ಹೊಸದಿಲ್ಲಿ: ಎನ್ಡಿಎ ಸರಕಾರದ ಎರಡನೇ ಅವಧಿಯ ಮೊದಲ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಮಂಡಿಸಿದರು.
ಮೊದಲ ಬಾರಿಗೆ ಬಜೆಟ್ ಭಾಷಣ ಮಾಡುತ್ತಿರುವ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಲೋಕಸಭಾ ಚುನಾವಣೆಯಲ್ಲಿ ಗಳಿಸಲಾದ ಅಭೂತಪೂರ್ವ ಯಶಸ್ಸು ಪ್ರಸ್ತಾವಿಸಿದರು.
ನವಭಾರತ ನಿರ್ಮಾಣಕ್ಕೆ ಇಡೀ ದೇಶ ಬೆಂಬಲಕ್ಕೆ ನಿಂತಿದೆ. ಚಾಣಕ್ಯ ನೀತಿಯನ್ನು ತಮ್ಮ ಬಜೆಟ್ ಭಾಷಣದಲ್ಲಿ ಪ್ರಸ್ತಾವಿಸಿದರು. ಭರವಸೆ ಇದ್ದರೆ ಮಾರ್ಗ ಇದ್ದೇ ಇರುತ್ತದೆ ಎಂದು ನಿರ್ಮಲಾ ತಿಳಿಸಿದರು.
ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲು ನಾರಿ ಟು ನಾರಾಯಣಿ ಮಂತ್ರ ಜಪಿಸಿದ್ದಾರೆ ನಿರ್ಮಲಾ ಸೀತಾರಾಮನ್.
ಗ್ರಾಮೀಣ ಭಾರತ ಈಗ ಉಜ್ವಲವಾಗುತ್ತಿದೆ. ಬಡ ಮಹಿಳೆಯರಿಗೆ ಎಲ್ಪಿಜಿ ಸಂಪರ್ಕ ನೀಡುವ ಮೂಲಕ ಗ್ರಾಮೀಣ ಭಾರತವನ್ನು “ಉಜ್ವಲ’ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗಿದೆ. ಉಜ್ವಲ ಯೋಜನೆಯಡಿ ನೀಡಲಾದ ಎಲ್ಇಡಿ ಬಲ್ಬ್ಗಳಿಂದ 18,341 ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ವಿತ್ತ ಸಚಿವರು ತಿಳಿಸಿದರು.
ದೇಶದಲ್ಲಿ ಉನ್ನತ ಶಿಕ್ಷಣ ದೊರೆಯಬೇಕು ಎಂಬುದು ಸರಕಾರದ ಇಚ್ಛೆಯಾಗಿದೆ. ಇದಕ್ಕಾಗಿ ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತೆ ನೀಡಲು ಸರಕಾರ ಮುಂದಾಗಿದೆ. ವಿಶ್ವದ ಶ್ರೇಷ್ಠ ಗುಣಮಟ್ಟದ ಶಿಕ್ಷಣ ಸಂಸ್ಥೆಗಳಲ್ಲಿ ಭಾರತದ 3 ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದಿದೆ ಎಂದು ನಿರ್ಮಲಾ ತಿಳಿಸಿದರು.
ಭಾರತವನ್ನು ಉನ್ನತ ಶಿಕ್ಷಣದ ಹಬ್ ಆಗಿ ಮಾಡಲು ಕೇಂದ್ರ ಸರಕಾರ ಬದ್ಧವಾಗಿದೆ. ಇಲ್ಲಿ ವಿದೇಶಿಯರು ಬಂದು ಶಿಕ್ಷಣ ಪಡೆಯಲು ಉತ್ತೇಜನ ದೊರೆಯಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ದೇಶದ ಪ್ರತಿ ಮನೆಗೂ ಕುಡಿಯುವ ನೀರು ಪೂರೈಕೆಗೆ “ಹರ್ ಘರ್ ಜಲ್’ ಯೋಜನೆ ಆರಂಭಿಸಲಾಗುತ್ತಿದೆ.
ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ದೇಶಾದ್ಯಂತ 1.25 ಲಕ್ಷ ಕಿಲೋ ಮೀಟರ್ ರಸ್ತೆ ಮೇಲ್ದರ್ಜೆಗೇರಿಸಲಾಗುವುದು ಎಂದು ನಿರ್ಮಲಾ ತಮ್ಮ ಬಜೆಟ್ ಭಾಷಣದಲ್ಲಿ ಪ್ರಸ್ತಾವಿಸಿದರು. ಸಬ್ ಅರ್ಬನ್ ರೈಲು ಯೋಜನೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಅನ್ನದಾತರ ಶಕ್ತಿದಾತರ ಯಾಕೆ ಆಗುತ್ತಿಲ್ಲ. ಅವರಿಗಾಗಿ ಶೂನ್ಯ ಬಂಡವಾಳ ಕೃಷಿಗೆ ಒತ್ತು ನೀಡಲಾಗಿದೆ. 2022ರ ವೇಳೆಗೆ ಕೃಷಿಕರ ಆದಾಯ ದುಪ್ಪಟ್ಟುಗೊಳಿಸಲು ಸರ್ವವ್ಯಾಪಿ ಯೋಜನೆ ಹಮ್ಮಿಕೊಳ್ಳಲಾಗಿದೆ. 5 ಲಕ್ಷಕ್ಕೂ ಹೆಚ್ಚು ಗ್ರಾಮಗಳು ಬಯಲು ಶೌಚ ಮುಕ್ತವಾಗಿವೆ. ಇದು ಸ್ವಚ್ಛ ಭಾರತ ಯೋಜನೆಯ ಬಹುದೊಡ್ಡ ಸಾಧನೆ. 2014ರಿಂದ ಇದುವರೆಗೆ 9.6 ಶೌಚಾಲಯ ನಿರ್ಮಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ 26 ಸಾವಿರ ಕೋಟಿ ರೂ. ಮಂಜೂರು ಮಾಡಲಾಗಿದೆ. ಜತೆಗೆ ಸಾರಿಗೆ ಶುಲ್ಕ ಪಾವತಿಸುವ ಒಂದು ದೇಶ, ಒಂದು ಕಾರ್ಡ್ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 2021 ವೇಳೆಗೆ 1.95 ಕೋಟಿ ಮನೆಗಳ ನಿರ್ಮಾಣ ಗುರಿ ಹೊಂದಲಾಗಿದೆ. ಕೆಲವು ವರ್ಷಗಳ ಹಿಂದೆ 195 ದಿನದಲ್ಲಿ ಮನೆ ನಿರ್ಮಾಣ ಗುರಿ ಇದ್ದರೆ, ಅದೀಗ 114 ದಿನಕ್ಕೆ ಇಳಿದಿದೆ. ಇದರಿಂದ ಗುರಿಯನ್ನು ಕ್ಷಿಪ್ತ ಗತಿಯಲ್ಲಿ ತಲುಪಲು ಸಾಧ್ಯವಾಗಿದೆ ಎಂದು ನಿರ್ಮಲಾ ಸೀತಾರಾಮನ್ ವಿವರಿಸಿದರು.
ಮೀನುಗಾರಿಕೆ ಕ್ಷೇತ್ರಕ್ಕೆ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಜಾರಿಗೆ ತರಲಾಗಿದೆ.
ತಮ್ಮ ಆರಂಭದ ಬಾಷಣದಲ್ಲಿಯೇ ಚಾಣಕ್ಯ ನೀತಿ ಹಾಗೂ ಉರ್ದು ಶಾಯರಿಯನ್ನು ಹೇಳಿ ಸದನದ ಮೆಚ್ಚುಗೆ ಗಳಿಸಿದರು.
ಭಾರತ ಈಗ ಸೂಪರ್ ದೇಶವಾಗುವತ್ತ ಸಾಗಿದೆ. ಇದಕ್ಕಾಗಿ ನಾವು 5 ಟ್ರಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕತೆಯ ಗುರಿ ಹೊಂದಿದ್ದೇವೆ. ಇದನ್ನು ಸಾಗಿಸುವತ್ತ ಹೆಜ್ಜೆ ಕೂಡ ಇಡಲಾಗಿದೆ. ಪ್ರಸಕ್ತ ವರ್ಷವೇ ನಾವು 3 ಟ್ರಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕತೆಯ ದೇಶವಾಗಿ ಹೊರಹೊಮ್ಮಲಿದ್ದೇವೆ ಎಂದು ಸಚಿವರು ಭಾಷಣದಲ್ಲಿ ವಿವರಿಸಿದರು.
ಸಾಗರ್ಮಾಲಾ ಯೋಜನೆಯಡಿ ನಾವೀಗ ಒಂದು ದೇಶ, ಒಂದೇ ಜಾಲ ರೂಫಿಸುತ್ತಿದ್ದೇವೆ. ಇದಕ್ಕೆ ಎಲ್ಲರ ಸಹಭಾಗಿತ್ವ ಕೂಡ ಬಹುಮುಖ್ಯವಾಗಿದೆ. 300 ಕಿಲೋ ಮೀಟರ್ ಮೆಟ್ರೊ ಮಾರ್ಗ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ ಎಂದು ನಿರ್ಮಲಾ ತಿಳಿಸಿದರು.
ಪ್ರಧಾನಮಂತ್ರಿ ಮಾನ್ಧನ್ ಕರ್ಮಯೋಗಿ ಯೋಜನೆಯಡಿ ಪಿಂಚಣಿ ವ್ಯವಸ್ಥೆ ಜಾರಿಗೆ ತರಲಾಗುವುದು. ಇದರಿಂದ 3 ಕೋಟಿ ಚಿಲ್ಲರೆ ವ್ಯಾಪಾರಿಗಳಿಗ ನೆರವಾಗಲಿದೆ ಎಂದು ಸಚಿವರು ತಿಳಿಸಿದಾಗ ಸದನ ಮೇಜು ಕುಟ್ಟಿ ಸ್ವಾಗತಿಸಿತು.
ಪೂರ್ಣ ಪ್ರಮಾಣದ ಮಹಿಳಾ ಹಣಕಾಸು ಸಚಿವೆಯಾಗಿ ಇದೇ ಮೊದಲ ಬಾರಿಗೆ ನಿರ್ಮಲಾ ಸೀತಾರಾಮನ್ 2019-2020 ಸಾಲಿನ ಆಯವ್ಯಯ ಮಂಡನೆ ಮಾಡಿದ್ದಾರೆ.