ಸೂಟ್‍ಕೇಸ್ ಸಂಸ್ಕೃತಿಗೆ ತಿಲಾಂಜಲಿ: ಕೆಂಪು ಬಣ್ಣದ ಬಟ್ಟೆಯ ಚೀಲದಲ್ಲಿ ಆಯ-ವ್ಯಯ ಪ್ರತಿ

ನವದೆಹಲಿ: ಹಣಕಾಸು ಸಚಿವರು ಇಲ್ಲಿಯವರೆಗೆ ಬಜೆಟ್ ಪ್ರತಿಯನ್ನು ಸೂಟ್‍ಕೇಸ್‍ನಲ್ಲಿ ಹೊತ್ತುಕೊಂಡು ಸಂಸತ್ ಪ್ರವೇಶಿಸುತ್ತಿದ್ದರು. ಆದರೆ ನಿರ್ಮಲಾ ಸೀತಾರಾಮನ್ ಅವರು ಈ ಸಂಪ್ರದಾಯಕ್ಕೆ ಬ್ರೇಕ್ ಹಾಕಿ ಕೆಂಪು ಬಣ್ಣದ ಬಟ್ಟೆಯ ಬ್ಯಾಗಿನಲ್ಲಿ ಬಜೆಟ್ ಪ್ರತಿಗಳನ್ನು ಇರಿಸಿಕೊಂಡು ಸಂಸತ್ ಪ್ರವೇಶಿಸಿದ್ದಾರೆ.

ನಿರ್ಮಲಾ ಸೀತರಾಮನ್ ಭಾರತದ ಪೂರ್ಣ ಅವಧಿಯ ಮೊದಲ ಮಹಿಳಾ ಹಣಕಾಸು ಮಂತ್ರಿಯಾಗಿದ್ದಾರೆ. ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆಯಾಗಲಿದೆ. ಈ ಬಾರಿ ಕೇಂದ್ರ ಸರ್ಕಾರ ಬಜೆಟ್ ಖರ್ಚನ್ನು ಹೆಚ್ಚಿಸಿ, ತೆರಿಗೆ ವ್ಯವಹಾರಗಳ ಬಗ್ಗೆ ಪ್ರಮುಖ್ಯತೆ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಹಣಕಾಸು ಸಚಿವಾಯಕ್ಕೆ ಆಗಮಿಸಿದ ಸಚಿವೆ ಬಜೆಟ್ ದಾಖಲೆಗಳನ್ನು ಬ್ರೀಫ್‍ಕೇಸ್ ಬದಲು ಬ್ಯಾಗ್ ಹಿಡಿದು ಫೋಟೋಗೆ ಪೋಸ್ ಕೊಟ್ಟಿರುವುದು ವಿಶೇಷವಾಗಿತ್ತು. ಈ ವೇಳೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಹಾಗೂ ಹಣಕಾಸು ಸಚಿವಾಲಯದ ಇತರೇ ಅಧಿಕಾರಿಗಳು ಸಚಿವೆಗೆ ಸಾಥ್ ನೀಡಿದ್ದಾರೆ.

ಸಂಸತ್ ಪ್ರವೇಶಿಸುವ ಮುನ್ನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಸಚಿವೆ ಭೇಟಿಯಾಗಿದ್ದರು. ಬಜೆಟ್ ಮಂಡಿಸಿದ ಬಳಿಕ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ನಡೆಸಲಿದ್ದು, ಅನುರಾಗ್ ಠಾಕೂರ್, ಹಣಕಾಸು ಸಚಿವಾಲಯದ ಕಾರ್ಯದರ್ಶಿಗಳು ಮತ್ತು ಆರ್ಥಿಕ ಸಲಹೆಗಾರ ಕೆ.ವಿ ಸುಬ್ರಮಣಿಯನ್ ಅವರು ಭಾಗಿಯಾಗಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ