ನವದೆಹಲಿ: ನೈರುತ್ಯ ಮಾನ್ಸೂನ್ ಭಾರತದ ಉತ್ತರ ಮತ್ತು ವಾಯುವ್ಯ ಭಾಗಗಳಲ್ಲಿ ಮುಂದುವರಿಯುವ ಸಾಧ್ಯತೆ ಇದೇ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಾನ್ಸೂನ್ ಪ್ರಸ್ತುತ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ್, ರಾಜಸ್ಥಾನ, ಹರಿಯಾಣ, ಚಂಡೀಗಢ, ದೆಹಲಿ ಮತ್ತು ಹಿಮಾಚಲ ಪ್ರದೇಶದ ಮೂಲಕ ಹಾದುಹೋಗುತ್ತಿದೆ ಎಂದು ಐಎಂಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಮುಂದಿನ 24 ಗಂಟೆಗಳಲ್ಲಿ ಮಹಾರಾಷ್ಟ್ರದಾದ್ಯಂತ ಭಾರೀ ಮಳೆಯಾಗಲಿದ್ದು, ಮುಂಬಯಿಯಲ್ಲಿ ‘ಪ್ರವಾಹದ ಗಂಭೀರ ಅಪಾಯ’ ಎದುರಿಸಬೇಕಾದೀತು ಎಂದು ಸ್ಕೈಮೆಟ್ ಎಚ್ಚರಿಸಿದೆ. ಅಷ್ಟೇ ಅಲ್ಲದೆ, ಕೊಂಕಣ ಕರಾವಳಿ, ಗೋವಾ, ಅಸ್ಸಾಂ, ಮೇಘಾಲಯ, ಒಡಿಶಾ, ಜಾರ್ಖಂಡ್, ಛತ್ತೀಸ್ಗಢ, ಬಿಹಾರ ಮತ್ತು ಗುಜರಾತ್ನಲ್ಲೂ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ..
ವಾರಾಂತ್ಯದಲ್ಲಿ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಮಳೆಯ ತೀವ್ರತೆಯು ಹೆಚ್ಚಾಗುವ ಸಾಧ್ಯತೆಯಿದೆ.
ಮುಂದಿನ ವಾರ ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ ಮತ್ತು ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎನ್ನಲಾಗಿದೆ.
“ಒಟ್ಟಾರೆಯಾಗಿ, ಮಧ್ಯಪ್ರದೇಶ ಮತ್ತು ಜಾರ್ಖಂಡ್ನ ಕೆಲವು ಭಾಗಗಳಲ್ಲಿ, ಪೂರ್ವ ಉತ್ತರ ಪ್ರದೇಶದ ಹೆಚ್ಚಿನ ಭಾಗಗಳು, ಬಿಹಾರ ಮತ್ತು ಪಶ್ಚಿಮ ಕರಾವಳಿಯುದ್ದಕ್ಕೂ ಮತ್ತು ಈಶಾನ್ಯ ರಾಜ್ಯಗಳ ಅನೇಕ ಭಾಗಗಳಲ್ಲಿ ಸಾಮಾನ್ಯ ಮಳೆಯಾಗುವ ಸಾಧ್ಯತೆ ಹೆಚ್ಚು ಎಂದು ಐಎಂಡಿ ಹೇಳಿಕೆಯಲ್ಲಿ ತಿಳಿಸಿದೆ.
ಜುಲೈ 11 (ಗುರುವಾರ) ರಿಂದ 17 (ಬುಧವಾರ) ವರೆಗೆ, ಪೂರ್ವ ಉತ್ತರ ಪ್ರದೇಶ, ಬಿಹಾರ, ಈಶಾನ್ಯ ಮಧ್ಯಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ, ಸಿಕ್ಕಿಂ, ಈಶಾನ್ಯ ರಾಜ್ಯಗಳು ಮತ್ತು ದಕ್ಷಿಣ ಪೆನಿನ್ಸುಲರ್ ಭಾರತದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯ ಮಳೆಯಾಗುವ ಸಾಧ್ಯತೆ ಅಧಿಕ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪಶ್ಚಿಮ ಕರಾವಳಿ ಮತ್ತು ಕೊಂಕಣ ಪ್ರದೇಶಗಳಲ್ಲಿನ ಮೀನುಗಾರರಿಗೆ ಎಚ್ಚರಿಕೆ ಬುಲೆಟಿನ್ ನೀಡಲಾಗಿದೆ. ಮೀನುಗಾರರು ಜುಲೈ 8 ರವರೆಗೆ ಸಮುದ್ರಕ್ಕೆ ಹೋಗದಂತೆ ಸೂಚಿಸಲಾಗಿದೆ.