ರಾಜ್ಯಪಾಲರು ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು-ಡಿಸಿಎಂ ಡಾ.ಜಿ.ಪರಮೇಶ್ವರ್

ಬೆಂಗಳೂರು,ಜು.8-ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಸಲುವಾಗಿ ಕೆಲ ಶಾಸಕರು ನೀಡಿರುವ ರಾಜೀನಾಮೆ ಪ್ರಕರಣದಲ್ಲಿ ರಾಜ್ಯಪಾಲ ವಿ.ಆರ್.ವಾಲ ಅವರ ಕುಮ್ಮಕ್ಕಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಗಂಭೀರ ಆರೋಪ ಮಾಡಿದ್ದಾರೆ.

ಸದಾಶಿವನಗರದಲ್ಲಿರುವ ಬಿಡಿಎ ಕ್ವಾಟ್ರರ್ಸ್‍ನಲ್ಲಿರುವ ಉಪಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಸಚಿವರ ಉಪಹಾರ ಕೂಟಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ನಡವಳಿಕೆಗಳ ಕುರಿತು ಪ್ರಶ್ನೆ ಮಾಡಿದರು.

ಆಡಳಿತಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲರು ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು. ಎರಡು ದಿನಗಳ ಹಿಂದೆ ಜೆಡಿಎಸ್ ಮತ್ತು ಕಾಂಗ್ರೆಸ್‍ನ ಕೆಲ ಶಾಸಕರು ಸ್ಪೀಕರ್ ಅವರಿಗೆ ರಾಜೀನಾಮೆ ಕೊಟ್ಟಿದ್ದಾರೆ. ಆನಂತರ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಶಾಸಕರ ಜೊತೆ ರಾಜ್ಯಪಾಲರು ಸುಮಾರು ಎರಡು ಗಂಟೆಗಳ ಕಾಲ ಕುಳಿತು ಚರ್ಚೆ ಮಾಡುವ ಅಗತ್ಯ ಏನಿತ್ತು?ಎಂದು ಪ್ರಶ್ನಿಸಿದರು.

ಅಲ್ಲದೆ ಪೊಲೀಸ್ ಆಯುಕ್ತರನ್ನು ರಾಜಭವನಕ್ಕೆ ಕರೆಸಿಕೊಂಡು ರಾಜೀನಾಮಿ ನೀಡಿರುವ ಅತೃಪ್ತ ಶಾಸಕರ ಜೊತೆಯಲ್ಲಿ ಕೂರಿಸಿ ಮಾತನಾಡುವಂತಹ ವಿಷಯವೇನಿತ್ತು. ಒಂದು ವೇಳೆ ಭದ್ರತೆಗೆ ಸಂಬಂಧಪಟ್ಟಂತೆ ಅನುಮಾನಗಳಿದ್ದರೆ ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು ಸೂಚನೆ ನೀಡಬಹುದು.

ಅದನ್ನು ಬಿಟ್ಟು ರಾಜ್ಯಪಾಲರೇ ನೇರವಾಗಿ ಕಮೀಷನರ್ ಅವರನ್ನು ಕರೆಸಿ ಮಾತುಕತೆ ನಡೆಸಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಅಸ್ತ್ರಗಳನ್ನು ನಾವು ಪ್ರಯೋಗ ಮಾಡುತ್ತೇವೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಿನ್ನೆ ವಿದೇಶ ಪ್ರವಾಸ ಮುಗಿಸಿ ಬಂದ ಬಳಿಕ ಅವರ ಜೊತೆ ಸುದೀರ್ಘವಾಗಿ ಚರ್ಚೆ ನಡೆಸಿದ್ದೇವೆ.

ಇಂದು ಕಾಂಗ್ರೆಸ್ ಸಚಿವರ ಉಪಹಾರ ಕೂಟ ನಡೆಯಲಿದ್ದು, ಅದರಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಸೇರಿದಂತೆ ಎಲ್ಲರೂ ಭಾಗವಹಿಸಲಿದ್ದಾರೆ.

ಸಚಿವರ ರಾಜೀನಾಮೆ ಪಡೆಯುವುದು, ಬಿಜೆಪಿಗೆ ತಿರುಗೇಟು ನೀಡಲು ರಿವರ್ಸ್ ಆಪರೇಷನ್ ಮಾಡುವುದು ನಮ್ಮ ಮುಂಬೈನಲ್ಲಿರುವ ಶಾಸಕರ ಮನವೊಲಿಸಿ ವಾಪಸ್ ಕರೆತರುವುದು ಸೇರಿದಂತೆ ಎಲ್ಲ ರೀತಿಯ ಅಸ್ತ್ರಗಳನ್ನು ನಾವು ಪ್ರಯೋಗಿಸುತ್ತೇವೆ ಎಂದು ಹೇಳಿದರು.

ಶಾಸಕರು ರಾಜೀನಾಮೆ ನೀಡಿದ್ದಾರೆ. ಅವುಗಳ ಅಂಗೀಕಾರ, ತಿರಸ್ಕಾರದ ಬಗ್ಗೆ ಸ್ಪೀಕರ್ ಅವರು ಕಾನೂನಾತ್ಮಕವಾಗಿ ಯಾವ ನಿರ್ಧಾರ ತೆಗೆದುಕೊಳ್ಳಬಹುದು, ಸರ್ಕಾರ ರಚನೆಗಾಗಿ ಕಾನೂನು ಚೌಕಟ್ಟಿನಲ್ಲಿ ನಾವು ಏನೆಲ್ಲ ಮಾಡಬಹುದು ಂಬುದನ್ನು ಇಂದಿನ ಸಭೆಯಲ್ಲಿ ಚರ್ಚೆ ನಡೆಸುತ್ತೇವೆ ಎಂದರು.

ಮುಂಬೈನಲ್ಲಿರುವ ಶಾಸಕರ ಪೈಕಿ ಕೆಲವರು, ನಾವು ಬಹಳ ದೂರ ಬಂದಿದ್ದೇವೆ. ರಾಜೀನಾಮೆ ಹಿಂಪಡೆಯಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಇನ್ನು ಕೆಲವರು ರಾಜೀನಾಮೆ ವಾಪಸ್ ಪಡೆಯುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ ಎಂದು ಅವರು ಹೇಳಿದರು.

ಶಾಸಕರ ಕೆಲವು ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸಲು ನಾವು ಪ್ರಯತ್ನ ಮಾಡುತ್ತೇವೆ. ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವ ಬಿಜೆಪಿಯ ಪ್ರಯತ್ನ ಮತ್ತೆ ವಿಫಲವಾಗಲಿದೆ ಎಂದು ಪರಮೇಶ್ವರ್ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ