ಸ್ಪೀಕರ್ ರಾಜೀನಾಮೆ ಪತ್ರ ಅಂಗೀಕರಿಸಲು ವಿಳಂಭ ಧೋರಣೆ ಅನುಸರಿಸಿದರೆ-ಸ್ಪೀಕರ್ ವಿರುದ್ಧವೇ ಅವಿಶ್ವಾಸ ನಿರ್ಣಯ ಮಂಡಿಸಲು ಸಜ್ಜಾಗಿರುವ ಬಿಜೆಪಿ

ಬೆಂಗಳೂರು,ಜು.7-ಒಂದು ವೇಳೆ ಶಾಸಕರ ರಾಜೀನಾಮೆ ಪತ್ರವನ್ನು ಅಂಗೀಕರಿಸಲು ಮೀನಾಮೇಷ ಇಲ್ಲವೇ ವಿಳಂಬ ಧೋರಣೆ ಅನುಸರಿಸಿದರೆ ವಿಧಾನಸಭೆ ಸ್ಪೀಕರ್ ರಮೇಶ್‍ಕುಮಾರ್ ವಿರುದ್ಧವೇ ಅವಿಶ್ವಾಸ ನಿರ್ಣಯ ಮಂಡಿಸಲು ಪ್ರತಿಪಕ್ಷ ಬಿಜೆಪಿ ಸಜ್ಜಾಗಿದೆ.

ಇದೇ ಶುಕ್ರವಾರದಂದು ಅಧಿವೇಶನ ಆರಂಭವಾಗಲಿದ್ದು, ನಿನ್ನೆ ರಾಜೀನಾಮೆ ನೀಡಿರುವ 12 ಮಂದಿ ಹಾಗೂ ಕಳೆದ ಸೋಮವಾರ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದರು.

ಮಂಗಳವಾರ ಶಾಸಕರ ರಾಜೀನಾಮೆ ಪತ್ರವನ್ನು ಪರಿಶೀಲನೆ ಮಾಡುವುದಾಗಿ ಈಗಾಗಲೇ ರಮೇಶ್‍ಕುಮಾರ್ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ.

ಒಂದು ವೇಳೆ ತಾಂತ್ರಿಕ ಕಾರಣ ಇಲ್ಲವೇ ಬೇರೊಂದು ಕಾರಣಕ್ಕಾಗಿ ರಾಜೀನಾಮೆಯನ್ನು ಅಂಗೀಕರಿಸಲು ವಿಳಂಬ ಮಾಡಿದರೆ ಅವರ ವಿರುದ್ಧವೇ ಅವಿಶ್ವಾಸ ನಿರ್ಣಯ ಮಂಡಿಸಲು ಚಿಂತನೆ ನಡೆಸಲಾಗಿದೆ.

ನಿಯಮಾವಳಿಯ ಪ್ರಕಾರ ಸರ್ಕಾರ ಇಲ್ಲವೇ ಸ್ಪೀಕರ್ ವಿರುದ್ಧ ಅಧಿವೇಶನದ ಸಂದರ್ಭದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಬೇಕೆಂದರೆ 14 ದಿನ ಮುಂಚಿತವಾಗಿಯೇ ನೋಟಿಸ್ ನೀಡಬೇಕಾಗುತ್ತದೆ.

ಮಂಗಳವಾರ ಸ್ಪೀಕರ್ ತೆಗೆದುಕೊಳ್ಳುವ ತೀರ್ಮಾನದ ನಂತರ ಬಿಜೆಪಿ ಈ ಬಗ್ಗೆ ಕಾರ್ಯೋನ್ಮುಖವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

12ರಿಂದ 26ರವರೆಗೆ ಅಧಿವೇಶನ ನಡೆಯಲಿದೆ. ಬುಧವಾರ ನೋಟಿಸ್ ನೀಡಿ ಸ್ಪೀಕರ್ ವಿರುದ್ಧವೇ ಅವಿಶ್ವಾಸ ನಿರ್ಣಯ ಮಂಡಿಸುತ್ತಿದ್ದೇವೆ ಎಂದು ವಿಧಾನಸಭೆಯ ಕಾರ್ಯದರ್ಶಿ ಅವರಿಗೆ ನೋಟಿಸ್ ನೀಡಲು ಮುಂದಾಗಿದೆ.

ಶಾಸಕರೆಲ್ಲರೂ ನಿಯಮಾವಳಿ ಪ್ರಕಾರವೇ ವಿಧಾನಸಭೆ ಕಾರ್ಯದರ್ಶಿಯವರನ್ನು ಭೇಟಿಯಾಗಿ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಅವರಿಗೆ ಸ್ವೀಕೃತಿ ಪತ್ರವನ್ನು ಸಹ ನೀಡಲಾಗಿದೆ. ಈ ಎಲ್ಲ ಬೆಳವಣಿಗೆಗಳನ್ನು ರಾಜ್ಯಪಾಲರ ಗಮನಕ್ಕೂ ಸಹ ತರಲಾಗಿದೆ. ಇಷ್ಟಾಗ್ಯೂ ಸ್ಪೀಕರ್ ವಿಳಂಬ ನೀತಿ ಅನುಸರಿಸಿದರೆ ಅವಿಶ್ವಾಸ ನಿರ್ಣಯ ಮಂಡಿಸಬೇಕೆಂಬ ಚರ್ಚೆ ಪಕ್ಷದ ವಲಯಗಳಲ್ಲಿ ಕೇಳಿಬಂದಿದೆ.

ಈಗಾಗಲೇ ದೋಸ್ತಿ ಪಕ್ಷದಿಂದ 13 ಮಂದಿ ಶಾಸಕರು ರಾಜೀನಾಮೆ ನೀಡಿದ್ದಾರೆ. ನಾಳೆಯೊಳಗೆ ಇನ್ನು 8ರಿಂದ 10 ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ಹಬ್ಬಿದೆ.

ವಿಧಾನಸಭೆಯ ಒಟ್ಟು 224 ಸದಸ್ಯರಲ್ಲಿ ಮೈತ್ರಿ ಕೂಟ 118 ಸದಸ್ಯರನ್ನು ಹೊಂದಿದೆ. ಜೊತೆಗೆ ಬಿಎಸ್‍ಪಿಯ ಮಹೇಶ್ ಸರ್ಕಾರದಿಂದ ಹೊರಬಂದಿದ್ದರೂ ಬೆಂಬಲ ನೀಡುವ ಸಾಧ್ಯತೆ ಹೆಚ್ಚಾಗಿದೆ.

ಸದ್ಯ 13 ಮಂದಿ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಹೀಗಾಗಿ ದೋಸ್ತಿ ಪಕ್ಷಗಳ ಬೆಂಬಲ 106ಕ್ಕೆ ಕುಸಿದಿದೆ.ಮಂಗಳವಾರ 13 ಶಾಸಕರ ರಾಜೀನಾಮೆ ಅಂಗೀಕಾರವಾದರೆ ವಿಧಾನಸಭೆಯ ಸಂಖ್ಯೆ 211ಕ್ಕೆ ಇಳಿಯುತ್ತದೆ. ಆಗ ಯಾವುದೇ ಸರ್ಕಾರ ಬಹುಮತ ಸಾಬೀತುಪಡಿಸಲು 106 ಸದಸ್ಯರ ಬೆಂಬಲ ಇರಬೇಕು.

ನಾಳೆ ಇನ್ನಷ್ಟು ಶಾಸಕರು ರಾಜೀನಾಮೆ ಕೊಟ್ಟರೆ ನಿಶ್ಚಿತವಾಗಿಯೂ ಸರ್ಕಾರ ಪತನವಾಗುವುದರಲ್ಲಿ ಅನುಮಾನವೇ ಇಲ್ಲ.ಇದನ್ನು ಅಸ್ತ್ರವಾಗಿಟ್ಟುಕೊಂಡೇ ಬಿಜೆಪಿ ಸ್ಪೀಕರ್ ವಿರುದ್ಧ ದಾಳ ಉರುಳಿಸಲು ಸಜ್ಜಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ