ಬೆಂಗಳೂರು,ಜು.8-ಈಗಾಗಲೇ ಬಹುಮತ ಕಳೆದುಕೊಂಡಿರುವ ಕುಮಾರಸ್ವಾಮಿ ಅವರು ಅಧಿಕಾರದಲ್ಲಿ ಮುಂದುವರೆಯುವುದು ಸರಿಯಲ್ಲ. ಕೂಡಲೇ ಗೌರವಯುತವಾಗಿ ರಾಜೀನಾಮೆ ನೀಡಿ ಮನೆಗೆ ಹೋಗಬೇಕು. ಮುಖ್ಯಮಂತ್ರಿಗಳು ರಾಜೀನಾಮೆ ನೀಡಲು ಮುಂದಾಗದಿದ್ದರೆ ರಾಜ್ಯಪಾಲರು ಸರ್ಕಾರವನ್ನು ವಜಾ ಮಾಡಲಿ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 13 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರಕ್ಕೆ ಮರ್ಮಾಘಾತ ನೀಡಿದ್ದಾರೆ. ಕೊನೆ ಕ್ಷಣದಲ್ಲಿ ಸರ್ಕಾರವನ್ನು ಉಳಿಸಿಕೊಳ್ಳಲು ಕುಮಾರಸ್ವಾಮಿ ಏನೇ ಸರ್ಕಸ್ ನಡೆಸಿದರೂ ಪ್ರಯೋಜನವಾಗುವುದಿಲ್ಲ. ಮಾನ ಮರ್ಯಾದೆ ಇದ್ದರೆ ಕೊಡಬೇಕು ಎಂದು ಹೇಳಿದರು.
ಶಾಸಕರು ರಾಜೀನಾಮೆ ನೀಡುವ ತಕ್ಷಣವೇ ಅವರು ರಾಜೀನಾಮೆ ಕೊಡುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದವು. ಆದರೆ ಇನ್ನು ಸಚಿವರ ರಾಜೀನಾಮೆ, ಅತೃಪ್ತರ ಮನವೊಲಿಕೆ ಇಂಥದ್ದರಲ್ಲೇ ಕಾಲ ಕಳೆಯುತ್ತಿದ್ದಾರೆ. ಶಾಸಕರ ವಿಶ್ವಾಸ ಕಳೆದುಕೊಂಡಿರುವುದರ ಜೊತೆಗೆ ರಾಜ್ಯದ ಜನತೆಗೆ ವಂಚನೆ ಮಾಡಿ ಅಧಿಕಾರದಲ್ಲಿ ಮುಂದುವರೆಯುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಕೆಲವು ಶಾಸಕರಿಗೆ ಬೆದರಿಕೆ ಹಾಕುವುದರ ಮೂಲಕ ಹಿಡಿದಿಟ್ಟುಕೊಳ್ಳಲು ಹೀನಕೃತ್ಯಕ್ಕೆ ದೋಸ್ತಿ ಪಕ್ಷಗಳ ಮುಖಂಡರು ಮುಂದಾಗಿದ್ದಾರೆ. ಎಚ್ಎಎಲ್ವಿಮಾನ ನಿಲ್ದಾಣದಲ್ಲಿ ಉಪಮುಖ್ಯಮಂತ್ರಿ ಹಾಗೂ ಗೃಹಸಚಿವರ ಆಪ್ತರು ನಮ್ಮ ಬೆಂಬಲಿಗರೊಬ್ಬರ ಮೇಲೆ ಹಲ್ಲೆ ನಡೆಸಿ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಮುಂದಾಗಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೊಂದಿಲ್ಲ ಎಂದರು.
ಕರ್ನಾಟಕ ಗೂಂಡಾ ರಾಜ್ಯ ಅಲ್ಲ. ಈಗಾಗಲೇ ಕೆರೆಯ ನೀರು ಆಚೆ ಹೋಗಿದೆ. ನೀವು ಏನೇ ಸರ್ಕಸ್ ಮಾಡಿದರೂ ಸರ್ಕಾರ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಶಾಸಕರು ಬಹುದೂರ ಹೋಗಿರುವುದರಿಂದ ಎಲ್ಲ ಪ್ರಯತ್ನಗಳು ವ್ಯರ್ಥವಾಗಲಿದೆ ಎಂದು ಅಶೋಕ್ ಹೇಳಿದರು.