ನಾಳೆ ರಾಜೀನಾಮೆ ನೀಡಲು ಮುಂದಾಗಿರುವ 8ರಿಂದ 10 ಶಾಸಕರು

ಬೆಂಗಳೂರು,ಜು.7- ಈಗಾಗಲೇ 13 ಮಂದಿ ಶಾಸಕರು ದೋಸ್ತಿ ಸರ್ಕಾರಕ್ಕೆ ಸೋಡಾ ಚೀಟಿ ನೀಡಿ ಮುಂಬೈ ಸೇರಿರುವ ಬೆನ್ನಲ್ಲೇ ನಾಳೆ ಇನ್ನು 8ರಿಂದ 10 ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಶಾಸಕರಾದ ಸೌಮ್ಯರೆಡ್ಡಿ(ಜಯನಗರ), ರೋಷನ್‍ಬೇಗ್(ಶಿವಾಜಿನಗರ), ಲಿಂಗೇಶ್(ಬೇಲೂರು), ತನ್ವೀರ್ ಸೇಠ್(ನರಸಿಂಹರಾಜ), ಅನಿಲ್ ಚಿಕ್ಕಮಾದು(ಎಚ್.ಡಿ.ಕೋಟೆ), ಶ್ರೀನಿವಾಸಗೌಡ(ಕೋಲಾರ), ಡಾ.ಕೆ.ಸುಧಾಕರ್(ಚಿಕ್ಕಬಳ್ಳಾಪುರ), ಸುಬ್ಬಾರೆಡ್ಡಿ(ಬಾಗೇಪಲ್ಲಿ) ಕೃಷ್ಣಾರೆಡ್ಡಿ( ಚಿಂತಾಮಣಿ), ಅಂಜಲಿ ನಿಂಬಾಳ್ಕರ್(ಖಾನಾಪುರ), ಶ್ರೀಮಂತ ಪಾಟೀಲ್(ಕಾಗವಾಡ), ಗಣೇಶ್ ಹುಕ್ಕೇರಿ(ಚಿಕ್ಕೋಡಿ) ಅವರು ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ನಾಳೆ ಅಥವಾ ಮಂಗಳವಾರದೊಳಗೆ ಕಾಂಗ್ರೆಸ್-ಜೆಡಿಎಸ್‍ನ ಸುಮಾರು 8ರಿಂದ 10ಕ್ಕೂ ಹೆಚ್ಚು ಶಾಸಕರು ಯಾವುದೇ ಸಂದರ್ಭದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಇವರು ಕೂಡ ಮುಂಬೈಗೆ ತೆರಳಲು ಸಿದ್ದರಾಗಿದ್ದಾರೆ.

ಒಂದು ವೇಳೆ ಇಷ್ಟು ಮಂದಿ ಶಾಸಕರು ರಾಜೀನಾಮೆ ನೀಡಿದರೆ ಈಗಾಗಲೇ ಅಲ್ಪಮತಕ್ಕೆ ಕುಸಿದು ಬಹುಮತ ಕಳೆದುಕೊಳ್ಳುವ ಹಂತದಲ್ಲಿರುವ ದೋಸ್ತಿ ಸರ್ಕಾರ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ನಿಚ್ಚಳವಾಗಿದೆ.

ಈಗಾಗಲೇ 13 ಶಾಸಕರು ರಾಜೀನಾಮೆ ನೀಡಿರುವುದರಿಂದ ಒಂದು ವೇಳೆ ನಾಳೆ ಅಥವಾ ಮಂಗಳವಾರ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆದು 10ಕ್ಕೂ ಹೆಚ್ಚು ಮಂದಿ ಶಾಸಕರು ರಾಜೀನಾಮೆ ಕೊಟ್ಟರೆ, ಸಮ್ಮಿಶ್ರ ಸರ್ಕಾರ ಉಳಿಯಲು ಪವಾಡವೇ ನಡೆಯಬೇಕಾಗುತ್ತದೆ.

ಈ ಎಲ್ಲ ಶಾಸಕರು ಈಗಾಗಲೇ ರಾಜೀನಾಮೆ ನೀಡಲು ಸಜ್ಜಾಗಿದ್ದು, ನಾಳೆ ವಿಧಾನಸಭೆಯ ಕಾರ್ಯದರ್ಶಿ ವಿಶಾಲಕ್ಷಿ ಅವರಿಗೆ ಇಲ್ಲವೇ ಮಂಗಳವಾರ ಸ್ಪೀಕರ್ ರಮೇಶ್‍ಕುಮಾರ್ ಅವರಿಗೂ ರಾಜೀನಾಮೆ ಪತ್ರವನ್ನು ಖುದ್ದು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂಬೈನಲ್ಲಿರುವ ಹಿರಿಯರೊಬ್ಬರು ಈ ಎಲ್ಲ ಅತೃಪ್ತರನ್ನು ನಿರಂತರವಾಗಿ ಸಂಪರ್ಕ ಮಾಡುತ್ತಿದ್ದು, ಹೆಚ್ಚು ವಿಳಂಬ ಮಾಡದೆ ನಾಳೆ ಅಥವಾ ಮಂಗಳವಾರದೊಳಗೆ ರಾಜೀನಾಮೆ ನೀಡಬೇಕೆಂದು ಸೂಚನೆ ಕೊಟ್ಟಿದ್ದಾರೆ.

ಕನಿಷ್ಟ ಪಕ್ಷ 22ರಿಂದ 25 ಶಾಸಕರಿಂದ ರಾಜೀನಾಮೆ ಕೊಡಿಸಿ ದೋಸ್ತಿಗಳಿಗೆ ಅಧಿವೇಶನ ಆರಂಭವಾಗುವುದರೊಳಗೆ ಮರ್ಮಾಘಾತ ನೀಡಲು ತೆರೆಮರೆಯಲ್ಲಿ ಬಿಜೆಪಿ ನಾಯಕರು ಕಾರ್ಯೋನ್ಮುಖರಾಗಿದ್ದಾರೆ. ಆದರೆ ನೇರವಾಗಿ ಎಲ್ಲಿಯೂ ಕಾಣಿಸಿಕೊಳ್ಳದೆ ಎಲ್ಲವೂ ಗುಪ್‍ಚುಪ್ ಆಗಿ ನಡೆಯುತ್ತಿದೆ.

ಕಾಂಗ್ರೆಸ್-ಜೆಡಿಎಸ್‍ನಿಂದ ರಾಜೀನಾಮೆ ನೀಡಿರುವ ಶಾಸಕರ ಜೊತೆ ಎಲ್ಲಿಯೂ ಗುರುತಿಸಿಕೊಳ್ಳದಂತೆ ಹೈಕಮಾಂಡ್ ಸ್ಪಷ್ಟ ಸೂಚನೆ ಕೊಟ್ಟಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆಯ ಸೂತ್ರಧಾರರು ಮಾತ್ರ ಅತೃಪ್ತರಿಗೆ ಗಾಳ ಹಾಕುತ್ತಿದ್ದಾರೆ.

ಸರ್ಕಾರ ಅಸ್ಥಿರಗೊಳುವುದರಲ್ಲಿ ಬಿಜೆಪಿ ಪಾತ್ರವಿಲ್ಲ ಎಂಬುದು ಜನರಿಗೆ ಮನವರಿಕೆಯಾಗಬೇಕು.ಅವರಾಗಿಯೇ ಕಚ್ಚಾಡಿಕೊಂಡು ಸರ್ಕಾರವನ್ನು ಪತನಗೊಳಿಸಿದ್ದಾರೆ. ಇದರಲ್ಲಿ ನಮ್ಮದೇನೂ ಪಾತ್ರವಿಲ್ಲ ಎಂಬಂತೆ ರಹಸ್ಯವಾಗಿಯೇ ಕಾರ್ಯಾಚರಣೆ ನಡೆಸಲು ಕೇಂದ್ರ ವರಿಷ್ಠರು ಸೂಚನೆ ಕೊಟ್ಟಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ