನ ಮಾಡಲಾಗಿದೆ ಎನ್ನಲಾಗಿದೆ.
ಇನ್ನೂ ಕೆಲ ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ. ಇದು ಜೆಡಿಎಸ್ ಹಿರಿಯ ನಾಯಕರಿಗೆ ತಲೆನೋವಾಗಿ ಕಾಡಿದೆ. ಹಾಗಾಗಿ, ಯಾವ ಶಾಸಕರೂ ಬಿಜೆಪಿ ಸಂಪರ್ಕಕ್ಕೆ ಸಿಗದಂತೆ ನೋಡಿಕೊಳ್ಳಲು ರೆಸಾರ್ಟ್ ರಾಜಕಾರಣ ಆರಂಭಿಸಲು ಎಚ್ಡಿಕೆ ನಿರ್ಧರಿಸಿದ್ದಾರೆ.
ಅತೃಪ್ತರಿಗೆ, ಹೊಸಬರಿಗೆ ಅವಕಾಶ ನೀಡಲು ಸಚಿವರಿಂದ ಸಾಮೂಹಿಕವಾಗಿ ರಾಜೀನಾಮೆ ಪಡೆಯಲಾಗುತ್ತಿದೆ. ಇದಾದ ನಂತರದಲ್ಲಿ ರೆಸಾರ್ಟ್ಗೆ ತೆರಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಮೊದಲು ಆಪರೇಷನ್ ಕಮಲ ವಿಚಾರ ಬಂದಾಗ ಜನವರಿ ತಿಂಗಳಲ್ಲಿ ಈಗಲ್ ಟನ್ ರೆಸಾರ್ಟ್ನಲ್ಲಿ ರಾಜ್ಯ ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿದ್ದರು.
ರೆಸಾರ್ಟ್ ಬಿಟ್ಟು ಶಾಸಕರು ಬೇರೆ ಎಲ್ಲೂ ಹೋಗಬಾರದು ಎಂದು ಸೂಚಿಸಲಾಗಿತ್ತು. ಜೊತೆಗೆ, ಅವರಿಗೆ ಬಂದ ದೂರವಾಣಿ ಕರೆಯನ್ನು ಅಲ್ಲಿರುವ ನಾಯಕರು ಪರಿಶೀಲನೆ ಮಾಡಬೇಕಿತ್ತು. ಒಂದು ವೇಳೆ ತುರ್ತು ಕೆಲಸ ಇದ್ದರೆ ಮಾತ್ರ ರೆಸಾರ್ಟ್ ಬಿಟ್ಟು ತೆರಳಬಹುದಿತ್ತು. ಇದೇ ರೀತಿಯ ಷರತ್ತುಗಳನ್ನು ಜೆಡಿಎಸ್ ಶಾಸಕರಿಗೂ ವಿಧಿಸುವ ಸಾಧ್ಯತೆ ಇದೆ.