ಬೆಂಗಳೂರು,ಜು.6- ರಾಜ್ಯ ರಾಜಕಾರಣ ಸ್ಫೋಟಕ ತಿರುವು ಪಡೆದುಕೊಂಡಿದ್ದು, ಬಹುದಿನಗಳಿಂದ ಅಸಮಾಧಾನಗೊಂಡಿದ್ದ ದೋಸ್ತಿ ಪಕ್ಷದ 8 ಮಂದಿ ಭಿನ್ನಮತೀಯ ಅತೃಪ್ತ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಈ ದಿಢೀರ್ ಬೆಳವಣಿಗೆಯಿಂದಾಗಿ ಸಮ್ಮಿಶ್ರ ಸರ್ಕಾರ ಪತನದ ಅಂಚಿಗೆ ಬಂದಿದೆ.ಇನ್ನು ಕೆಲವು ಶಾಸಕರು ಸಂಜೆ ಅಥವಾ ನಾಳೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಬಿ.ಸಿ.ಪಾಟೀಲ್(ಹಿರೇಕೆರೂರು), ಪ್ರತಾಪ್ಗೌಡ ಪಾಟೀಲ್(ಮಸ್ಕಿ), ರಮೇಶ್ ಜಾರಕಿಹೊಳಿ(ಗೋಕಾಕ್), ಎಚ್.ವಿಶ್ವನಾಥ್(ಹುಣಸೂರು), ನಾರಾಯಣಗೌಡ(ಕೆ.ಆರ್.ಪೇಟೆ), ಶಿವರಾಮ್ ಹೆಬ್ಬಾರ್(ಯಲ್ಲಪುರ), ಗೋಪಾಲಯ್ಯ(ಮಹಾಲಕ್ಷ್ಮಿಲೇಔಟ್) ರೋಷನ್ ಬೇಗ್( ಶಿವಾಜಿನಗರ), ನಾಗೇಂದ್ರ(ಬಳ್ಳಾರಿ ಗ್ರಾಮಾಂತರ) ಅವರುಗಳು ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ.
ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾಗಲು ವಿಧಾನಸೌಧಕ್ಕೆ ಬೆಳಗ್ಗೆ ಏಕಕಾಲದಲ್ಲಿ ಇವರೆಲ್ಲರು ಆಗಮಿಸಿದರು.
ಆದರೆ ಆ ವೇಳೆಗಾಗಲೇ ಸ್ಪೀಕರ್ ಅನ್ಯ ಕಾರ್ಯನಿಮಿತ್ತ ತಮ್ಮ ಕಚೇರಿಯಿಂದ ಹೊರಹೋದ ಹಿನ್ನೆಲೆಯಲ್ಲಿ ಎಲ್ಲ ಶಾಸಕರು ವಿಧಾನಸಭೆಯ ಕಾರ್ಯದರ್ಶಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.
ವಿಶೇಷವೆಂದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ಬಹುತೇಕರು ಸಮನ್ವಯ ಸಮಿತಿ ಅಧ್ಯಕ್ಷ , ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಂಬಲಿಗರು.
ಇನ್ನೊಂದು ವಿಶೇಷವೆಂದರೆ ಯಾರೂ ಕೂಡ ನಿರೀಕ್ಷೆ ಮಾಡದ ರೀತಿಯಲ್ಲಿ ಜೆಡಿಎಸ್ನ ಮೂವರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ದಳಪತಿಗಳಿಗೆ ಮರ್ಮಾಘಾತ ನೀಡಿದಂತಾಗಿದೆ.
ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಎಚ್.ವಿಶ್ವನಾಥ್, ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ.ಗೋಪಾಲಯ್ಯ, ಕೆ.ಆರ್.ಪೇಟೆಯ ನಾರಾಯಣಗೌಡ ಅವರು ಕೂಡ ರಾಜೀನಾಮೆ ನೀಡಿರುವುದು ಆಶ್ಚರ್ಯಕರ ಬೆಳವಣಿಗೆಯಾಗಿದೆ.
ಶಾಸಕರಾದ ರಾಮಲಿಂಗಾರೆಡ್ಡಿ(ಬಿಟಿಎಂ ಲೇಔಟ್), ಸೌಮ್ಯರೆಡ್ಡಿ (ಜಯನಗರ), ಮಹೇಶ್ ಕುಮಟಹಳ್ಳಿ(ಅಥಣಿ), ಬಿ.ಸಿ.ಪಾಟೀಲ್(ಹಿರೇಕೆರೂರು), ಪ್ರತಾಪ್ಗೌಡ ಪಾಟೀಲ್(ಮಸ್ಕಿ), ರಮೇಶ್ ಜಾರಕಿಹೊಳಿ(ಗೋಕಾಕ್), ಎಸ್.ಟಿ.ಸೋಮಶೇಖರ್(ಯಶವಂತಪುರ), ಎಚ್.ವಿಶ್ವನಾಥ್(ಹುಣಸೂರು), ನಾರಾಯಣಗೌಡ(ಕೆ.ಆರ್.ಪೇಟೆ), ಶಿವರಾಮ್ ಹೆಬ್ಬಾರ್(ಯಲ್ಲಪುರ), ಸುಬ್ಬಾರೆಡ್ಡಿ (ಬಾಗೇಪಲ್ಲಿ), ರೋಷನ್ ಬೇಗ್( ಶಿವಾಜಿನಗರ), ನಾಗೇಂದ್ರ(ಬಳ್ಳಾರಿ ಗ್ರಾಮಾಂತರ) ಅವರುಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಶೇಷವೆಂದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ಬಹುತೇಕರು ಸಮನ್ವಯ ಸಮಿತಿ ಅಧ್ಯಕ್ಷ , ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಂಬಲಿಗರು.
ಕಳೆದ ರಾತ್ರಿ ಈ ಎಲ್ಲ ಶಾಸಕರು ರಹಸ್ಯ ಸ್ಥಳವೊಂದರಲ್ಲಿ ಸಭೆ ಸೇರಿ ಮುಂದಿನ ರಾಜಕೀಯ ಬೆಳವಣಿಗೆಗಳ ಕುರಿತಂತೆ ಚರ್ಚೆ ನಡೆಸಿದ್ದಾರೆ. ಸರ್ಕಾರದಲ್ಲಿ ಯಾವುದೇ ರೀತಿಯ ಕೆಲಸ ಆಗದಿರುವುದು, ಕ್ಷೇತ್ರಕ್ಕೆ ಅನುದಾನ ನೀಡುವಲ್ಲೂ ತಾರತಮ್ಯ, ಅಧಿಕಾರಿಗಳ ವರ್ಗಾವಣೆಯಲ್ಲೂ ಹಸ್ತಕ್ಷೇಪದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಸರ್ಕಾರದಲ್ಲಿ ಕೆಲಸವಾಗದ ಮೇಲೆ ನಾವು ಯಾವ ಕಾರಣಕ್ಕಾಗಿ ಮುಂದುವರೆಯಬೇಕು?ಇದರ ಬದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಉಪಚುನಾವಣೆ ಎದುರಿಸೋಣ ಎಂಬ ಒಮ್ಮತ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಎಚ್ಚೆತ್ತುಕೊಂಡ ಕಾಂಗ್ರೆಸ್ ಮುಖಂಡರು ಕೆಲವು ಭಿನ್ನಮತೀಯರ ಮನವೊಲಿಸಲು ಮುಂದಾದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವ ಹಿರಿಯ ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ ಅವರನ್ನು ನಿವಾಸದಲ್ಲಿ ಭೇಟಿಯಾಗಿ ಪಕ್ಷ ಬಿಟ್ಟು ಹೋಗದಂತೆ ಮನವಿ ಮಾಡಿದರು.
ಆದರೆ ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರಾಮಲಿಂಗಾರೆಡ್ಡಿ ಈಗ ನಮ್ಮನ್ನು ಮನವೊಲಿಸಲು ಬಂದಿದ್ದೀರಿ. ಹಿರಿಯರನ್ನು ಪಕ್ಷದಲ್ಲಿ ನಡೆಸಿಕೊಳ್ಳುವ ರೀತಿ ಇದೇನಾ? ನಮ್ಮನ್ನು ಸಂಪುಟದಿಂದ ಹೊರಗಿಟ್ಟು ಅಸಮಾಧಾನಗೊಂಡಿರುವವರಿಗೆ ಮಣೆ ಹಾಕುತ್ತಿದ್ದೀರಿ.ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರಿಗೆ ಒಂದು ದೂರವಾಣಿ ಕರೆ ಮಾಡುವಷ್ಟು ಸೌಜನ್ಯವಿಲ್ಲವೆ? ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿದೇಶದಲ್ಲಿ ಆರಾಮಾಗಿದ್ದಾರೆ. ಈಗ ನಮ್ಮನ್ನು ಯಾವ ಪುರುಷಾರ್ಥಕ್ಕೆ ಸಂಧಾನ ನಡೆಸುತ್ತೀರಿ ಎಂದು ರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆ.
ಇನ್ನು ಸಿದ್ದರಾಮಯ್ಯ ಕೂಡ ತನ್ನ ಬೆಂಬಲಿಗ ಶಾಸಕರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಹೋಗಬೇಡಿ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಉಪಚುನಾವಣೆ ಗೆಲ್ಲುವುದು ಅಷ್ಟು ಸುಲಭವಲ್ಲ. ನಿಮ್ಮ ಏನೇ ಸಮಸ್ಯೆಗಳಿದ್ದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜೊತೆ ಮಾತುಕತೆ ನಡೆಸುತ್ತೇನೆ.
ಸೋಮವಾರ ಅಮೆರಿಕದಿಂದ ಮುಖ್ಯಮಂತ್ರಿ ಬೆಂಗಳೂರಿಗೆ ಬರುತ್ತಾರೆ ಇನ್ನು ಯಾವುದೇ ಸಮಸ್ಯೆಗಳಿದ್ದರೂ ಮುಖಾಮುಖಿ ಭೇಟಿಯಾಗಿ ಕ್ಷೇತ್ರಕ್ಕೆ ಅನುದಾನ ಬಿಡುಗಡೆ, ನಿನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಸೇರಿದಂತೆ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ.
ಆದರೆ ಬಹುತೇಕ ಶಾಸಕರು ತಮ್ಮ ದೂರವಾಣಿ ಕರೆಗಳನ್ನು ಸ್ವಿಚ್ ಆಫ್ ಮಾಡಿದ್ದು, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಇದು ಮೈತ್ರಿ ನಾಯಕರ ನಿದದೆಗೆಡುವಂತೆ ಮಾಡಿದೆ.