ಮಧ್ಯಪ್ರದೇಶದಲ್ಲಿ ಮುಂದುವರೆದ ಕಾಂಗ್ರೇಸ್ ನಾಯಕರ ರಾಜೀನಾಮೆ ಪರ್ವ

ಭೋಪಾಲ್, ಜು.7-ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಉನ್ನತ ನಾಯಕರ ರಾಜೀನಾಮೆ ಪರ್ವ ಮುಂದುವರೆದಿದ್ದು, ಪ್ರಭಾವಿ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಪಕ್ಷದ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿಯ ಸ್ಥಾನಕ್ಕೆ ತ್ಯಾಗಪತ್ರ ಸಲ್ಲಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿಗೆ ನೈತಿಕ ಹೊಣೆ ಹೊತ್ತು ಎಐಸಿಸಿ ಸ್ಥಾನಕ್ಕೆ ರಾಹುಲ್‍ಗಾಂಧಿ ರಾಜೀನಾಮೆ ನೀಡಿದ ಬೆನ್ನಲ್ಲೇ ಸಿಂಧಿಯಾ ತಮ್ಮ ಹುದ್ದೆಯನ್ನು ತ್ಯಜಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಈಗಾಗಲೇ ಮುಖ್ಯಮಂತ್ರಿ ಕಮಲ್‍ನಾಥ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ದೀಪಕ್ ಬಬಾರಿಯಾ ಮತ್ತು ವಿವೇಕ್ ಟಂಕ ಸೇರಿದಂತೆ ಕೆಲವು ಹಿರಿಯ ನಾಯಕರೂ ಕೂಡ ತಮ್ಮ ಜವಾಬ್ದಾರಿಯುತ ಹುದ್ದೆಗಳಿಂದ ನಿರ್ಗಮಿಸಿರುವುದು ರಾಜ್ಯದಲ್ಲಿ ಕಾಂಗ್ರೆಸ್ ನಾಯಕತ್ವದ ಗಂಭೀರ ಕೊರತೆ ಕಂಡುಬಂದಿದೆ.

ಲೋಕಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನದ ಕಾರಣ ಅದರ ನೈತಿಕ ಹೊಣೆ ಹೊತ್ತು ನಾನು ರಾಜೀನಾಮೆ ನೀಡಿದ್ದೇನೆ. ಇದರ ಹೊಣೆ ಹೊತ್ತುಕೊಳ್ಳದೆ ಹಾಗೆಯೇ ಮುಂದುವರೆಯುವುದು ನನ್ನ ಪ್ರಕಾರ ನ್ಯಾಯಯುತವಲ್ಲ ಎಂದು ಈಗಾಗಲೇ ರಾಹುಲ್‍ಗಾಂಧಿ ತಿಳಿಸಿರುವ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಒಬ್ಬರಾದ ನಂತರ ಒಬ್ಬರು ನಾಯಕರು ತಮ್ಮ ಸ್ಥಾನಗಳನ್ನು ತ್ಯಜಿಸುತ್ತಿದ್ದಾರೆ.

ಜೂ.29ರಂದು ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಕನಿಷ್ಠ 145 ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದರು. ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯ ಐವರು ಪ್ರಮುಖ ಮುಖಂಡರೂ ಸಹ ತಮ್ಮ ಸ್ಥಾನಗಳಿಂದ ನಿರ್ಗಮಿಸಿದ್ದಾರೆ.

ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಕಾಂಗ್ರೆಸ್ ದುರ್ಬಲವಾಗುತ್ತಿದ್ದು, ಇದರೊಂದಿಗೆ ಪಕ್ಷದ ಉನ್ನತ ನಾಯಕರು ರಾಜೀನಾಮೆ ನೀಡುತ್ತಿರುವುದರಿಂದ ಹೊಸ ಬಿಕ್ಕಟ್ಟು ಎದುರಾಗಿದೆ.

ತಮ್ಮ ಹುದ್ದೆಗಳಿಗೆ ಈಗಾಗಲೇ ರಾಜೀನಾಮೆ ನೀಡಿರುವ ಎಲ್ಲರೂ ತಮ್ಮ ತ್ಯಾಗ ಪತ್ರಗಳನ್ನು ರಾಹುಲ್‍ಗಾಂಧಿಯವರಿಗೆ ಸಲ್ಲಿಸಿದ್ದಾರೆ. ಆದರೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಅವರೇ ರಾಜೀನಾಮೆ ಸಲ್ಲಿಸಿರುವುದರಿಂದ ಉತ್ತರಾಧಿಕಾರಿ ನೇಮಕವಾಗುವವರೆಗೆ ಇವರೆಲ್ಲರೂ ಅವರವರ ಸ್ಥಾನಗಳಲ್ಲೇ ಮುಂದುವರೆಯಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ