ಬೆಂಗಳೂರು,ಜು.6- ಪಕ್ಷವನ್ನು ಇನ್ನಷ್ಟು ಬೇರುಮಟ್ಟದಿಂದ ಸಂಘಟಿಸಲು ಬಿಜೆಪಿ ಹಮ್ಮಿಕೊಂಡಿರುವ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಇಂದು ವಿದ್ಯುಕ್ತವಾಗಿ ಚಾಲನೆ ದೊರಕಲಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದಗೌಡ, ಸದಸ್ಯತ್ವ ಅಭಿಯಾನದ ಸದಸ್ಯರಾದ ಶಾಸಕ ಸಿ.ಎನ್.ಅಶ್ವಥ್ ನಾರಾಯಣ, ಕೇಂದ್ರದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರುಳೀಧರನ್, ಮುಖಂಡರಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್ ಸೇರಿದಂತೆ ಮತ್ತಿತರ ಮುಖಂಡರು ಸಂಜೆ 4 ಗಂಟೆಗೆ ಜಯನಗರದ ವಾಣಿಜ್ಯ ಸಂಕೀರ್ಣದಲ್ಲಿ ಚಾಲನೆ ನೀಡಲಿದ್ದಾರೆ.
ನಾಳೆಯಿಂದ ಮಂಡಲ, ಬೂತ್ ಮಟ್ಟ, ಹೋಬಳಿ ಮಟ್ಟದಲ್ಲೂ ಸದಸ್ಯತ್ವ ನೋಂದಣಿ ಅಭಿಯಾನ ನಡೆಯಲಿದೆ.ಸುಮಾರು 1 ತಿಂಗಳ ಕಾಲ ಅಭಿಯಾನ ನಡೆಯಲಿದ್ದು, ಆಗಸ್ಟ್ 11ರಂದು ಯಡಿಯೂರಪ್ಪ ಅಭಿಯಾನದ ಕುರಿತು ಕೇಂದ್ರ ಘಟಕಕ್ಕೆ ವರದಿ ಸಲ್ಲಿಸಲಿದ್ದಾರೆ.
ಈ ಬಾರಿ ರಾಜ್ಯದಲ್ಲಿ ಒಟ್ಟು 50 ಲಕ್ಷ ಹೊಸ ಸದಸ್ಯರನ್ನು ನೋಂದಣಿ ಮಾಡಿಸುವ ಜೊತೆಗೆ ಎರಡು ಲಕ್ಷ ಸಕ್ರೀಯ ಸದಸ್ಯರನ್ನು ರೂಪಿಸುವ ಗುರಿಯನ್ನು ಬಿಜೆಪಿ ಹೊಂದಿದೆ.
ಇಂದಿನಿಂದ ಆರಂಭವಾಗಲಿರುವ ಅಭಿಯಾನ ಆಗಸ್ಟ್ 11ರವರೆಗೂ ನಡೆಯಲಿದ್ದು, ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಒಟ್ಟು ಐದು ಲಕ್ಷ ಕಾರ್ಯಕರ್ತರು ತೊಡಗಿಸಿಕೊಳ್ಳಲಿದ್ದಾರೆ. ಪಕ್ಷದ ತತ್ವ, ಸಿದ್ದಾಂತ, ಆದರ್ಶಗಳ ಬಗ್ಗೆ ಆಸಕ್ತಿ ಇರುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತದೆ.
ಬಿಜೆಪಿ ಸದಸ್ಯರಾಗುವವರು ಅಪರಾಧ, ಭಯೋತ್ಪಾದನೆ ಚಟುವಟಿಕೆ, ಕ್ರಿಮಿನಲ್ ಹಿನ್ನೆಲೆ, ವಂಚನೆ ಪ್ರಕರಣಗಳು ಸೇರಿದಂತೆ ಯಾವುದೇ ರೀತಿಯ ಸಮಾಜಘಾತುಕ ಚಟುವಟಿಕೆಗಳಲ್ಲಿ ಇಲ್ಲವೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರಬಾರದೆಂಬ ಷರತ್ತನ್ನು ವಿಧಿಸಲಾಗಿದೆ.
ಸದಸ್ಯರಾಗುವವರ ಪೂರ್ವಪರ ಹಿನ್ನೆಲೆಯನ್ನು ಪರಿಶೀಲನೆ ಮಾಡಲೆಂದೇ ಸಮಿತಿಯೊಂದನ್ನು ರಚಿಸಲಾಗಿದೆ. ಸದಸ್ಯರಾಗುವವರು 8980808080 ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಸದಸ್ಯರಾಗಬಹುದು. ಇದಕ್ಕೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ.
ಮಿಸ್ ಕಾಲ್ ಕೊಟ್ಟು ಸದಸ್ಯರಾಗಿ:
ಮಿಸ್ ಕಾಲ್ ನೀಡುವ ಮೂಲಕವೂ ಸದಸ್ಯರಾಗಲು ಅವಕಾಶವಿದೆ. ಮಿಸ್ ಕಾಲ್ ಕೊಟ್ಟವರ ಮಾಹಿತಿಯನ್ನು ಅರ್ಜಿಯಲ್ಲಿ ದಾಖಲು ಮಾಡಿಕೊಳ್ಳಲಾಗುತ್ತದೆ. ಸದಸ್ಯತ್ವ ಕೋರುವ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳಲು ಪರಿಶೀಲನಾ ಸಮಿತಿಯನ್ನು ರಚನೆ ಮಾಡಲಾಗಿದೆ.
ಸಕ್ರಿಯ ಸದಸ್ಯರಾಗಿ ಆಯ್ಕೆ:
ಯಾವ ಕಾರ್ಯಕರ್ತರು 25 ಮಂದಿಯನ್ನು ಸದಸ್ಯರನ್ನಾಗಿ ಪಕ್ಷಕ್ಕೆ ಸೇರಿಸುತ್ತಾರೋ ಅವರನ್ನು ಸಕ್ರಿಯ ಸದಸ್ಯರನ್ನಾಗಿ ಮಾಡಲಾಗುತ್ತದೆ.ಸದಸ್ಯತ್ವ ಪರಿಶೀಲನೆಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸಮಿತಿ ಇದೆ.ಸಕ್ರಿಯ ಸದಸ್ಯತ್ವ ನೀಡುವ ಬಗ್ಗೆ ಸಮಿತಿ ತೀರ್ಮಾನ ಕೈಗೊಳ್ಳುತ್ತದೆ.
ಮೊದಲ ಹಂತದ ಅಭಿಯಾನದಲ್ಲಿ 11 ಕೋಟಿಗೂ ಅಧಿಕ ಸದಸ್ಯರ ನೋಂದಣಿ ಮಾಡಿದ್ದ ಬಿಜೆಪಿ ಎರಡನೇ ಹಂತದಲ್ಲಿ ಎರಡೂವರೆ ಕೋಟಿಗೂ ಅಧಿಕ ಗಮನ ಕೇಂದ್ರೀಕರಿಸಿದೆ.