ದುಡ್ಡಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ-ಶಾಸಕ ಮುನಿರತ್ನ

ಬೆಂಗಳೂರು, ಜು.7-ದುಡ್ಡಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಅಭಿವೃದ್ಧಿ ವಿಚಾರಕ್ಕಾಗಿ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿರುವುದಾಗಿ ಶಾಸಕ ಮುನಿರತ್ನ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಭಗವಂತ ದುಡ್ಡಿಗಾಗಿ ರಾಜೀನಾಮೆ ಕೊಡುವಂತಹ ಸ್ಥಿತಿಯನ್ನು ನೀಡಿಲ್ಲ. ಅಭಿವೃದ್ಧಿಗೆ ಒತ್ತು ನೀಡುವುದಾದರೆ ಬಿಜೆಪಿಯಾದರೇನು, ಯಾರಾದರೇನು? ಅಭಿವೃದ್ಧಿ ಯಾರು ಮಾಡುತ್ತಾರೋ ಅವರ ಹತ್ತಿರ ಹೋಗುತ್ತೇವೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ನಮಗೆ ಗೌರವವಿದೆ. ಸಮ್ಮಿಶ್ರ ಸರ್ಕಾರದಲ್ಲಿ ಏನೇ ಆದರೂ ಸಿದ್ದರಾಮಯ್ಯ ಅವರನ್ನೇ ಹೊಣೆ ಮಾಡುತ್ತಾರೆ. ಸರ್ಕಾರ ಬಿದ್ದರೆ ಅವರೇ ಕಾರಣ ಎನ್ನುತ್ತಾರೆ. ಅವರೇಗೆ ಕಾರಣವಾಗುತ್ತಾರೆ, ಸಮ್ಮಿಶ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಹೆಸರಿಗೆ ಮಾತ್ರ ಉಪಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ ಎಂದು ಟೀಕಿಸಿದರು.

ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಶಾಸಕರನ್ನು ಕರೆದು ಒಂದು ಸಭೆ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಅಭಿವೃದ್ಧಿ ವಿಷಯದಲ್ಲಿ ನಮ್ಮನ್ನು ಕಡೆಗಣಿಸಿದ್ದಾರೆ.ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಈಗ ಸಚಿವ ಸ್ಥಾನ ನೀಡಿದರೂ ಸ್ವೀಕರಿಸುವ ಸ್ಥಿತಿಯಲ್ಲಿಲ್ಲ ಎಂದರು.

ಎಲಿವೇಟೆಡ್ ಕಾರಿಡಾರ್ ಯೋಜನೆ ವಿಚಾರದಲ್ಲೂ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಅದರ ಬಗ್ಗೆ ಬೇಸರವಿದೆ ಎಂದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ, ಆಡಳಿತವೂ ಚೆನ್ನಾಗಿತ್ತು, ಅಭಿವೃದ್ಧಿಯೂ ಆಗುತ್ತಿತ್ತು ಎಂದರು.

ತಾವು ನಿರ್ಮಾಪಕರಾಗಿದ್ದು, ತಮ್ಮ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಮೊದಲೇ ನಿಗದಿಯಾಗಿತ್ತು. ಹಾಗಾಗಿ ಮುಂಬೈಗೆ ಹೋಗಿಲ್ಲ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ರಾಮಲಿಂಗಾರೆಡ್ಡಿ ಅವರು ಮಾತನಾಡಿರುವುದು ನಿಜ. ಮೊದಲೇ ಮಾತನಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.

ರಾಮಲಿಂಗಾರೆಡ್ಡಿ ಅವರು ಕಾಂಗ್ರೆಸ್ ಪಕ್ಷ ಕಟ್ಟಿದ್ದಾರೆ ಅವರಿಗೆ ಮಂತ್ರಿ ಸ್ಥಾನ ನೀಡದೆ ಕಡೆಗಣಿಸಲಾಯಿತು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ