ಕೆಆರ್‍ಎಸ್‍ನಲ್ಲಿ ಕಡಿಮೆಯಾಗಿರುವ ನೀರಿನ ಸಂಗ್ರಹ

ಬೆಂಗಳೂರು, ಜು.6- ಕೆಆರ್‍ಎಸ್‍ನಲ್ಲಿ ಸಂಗ್ರಹವಾಗಿರುವ ನೀರು ಇನ್ನೊಂದು ತಿಂಗಳಿಗೆ ಮಾತ್ರ ಸಾಕಾಗಲಿದ್ದು, ಅನಂತರ ಬೆಂಗಳೂರಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಆತಂಕ ವ್ಯಕ್ತಪಡಿಸಿದರು.

ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಮ್ ಅವರ 33ನೇ ಪುಣ್ಯಸ್ಮರಣೆ ಅಂಗವಾಗಿ ವಿಧಾನಸೌಧ ಆವರಣದಲ್ಲಿರುವ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆಆರ್‍ಎಸ್‍ನಲ್ಲಿರುವ 80 ಅಡಿ ನೀರು ಇನ್ನು ಒಂದು ತಿಂಗಳು ಮಾತ್ರ ಬಳಸಲು ಸಾಧ್ಯವಿದೆ. ಅನಂತರ ನೀರಿನ ಕೊರತೆ ಎದುರಾಗಲಿದೆ. ಕಾವೇರಿ ಅಚ್ಚುಕಟ್ಟು ಭಾಗದಲ್ಲಿ ಮಳೆಯಾಗಿ ನೀರಿನ ಒಳ ಹರಿವು ಹೆಚ್ಚಾದರೆ ಮಾತ್ರ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಇಲ್ಲವಾದರೆ ಬೆಂಗಳೂರಿಗೆ ಒಂದು ತಿಂಗಳ ನಂತರ ನೀರಿನ ಕೊರತೆ ಉಂಟಾಗಲಿದೆ ಎಂದು ಹೇಳಿದರು.

ಮಳೆಯಾಗದೇ ಇದ್ದರೆ ಬೆಂಗಳೂರಿನ ನೀರಿನ ಸಮಸ್ಯೆಗೆ ಪರ್ಯಾಯವೇ ಇಲ್ಲ. ರಾಜ್ಯ ಸರ್ಕಾರ ಲಿಂಗನಮಕ್ಕಿ ಹಾಗೂ ಇತರ ಜಲಾಶಯಗಳಿಂದ ಬೆಂಗಳೂರಿಗೆ ನೀರು ತರುವ ಪ್ರಯತ್ನ ನಡೆಸುತ್ತಿದೆ. ಲಿಂಗನಮಕ್ಕಿಯಿಂದ ಶಿವಮೊಗ್ಗ, ಚಿತ್ರದುರ್ಗ, ವಾಣಿವಿಲಾಸ ಸಾಗರ ಮಾರ್ಗವಾಗಿ ಬೆಂಗಳೂರಿಗೆ ನೀರು ತರುವ ಕುರಿತು ಪ್ರಸ್ತಾವನೆಗಳಿವೆ. ಅದಕ್ಕೆ ಸಂಬಂಧಪಟ್ಟಂತೆ ಸಮಗ್ರ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ರೀತಿ ಯೋಜನೆಗಳಿಗೆ ಪರ-ವಿರೋಧ ಕೇಳಿ ಬರುವುದು ಸಾಮಾನ್ಯ. ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಜಿಪಿಆರ್ ತಯಾರಾದ ಬಳಿಕ ಸರ್ಕಾರ ಪರಿಶೀಲನೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ವಿವರಿಸಿದರು.

ಮಳೆ ಕೊರತೆ ಪ್ರಕೃತಿ ದತ್ತವಾದ ಸಮಸ್ಯೆ.ಅದನ್ನು ಅನಿವಾರ್ಯವಾಗಿ ನಾವು ಎದುರಿಸಲೇಬೇಕು. ಪರ್ಯಾಯ ಎಂಬುದು ಇಲ್ಲ. ಇನ್ನು ಎರಡು-ಮೂರು ದಿನಗಳಿಂದ ರಾಜ್ಯದ ಅಲ್ಲಲ್ಲಿ ಮಳೆ ಸುರಿಯುವ ಲಕ್ಷಣಗಳು ಕಾಣಿಸುತ್ತಿವೆ. ಮೋಡಗಳು ಹೆಚ್ಚಾಗುತ್ತಿವೆ. ಸಹಜವಾಗಿ ನಮ್ಮಲ್ಲೂ ಕೂಡ ಮಳೆ ಬಂದು ಸಮಸ್ಯೆ ಬಗೆಹರಿಯಬಹುದು ಎಂಬ ನಿರೀಕ್ಷೆ ಇದೆ ಎಂದರು.

ನದಿ ಜೋಡಣೆಗೆ ಸಂಬಂಧಪಟ್ಟಂತೆ ಈ ಹಿಂದೆ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಮಹಾರಾಷ್ಟ್ರದ ಸಚಿವರಾಗಿದ್ದ ಪ್ರಭು ಅವರ ನೇತೃತ್ವದಲ್ಲಿ ನದಿ ಜೋಡಣಾ ಆಯೋಗವನ್ನು ರಚನೆ ಮಾಡಲಾಗಿತ್ತು.ಆ ಆಯೋಗ ವರದಿ ನೀಡಿದೆ. ಆಯಾ ರಾಜ್ಯಗಳ ಹಾಗೂ ಅಂತಾರಾಜ್ಯ ನದಿಗಳನ್ನು ಜೋಡಿಸುವ ವಿಷಯ ಪ್ರಸ್ತಾಪವಾಗಿದೆ. ಕರ್ನಾಟಕದಲ್ಲಿ ಹೇಮಾವತಿ, ಕಾವೇರಿ ಸೇರಿದಂತೆ ಇತರ ನದಿಗಳ ಜೋಡಿಸುವ ಬಗ್ಗೆಯೂ ಅದರಲ್ಲಿ ಉಲ್ಲೇಖವಿದೆ ಎಂದು ತಿಳಿಸಿದರು.

ಸದಾಶಿವ ಆಯೋಗದ ವರದಿ ಜಾರಿ:
ಮೀಸಲಾತಿ ಸೌಲಭ್ಯಗಳ ಹಂಚಿಕೆ ಸಂಬಂಧಪಟ್ಟಂತೆ ನ್ಯಾಯಮೂರ್ತಿ ಸದಾಶಿವ ಆಯೋಗ ನೀಡಿರುವ ವರದಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ.ಬಹುದಿನಗಳ ಈ ಬೇಡಿಕೆಯನ್ನು ರಾಜ್ಯ ಸರ್ಕಾರ ಗಮನಿಸಿದೆ.ನಾವು ಅಧಿಕಾರಕ್ಕೆ ಬಂದ ಆರಂಭದಿಂದಲೂ ಈ ಬಗ್ಗೆ ಚರ್ಚೆ ಮಾಡಿದ್ದೇವೆ. ಜನರ ಬೇಡಿಕೆಯಂತೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಬಾಬು ಜಗಜೀವನರಾಮ್ ಅವರು ದೇಶ ಕಂಡ ಅಪ್ರತಿಮ ರಾಜಕಾರಣಿ.ಅವರ ವಿಚಾರಧಾರೆಗಳ ಆಧಾರದ ಮೇಲೆ ಅವರು ಕೃಷಿ ಕ್ಷೇತ್ರವನ್ನು ಅಭಿದ್ಧಿಪಡಿಸಿದ್ದರು.

ಭಾರತ ಇಂದು ಆಹಾರ ಸ್ವಾವಲಂಬನೆ ಸಾಧಿಸಿದ್ದರೆ ಅದಕ್ಕೆ ಬಾಬು ಜಗಜೀವನರಾಮ್ ಅವರು ರೂಪಿಸಿದ ನೀತಿಗಳೇ ಕಾರಣ ಎಂದು ಪರಮೇಶ್ವರ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ