ರಾಜೀನಾಮೆ ನೀಡಲು ಮುಂದಾಗಿರುವ ಶಾಸಕ ರೋಷನ್‍ಬೇಗ್

ಬೆಂಗಳೂರು, ಜು.7-ಕಾಂಗ್ರೆಸ್‍ನ ಹಿರಿಯ ಶಾಸಕ ರೋಷನ್‍ಬೇಗ್ ಕೂಡ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಆರಂಭದಲ್ಲಿ ಕಾಂಗ್ರೆಸ್ ನಾಯಕತ್ವದ ವಿರುದ್ಧ ಮಾತನಾಡಿದ ಶಾಸಕರನ್ನು ಹಿಂದು-ಮುಂದು ನೋಡದೆ ದಂಡಿಸುವ ಕೆಲಸ ಮಾಡಿತ್ತು.

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರ ವಿರುದ್ಧ ಹೇಳಿಕೆ ನೀಡಿದ ಕಾರಣಕ್ಕಾಗಿ ಪಕ್ಷದಿಂದ ರೋಷನ್‍ಬೇಗ್‍ರನ್ನು ಅಮಾನತು ಮಾಡಲಾಯಿತು.

ಅದೇ ರೀತಿ ಪರಮೇಶ್ವರ್ ನಾಯಕ್ ವಿರುದ್ಧ ಮಾತನಾಡಿದ ಶಾಸಕ ಭೀಮಾನಾಯಕ್ ಅವರಿಗೂ ಶೋಕಾಸ್ ನೋಟಿಸ್ ನೀಡಲಾಗಿದೆ. ಈ ಧೋರಣೆಗಳು ಕಾಂಗ್ರೆಸ್‍ನ ಇತರ ಶಾಸಕರನ್ನು ಕೆರಳಿಸಿದ್ದು, ಸಹಜವಾಗಿ ತಮ್ಮ ದಾರಿ ತಾವು ನೋಡಿಕೊಳ್ಳುವಂತಹ ವಾತಾವರಣ ಸೃಷ್ಟಿಸಿದೆ.

ಶಾಸಕರಾದ ಬಿ.ಸಿ.ಪಾಟೀಲ್ ಅವರಿಗೆ ಸಚಿವ ಸ್ಥಾನ ಕೊಟ್ಟೆ ಕೊಡುವುದಾಗಿ ಭರವಸೆ ನೀಡಿದ ನಾಯಕರು ಎರಡು-ಮೂರು ಬಾರಿ ವಂಚಿಸಿದರು. ಅದಕ್ಕೂ ಮೊದಲು ರಮೇಶ್ ಜಾರಕಿ ಹೊಳಿ ಅವರು ಡಿ.ಕೆ.ಶಿವಕುಮಾರ್ ವಿರುದ್ಧ ಅಸಮಾಧಾನಗೊಂಡು ಆಕ್ಷೇಪ ವ್ಯಕ್ತಪಡಿಸಿದಾಗ ಅವರನ್ನು ಮನವೊಲಿಸುವ ಬದಲಾಗಿ ಸಂಪುಟದಿಂದ ಕೈಬಿಡಲಾಯಿತು. ಹೀಗೆ ಪ್ರತಿ ಹಂತದಲ್ಲೂ ಕಾಂಗ್ರೆಸ್ ಶಾಸಕಾಂಗ ಪಕ್ಷ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಬದಲು ದಂಡಿಸುವ ದರ್ಪವನ್ನೇ ಪ್ರದರ್ಶಿಸುತ್ತಾ ಬಂದಿದೆ.

ರಮೇಶ್ ಜಾರಕಿ ಹೊಳಿ ಅವರನ್ನು ಏಕಾಂಗಿ ಮಾಡಿದ್ದೇವೆ. ಅವರ ಜೊತೆ ಯಾರೂ ಇಲ್ಲ ಎಂದು ಎದೆತಟ್ಟಿಕೊಳ್ಳುವ ಮೂಲಕ ಕಾಂಗ್ರೆಸ್ ನಾಯಕರು ತಾವು ಗೆದ್ದಿದ್ದೇವೆ ಎಂದು ಬೀಗಿದರು.

ಇದೆಲ್ಲವೂ ಒಂದಕ್ಕೊಂದು ಜೋಡಣೆಗೊಂಡು ನಿನ್ನೆ ಸ್ಫೋಟಗೊಂಡಿದ್ದು, ಸಮ್ಮಿಶ್ರ ಸರ್ಕಾರದ ಅಸ್ತಿತ್ವವನ್ನೇ ಅಲ್ಲಾಡಿಸಲಾರಂಭಿಸಿದೆ. ರಾಜೀನಾಮೆ ನೀಡಿರುವ ಮಹೇಶ್ ಕುಮಟಳ್ಳಿ, ಶಿವರಾಂ ಹೆಬ್ಬಾರ್, ಪ್ರತಾಪ್‍ಗೌಡ ಪಾಟೀಲ್ ಅವರುಗಳು ಹಲವಾರು ಬಾರಿ ಕಾಂಗ್ರೆಸ್ ನಾಯಕರ ಮನೆ ಬಾಗಿಲಿಗೆ ಸುತ್ತಿದರೂ ಕ್ಷೇತ್ರದ ಅಭಿವೃದ್ಧಿ ಕೆಲಸಗಳು ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ ಎಂದು ಹೇಳಲಾಗಿದೆ.

ಶಾಸಕ ಎಸ್.ಟಿ.ಸೋಮಶೇಖರ್ ಅವರಿಗೆ ಒಂದು ಕಡೆ ಬಿಡಿಎ ಅಧ್ಯಕ್ಷ ಸ್ಥಾನ ನೀಡಿ ಮತ್ತೊಂದು ಕಡೆಯಿಂದ ನಿವೃತ್ತ ಅಧಿಕಾರಿಯನ್ನು ವಿಶೇಷ ಅಧಿಕಾರಿಯನ್ನಾಗಿ ನೇಮಿಸಿ ಅಧ್ಯಕ್ಷರ ಅಧಿಕಾರ ವ್ಯಾಪ್ತಿಗೆ ಕತ್ತರಿ ಹಾಕಲಾಯಿತು. ಎಸ್.ಟಿ.ಸೋಮಶೇಖರ್ ಈ ಬಗ್ಗೆ ಮೂರ್ನಾಲ್ಕು ಬಾರಿ ವಾಗ್ದಾಳಿ ನಡೆಸಿದರೂ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ.

ಶಾಸಕ ಮುನಿರತ್ನ , ಭೆರತಿಬಸವರಾಜ್ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಸಾಕಷ್ಟು ಅನುದಾನ ಪಡೆದುಕೊಂಡಿದ್ದರು. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಪ್ರತಿ ಕೆಲಸಕ್ಕೂ ಅಂಗಲಾಚುವ ಸ್ಥಿತಿ ನಿರ್ಮಾಣವಾಯಿತು. ಹಿರಿಯ ನಾಯಕರಾದ ರಾಮಲಿಂಗಾರೆಡ್ಡಿ ಅವರು, ಸದಾ ಕಾಲ ತಾನು ಕಾಂಗ್ರೆಸ್‍ನ ಶಿಸ್ತಿನ ಸಿಪಾಯಿ ಎಂದೇ ಹೇಳುತ್ತಿದ್ದರು. ಈ ಹಿಂದೆ ವಿಧಾನಸಭೆ ಚುನಾವಣೆ ವೇಳೆ ತಮ್ಮ ಪುತ್ರಿಗೆ ಟಿಕೆಟ್ ಪಡೆದುಕೊಂಡ ರಾಮಲಿಂಗಾರೆಡ್ಡಿ ಅವರನ್ನು ಕಾಂಗ್ರೆಸ್ ನಾಯಕರು ಸಂಪುಟದಿಂದ ದೂರ ಇಟ್ಟರು. ಒಂದೇ ಕುಟುಂಬದ ಇಬ್ಬರು ಶಾಸಕರಿದ್ದು, ಅವರಲ್ಲಿ ಒಬ್ಬರನ್ನು ಸಚಿವರನ್ನಾಗಿ ಮಾಡುವುದು ಸರಿಯಲ್ಲ ಎಂಬ ವಾದ ಕಾಂಗ್ರೆಸ್ ನಾಯಕರದಾಗಿತ್ತು.

ಆದ್ದರಿಂದ ರಾಮಲಿಂಗಾರೆಡ್ಡಿ ಅವರು ಅಸಮಾಧಾನದಲ್ಲಿ ಕುಗ್ಗಿ ಹೋಗಿದ್ದರು. ಅದಕ್ಕೆ ತುಪ್ಪ ಸುರಿಯುವಂತೆ ಬೆಂಗಳೂರು ನಗರ ಅಭಿವೃದ್ಧಿ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ತಮ್ಮದೇ ಆದ ಪಟಾಲಮ್ ಕಟ್ಟಿಕೊಂಡು ಬಿಬಿಎಂಪಿಯಲ್ಲಿ ಅಧಿಕಾರದ ದರ್ಪ ತೋರಿದರು. ರಾಮಲಿಂಗಾರೆಡ್ಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬೆಂಗಳೂರು ಅಭಿವೃದ್ಧಿಗೆ ತಾವೇ ಕಾರಣ ಎಂಬಂತೆ ಬಿಂಬಿಸಿಕೊಳ್ಳಲಾರಂಭಿಸಿದರು. ಇದರಿಂದ ಒಳಗೊಳಗೇ ತಮ್ಮ ಹಿಡಿತ ತಪ್ಪುತ್ತಿದೆ ಎಂದು ಆತಂಕಗೊಂಡ ರಾಮಲಿಂಗಾರೆಡ್ಡಿ ಅವರು, ಸೂಕ್ತ ಸಮಯಕ್ಕಾಗಿ ಕಾದು ಕುಳಿತಿದ್ದರು. ನಿನ್ನೆ ಎಂಟು ಮಂದಿ ಶಾಸಕರ ಜೊತೆ ರಾಮಲಿಂಗಾರೆಡ್ಡಿಯವರೂ ಕೂಡ ಹೋಗಿ ರಾಜೀನಾಮೆ ನೀಡಲು ಪರಮೇಶ್ವರ್ ಅವರ ಧೋರಣೆಗಳೇ ಕಾರಣ ಎಂದು ಹೇಳಲಾಗಿದೆ.

ಮೇಲ್ನೋಟಕ್ಕೆ ಸಾಕಷ್ಟು ಅಪಮಾನ, ಅವಮಾನ ಅನುಭವಿಸಿದ ಶಾಸಕರ ಅತೃಪ್ತಿಯನ್ನು ಬಿಜೆಪಿ ಸರಿಯಾಗಿಯೇ ಬಳಸಿಕೊಂಡಿದೆ. ಕೆಲವರಿಗೆ ಹಣಕಾಸಿನ ಜರೂರಿತ್ತು. ಇನ್ನು ಕೆಲವರಿಗೆ ಅಧಿಕಾರದ ಆಸೆ ಇತ್ತು. ಮತ್ತೂ ಕೆಲವರಿಗೆ ಸೇಡಿನ ಸಿಟ್ಟು ತೀರಿಸಿಕೊಳ್ಳಬೇಕಿತ್ತು. ಈ ಎಲ್ಲಾ ಬೇಡಿಕೆಗಳಿಗೂ ಬಿಜೆಪಿ ಸದ್ಯಕ್ಕೆ ಸ್ಪಂದಿಸಿದ್ದು ಸರ್ಕಾರವನ್ನು ಮಗುಚಿ ಹಾಕುವಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.

ಕಾಂಗ್ರೆಸ್ ಸರಿಯಾದ ನಡವಳಿಕೆಯನ್ನು ಅನುಸರಿಸಿಕೊಂಡು ಬಂದಿದ್ದರೆ ಇಂದು ಶಾಸಕರ ಮುಂದೆ ನಾಯಕತ್ವ ಮಂಡಿಯೂರಿ ಕೂರುವ ಪರಿಸ್ಥಿತಿ ಬರುತ್ತಿರಲಿಲ್ಲ. ಅಧಿಕಾರ ಇದ್ದ ಕಾಲದಲ್ಲಿ ದರ್ಪ ತೋರಿಸಿ, ಶಾಸಕರನ್ನು ಹೀನಾಯವಾಗಿ ನಡೆಸಿಕೊಂಡ ಪರಿಣಾಮ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.

ಶಾಸಕರ ಮನವೊಲಿಸಲು ಯಾವ ನಾಯಕರಿಗೂ ಈಗ ಮಾತುಕತೆ ನಡೆಸುವ ನೈತಿಕತೆ ಇಲ್ಲದೆ ಒಳಗೊಳಗೇ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ನಿನ್ನೆಯಿಂದ ನಡೆದಿರುವ ಪ್ರತಿ ಸಭೆಯಲ್ಲೂ ಪ್ರಮುಖ ನಾಯಕರು ಒಬ್ಬರ ಮೇಲೆ ಒಬ್ಬರು ಆರೋಪಗಳನ್ನು ಮಾಡುತ್ತಾ ಜಾರಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ