ವಿಶ್ವಕಪ್ನಲ್ಲಿ ಇಂದು ಟೀಮ್ ಇಂಡಿಯಾ ಹಾಗೂ ಶ್ರೀಲಂಕಾ ತಂಡಗಳು ಹೋರಾಡಲಿವೆ. ಉಭಯ ತಂಡಗಳು ವಿಶ್ವಕಪ್ನಲ್ಲಿ ಇದುವರೆಗೂ 8 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ 5 ಇಂಟ್ರೆಸ್ಟಿಂಗ್ ಕದನವನ್ನ ತೋರಿಸ್ತೀವಿ ನೋಡಿ.
ವರ್ಷ 1996
ಟೀಂ ಇಂಡಿಯಾ ಪಾಲಿಗೆ ಕರಾಳ ವರ್ಷ
1996ರ ವಿಶ್ವಕಪ್ ಟೂರ್ನಿಯಲ್ಲಿ ಲೀಗ್ ಹಂತದಲ್ಲಿ ಲಂಕಾ ವಿರುದ್ಧ ಸೋತಿದ್ದ ಟೀಮ್ ಇಂಡಿಯಾ, ಮತ್ತೆ ಸೆಮಿಫೈನಲ್ನಲ್ಲಿ ಕೋಲ್ಕತಾದ ಈಡನ್ ಗಾರ್ಡನ್ ಅಂಗಳದಲ್ಲಿ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 251 ರನ್ ಕಲೆಹಾಕಿತ್ತು. ಲಂಕಾ ನೀಡಿದ ಗುರಿ ಬೆನ್ನತ್ತಿದ್ದ ಭಾರತ 98 ರನ್ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತಿತ್ತು. ಆದರೆ ಸವ್ಯಸಾಚಿ ಸಚಿನ್ ತೆಂಡುಲ್ಕರ್ ಔಟ್ಆಗುತ್ತಿದ್ದಂತೆ ನಾಟಕೀಯ ಕುಸಿತ ಕಂಡ ಅಜರುದ್ದೀನ್ ಪಡೆ ತನ್ನ ಖಾತೆಗೆ 22 ರನ್ಗಳನ್ನು ಸೇರಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖಮಾಡಿತ್ತು. ಟೀಂ ಇಂಡಿಯಾ ಕ್ರಿಕೆಟಿಗ ಬೇಜವಾಬ್ದಾರಿಯುತ ಬ್ಯಾಟಿಂಗ್ ಬಗ್ಗೆ ಬೇಸತ್ತ ಭಾರತೀಯ ಅಭಿಮಾನಿಗಳು ಮೈದಾನದೊಳಗೆ ಪ್ಲಾಸ್ಟಿಕ್ ಬಾಟಲ್ಗಳನ್ನು ಎಸೆದರು. ಗ್ಯಾಲರಿಯಲ್ಲೇ ಬೆಂಕಿಹಚ್ಚಿ ದಾಂಧಲೆ ನಡೆಸಿದರು. ಆಟ ಮುಂದುವರೆಯುವುದು ಅಸಾಧ್ಯವೆಂದು ತಿಳಿದ ಮ್ಯಾಚ್ ರೆಫ್ರಿ ಶ್ರೀಲಂಕಾ ತಂಡ ವಿಜೇತ ತಂಡವೆಂದು ಘೋಷಿಸಿದರು. ಟೀಮ್ ಇಂಡಿಯಾ ಟೂರ್ನಿಯಿಂದ ಹೊರ ಬಿದ್ದು ವಿಶ್ವಕಪ್ನ್ನ ಕೈಚೆಲ್ಲಿತ್ತು.
ವರ್ಷ 1999
ಲಂಕಾವನ್ನ ಧ್ವಂಸ ಮಾಡಿದ ಗಂಗೂಲಿ, ಕನ್ನಡಿಗ ದ್ರಾವಿಡ್
1999ರ ವಿಶ್ವಕಪ್ನಲ್ಲ ಟೀಮ್ ಇಂಡಿಯಾ ಹಾಗೂ ಶ್ರೀಲಂಕಾ ತಂಡಗಳು ಆಂಗ್ಲರ ನಾಡಲ್ಲಿ ಮುಖಾಮುಖಿಯಾಗುತ್ತವೆ. ಟೌಟನ್ನಲ್ಲಿ ನಡೆದ ಲೀಗ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತಕ್ಕೆ ಸೌರವ್ ಗಂಗೂಲಿ, ಕನ್ನಡಿಗ ದ್ರಾವಿಡ್ ಶತಕ ಬಾರಿಸಿ ರನ್ ಹೊಳೆ ಹರಿಸ್ತಾರೆ. ಗಂಗೂಲಿ 183 ರನ್ ಬಾರಿಸಿದ್ರೆ. ದ್ರಾವಿಡ್ 145 ರನ್ ರನ್ ಕಲೆ ಹಾಕ್ತಾರೆ. ಈ ಇಬ್ಬರ ಶತಕದ ನೆರವಿನಿಂದ ಟೀಮ್ ಇಂಡಿಯಾ ಬರೊಬ್ಬರಿ 374 ರನ್ಗಳ ಟಾರ್ಗೆಟ್ ಕೊಡುತ್ತೆ. ಈ ಗುರಿ ಬೆನ್ನತ್ತಿದ ಶ್ರೀಲಂಕಾ 216 ರನ್ಗಳಿಗೆ ಆಲೌಟ್ ಆಗುವ ಮೂಲಕ 157 ರನ್ಗಳ ಹೀನಾಯ ಸೋಲು ಅನುಭವಿಸುತ್ತೆ..
ವರ್ಷ 2003
ಶ್ರೀನಾಥ್, ನೆಹ್ರಾ ದಾಳಿಗೆ ಶರಣಾದ ಸಿಂಹಳೀಯರು
2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮತ್ತೆ ವಿಶ್ವಕಪ್ನಲ್ಲಿ ಉಭಯ ತಂಡಗಳು ಮುಖಮುಖಿಯಾಗುತ್ತವೆ. ಜೋಹಾನ್ಸ್ಬರ್ಗ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಟೀಮ್ ಇಂಡಿಯಾ ಸವ್ಯಸಾಚಿ ಸಚಿನ್ ತೆಂಡೂಲ್ಕರ್ ಮತ್ತು ಡ್ಯಾಶೀಂಗ್ ಓಪನರ್ ವಿರೇಂದ್ರ ಸೆಹವಾಗ್ ಅವರ ಅರ್ಧ ಶತಕಗಳ ನೆರವಿನಿಂದ ಲಂಕಾಗೆ ಟೀಮ್ ಇಂಡಿಯಾ 293 ರನ್ಗಳ ಟಾರ್ಗೆಟ್ ನೀಡುತ್ತೆ. ಈ ಗುರಿ ಬೆನ್ನತ್ತಿದ ಲಂಕಾ ಕನ್ನಡಿಗ ಜಾವಗಲ್ ಶ್ರೀನಾಥ್ ಮತ್ತು ಆಶೀಶ್ ನೆಹ್ರಾ ಅವ ರ ದಾಳಿಗೆ ತತ್ತರಿಸಿ ಕೇವಲ 109 ರನ್ಗಳಿಗೆ ಶರಣಾಯಿತು. ಸೌರವ್ ಪಡೆ 183 ರನ್ ಗಳ ಭರ್ಜರಿ ಗೆಲುವು ದಾಖಲಿಸುತ್ತೆ.
ವರ್ಷ 2007
ಲಂಕಾಧೀಶರ ವಿರುದ್ಧ ಮಂಕಾದ ಬ್ಲೂ ಬಾಯ್ಸ್
2007ರ ವಿಶ್ವಕಪ್ನ ಬಿ ಗ್ರೂಪ್ನಲ್ಲಿ ಸ್ಥಾನ ಪಡೆದ ಭಾರತ-ಲಂಕಾ ಲೀಗ್ ಹಂತದಲ್ಲಿ ಮುಖಾಮುಖಿಯಾಗುತ್ತವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡುವ ಲಂಕಾ, ಟೀಮ್ ಇಂಡಿಯಾಕ್ಕೆ 255 ರನ್ ಗಳ ಟಾರ್ಗೆಟ್ ನೀಡುತ್ತೆ. ಈ ಟಾರ್ಗೆಟ್ ಬೆನ್ನತ್ತಿದ ಟೀಮ್ ಇಂಡಿಯಾ ಆರಂಭದಲ್ಲಿ ಅಘಾತ ಅನುಭವಿಸುತ್ತದೆ. ಸೆಹವಾಗ್, ದ್ರಾವಿಡ್ ಬಿಟ್ಟರೆ ಉಳಿದ ಯಾವ ಬ್ಯಾಟ್ಸ್ಮನ್ ಕೂಡ ರನ್ಗಳಿಸುವಲ್ಲಿ ವಿಫಲರಾಗುತ್ತಾರೆ. ಪರಿಣಾಮ ದ್ರಾವಿಡ್ ನೇತೃತ್ವದ ಟೀಮ್ ಇಂಡಿಯಾ 69 ರನ್ಗಳ ಸೋಲು ಅನುಭವಿಸುತ್ತದೆ..
ವರ್ಷ 2011
ಲಂಕನ್ನರನ್ನ ವಿರುದ್ಧ ಸೇಡು ತೀರಿಸಿಕೊಂಡ ಧೋನಿ ಪಡೆ
2011ರ ವಿಶ್ವಕಪ್ ಯಾವ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಮರೆಯಲಾಗದ ವರ್ಷ , ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ರ ವಿದಾಯದ ವಿಶ್ವಕಪ್ ಎಂದೇ ಬಿಂಬಿತವಾಗಿದ್ದ ಟೂರ್ನಮೆಂಟ್ ಅದು. ಹೀಗಾಗೆ ಸಚಿನ್ಗಾಗಿ ವಿಶ್ವಕಪ್ ಗೆಲ್ಲಲೇಬೇಕೆಂದುಪಣತೊಟ್ಟಿತ್ತು ಧೋನಿ ಸೈನ್ಯ. ತವರಿನಲ್ಲೇ ವಿಶ್ವಕಪ್ಗಾಗಿ ಹೋರಾಡಿದ ಟೀಂ ಇಂಡಿಯಾ, 28 ವರ್ಷಗಳ ಬಳಿಕ ಇತಿಹಾಸ ಮರು ಸೃಷ್ಠಿಸಿತ್ತು..
ಮುಂಬೈನ ವಾಂಖಡೆ ಅಂಗಳದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಸಂಗಕ್ಕಾರ ಪಡೆ ಮಹೇಲಾ ಜಯವರ್ಧನೆ ಅವರ ಶತಕದ ನೆರವಿನಿಂದ ಶ್ರೀಲಂಕಾ 6 ವಿಕೆಟ್ ನಷ್ಟಕ್ಕೆ 274 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ಸೆಹ್ವಾಗ್ ಹಾಗೂ ಸಚಿನ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತು. ಆ ನಂತರ ಬಂದ ಕ್ಯಾಪ್ಟನ್ ಧೋನಿ-ಗಂಭೀರ್ಗೆ ಒಳ್ಳೆ ಸಾಥ್ ಕೊಟ್ಟು ತಂಡದ ಗೆಲುವನ್ನ ಖಚಿತ ಪಡಿಸಿದ್ರು. ಗಂಭೀರ್ ಕೇವಲ 3 ರನ್ಗಳಿಂದ ಶತಕ ವಂಚಿತರಾದ್ರು.
ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಬಂದು ತಂಡವನ್ನ ಗೆಲುವಿನ ದಡ ಸೇರಿಸಿದ್ರು. 91 ರನ್ ಗಳಿಸಿದ ಧೋನಿ ಕೊನೆಯಲ್ಲಿ ಸಿಕ್ಸರ್ ಬಾರಿಸುವ ಮೂಲಕ ಭಾರತಕ್ಕೆ 28 ವರ್ಷಗಳ ಬಳಿಕ ವಿಶ್ವಕಪ್ ಗೆದ್ದು ಕೊಟ್ಟರು. ಜೊತೆಗೆ 1996ರ ವಿಶ್ವಕಪ್ ಸೆಮಿಫೈನಲ್ ಸೋಲಿನ ಸೇಡನ್ನ ಲಂಕಾ ವಿರುದ್ಧ ತೀರಿಸಿಕೊಂಡಿದ್ದು ಮತ್ತೊಂದು ವಿಶೇಷ ಆಗಿತ್ತು.
ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಹಾಗೂ ಲಂಕಾ ಮುಖಾಮುಖಿ ಸಾಕಷ್ಟು ರೋಚಕತೆ ಸಾಕ್ಷಿಯಾಗಿದ್ದು ಕ್ರಿಕೆಟ್ ಅಭಿಮಾನಿಗಳು ಈ ರೋಚಕತೆಯನ್ನ ಎಂದೂ ಮರೆಯಲು ಸಾಧ್ಯವಿಲ್ಲ.