ಬೆಂಗಳೂರು, ಜು.4- ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಬಂಧ ಶೀಘ್ರದಲ್ಲಿ ತಜ್ಞರ ತಂಡವನ್ನು ರಾಜ್ಯಕ್ಕೆ ಕಳುಹಿಸಿ ಸಮೀಕ್ಷೆ ನಡೆಸುವುದಾಗಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ.
ನವದೆಹಲಿಯಲ್ಲಿ ಇಂದು ಅವರ ಅಧಿಕೃತ ನಿವಾಸದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ, ಬಿಜೆಪಿ ಸಹವಕ್ತಾರ ಎ.ಎಚ್. ಆನಂದ್, ಬಿಜೆಪಿ ಯುವ ಮೋರ್ಚಾದ ಮುಖಂಡ ವೇಣುಗೋಪಾಲ್ ಸೇರಿದಂತೆ ಮತ್ತಿತರರ ನಿಯೋಗ ಭೇಟಿಯಾಗಿ ಮನವಿಪತ್ರ ಸಲ್ಲಿಸಿದೆ.
ನೀರಾವರಿ ಯೋಜನೆ ಅನುಷ್ಠಾನದಿಂದ ಈ ಭಾಗದ ಜನರಿಗೆ ಆಗುವ ಅನುಕೂಲಗಳು, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಉಂಟಾಗಿರುವ ಕುಡಿಯು ನೀರಿನ ಸಮಸ್ಯೆ, ಅಂತರ್ಜಲ ಕುಸಿತ, ಬೆಳೆ ಹಾನಿ ಸೇರಿದಂತೆ ವಸ್ತುಸ್ಥಿತಿಯನ್ನು ವಿವರಿಸಲಾಗಿದೆ.
ಸುಮಾರು ಎರಡು ಗಂಟೆಗಳ ಕಾಲ ನಿಯೋಗದ ಮನವಿಯನ್ನು ಸಹನೆಯಿಂದಲೇ ಆಲಿಸಿದ ಸಚಿವರು ಯೋಜನೆ ಅನುಷ್ಠಾನಕ್ಕೆ ಎದುರಾಗಿರುವ ತೊಡಕುಗಳು, ಸಾಧಕಬಾಧಕಗಳು ಸೇರಿದಂತೆ ಯೋಜನೆಯ ಸಮಗ್ರ ಮಾಹಿತಿ ಪಡೆದಿದ್ದಾರೆ.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಮಾತನಾಡಿ, ಈ ನಾಲ್ಕು ಜಿಲ್ಲೆಗಳು ಅತ್ಯಂತ ಬರಪೀಡಿತ ಜಿಲ್ಲೆಗಳಾಗಿವೆ. ಸುಮಾರು ಮೂರು ದಶಕಗಳಿಂದ ಶಾಶ್ವತ ನೀರಾವರಿಗಾಗಿ ಹೋರಾಟ ಮಾಡುತ್ತಿದ್ದೇವೆ. ಈ ನಾಲ್ಕು ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಸಂಪೂರ್ಣವಾಗಿ ಕುಸಿದು ಬಿದ್ದಿದೆ. 2000 ಅಡಿವರೆಗೂ ಬೋರ್ವೆಲ್ ಕೊರೆಸಿದರೂ ನೀರು ಸಿಗುತ್ತಿಲ್ಲ. ಕುಡಿಯುವ ನೀರಿನಲ್ಲಿ ಮಿಶ್ರಣವಾಗಿ ರೋಗರುಜಿನಗಳಿಗೂ ಜನರು ತುತ್ತಾಗಿದ್ದಾರೆ ಎಂದು ವಿವರಿಸಿದರು.
ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಮಳೆ ಇಲ್ಲದ ಪರಿಣಾಮ ಬೋರ್ವೆಲ್ಗಳೂ ಸಹ ಬತ್ತಿಹೋಗಿವೆ. ಕೆರೆ ಹಳ್ಳಕೊಳ್ಳಗಳು ನೀರಿಲ್ಲದೆ ಒಣಗಿ ಹೋಗಿವೆ.
ಕೃಷಿ ಚಟುವಟಿಕೆಗಳು ಕೂಡ ಸ್ಥಗಿತಗೊಂಡಿವೆ. ನೀರಿಲ್ಲದ ಕಾರಣ ರೈತರು ಬೆಳೆಗಳನ್ನು ಬೆಳೆಯದೆ ನಿರುದ್ಯೋಗಕ್ಕೆ ತುತ್ತಾಗಿ ಗುಳೇ ಹೋಗುತ್ತಿದ್ದಾರೆ.
ಜಾನುವಾರುಗಳಿಗೂ ನೀರಿಲ್ಲದೆ ಪರದಾಡುವಂತಾಗಿದೆ. ಈ ಭಾಗದ ಪರಿಸ್ಥಿತಿ ಪದಗಳಲ್ಲಿ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ನಿಯೋಗ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಎತ್ತಿನಹೊಳೆ ಯೋಜನೆಯಿಂದ ನೀರು ಪೂರೈಸಲು ನೂರೆಂಟು ತೊಡಕುಗಳು ಎದುರಾಗಿವೆ. ಸಮುದ್ರಕ್ಕೆ ಹೆಚ್ಚು ಸೇರುವ ನೀರನ್ನು ಬಳಕೆ ಮಾಡಿಕೊಳ್ಳುತ್ತೇವೆ ಎಂದರೂ ಅದಕ್ಕೂ ನೂರಾರು ವಿಘ್ನಗಳು ಎದುರಾಗಿವೆ. ಕೂಡಲೇ ಯೋಜನೆ ಅನುಷ್ಠಾನಗೊಳಿಸಲು ತುರ್ತು ಕ್ರಮ ಕೈಗೊಳ್ಳುವಂತೆ ನಿಯೋಗ ಮನವಿ ಮಾಡಿದೆ.
ಬಿಜೆಪಿ ಸಹವಕ್ತಾರ ಎ.ಎಚ್.ಆನಂದ್ ಮಾತನಾಡಿ, ಈಗಾಗಲೇ ನೆರೆಯ ಆಂಧ್ರಪ್ರದೇಶ ಮತ್ತು ತೆಲಾಂಗಣದಲ್ಲಿ ಕರ್ನಾಟಕಕ್ಕೆ ಹೊಂದಿಕೊಂಡಿರುವ ಗಡಿಭಾಗದ ಗ್ರಾಮಗಳಿಗೆ ಉತ್ತರ ಪಿನಾಕಿನಿ ಹಾಗೂ ದಕ್ಷಿಣ ಪಿನಾಕಿನಿ ನದಿ ನೀರು ಯೋಜನೆ ಮೂಲಕ ಶಾಶ್ವತವಾದ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ.
ಇದೇ ಮಾದರಿಯನ್ನು ಆಧಾರವಾಗಿಟ್ಟುಕೊಂಡು ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ನೀರಿನ ಸಮಸ್ಯೆಯಂತೂ ಊಹಿಸಲು ಅಸಾಧ್ಯ ಎಂದು ವಸ್ತುಸ್ಥಿತಿಯನ್ನು ಮನವರಿಕೆ ಮಾಡಿದರು.
ಇದನ್ನು ಪೈಲೆಟ್ ಯೋಜನೆ ಎಂದು ಪರಿಗಣಿಸಿ ವಿಶೇಷವಾದ ಪ್ಯಾಕೇಜ್ ಘೋಷಣೆ ಮಾಡಬೇಕು, ಸಾಧ್ಯವಾದಷ್ಟು ಶೀಘ್ರದಲ್ಲಿ ಯೋಜನೆ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಕೋರಿದರು.
ಸಮುದ್ರಕ್ಕೆ ಹೆಚ್ಚುವರಿಯಾಗಿ ಸೇರುವ ನೀರನ್ನು ಈ ಭಾಗಕ್ಕೆ ಹರಿಸಿದರೆ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗುತ್ತದೆ. ರಾಜಸ್ಥಾನದ ನಂತರ ಅತಿಹೆಚ್ಚು ಅಂತರ್ಜಲ ಕುಸಿತ ಕಂಡಿರುವುದು ಈ ಭಾಗಗಳಲ್ಲಿ. ಕರ್ನಾಟಕ ಸರ್ಕಾರದ ಜೊತೆ ಮಾತುಕತೆ ನಡೆಸಿ ಯೋಜನೆ ಅನುಷ್ಠಾನಗೊಳಿಸುವಂತೆ ಆನಂದ್ ಮನವಿ ಮಾಡಿಕೊಂಡರು.
ನಿಯೋಗದ ಮನವಿಯನ್ನು ಆಲಿಸಿದ ಸಚಿವ ಗಜೇಂದ್ರಸಿಂಗ್ ಶೇಖಾವತ್, ಯೋಜನೆಯನ್ನು ಅನುಷ್ಠಾನ ಮಾಡಲು ಅತಿಶೀಘ್ರದಲ್ಲಿ ತಜ್ಞರ ತಂಡವೊಂದನ್ನು ರಾಜ್ಯಕ್ಕೆ ಕಳುಹಿಸಿಕೊಡಲಾಗುವುದು. ಇದು ಗಂಭೀರವಾದ ವಿಷಯವಾಗಿರುವುದರಿಂದ ಪ್ರಧಾನಿಗಳ ಗಮನಕ್ಕೂ ತರುತ್ತೇನೆ ಎಂದು ಆಶ್ವಾಸನೆ ನೀಡಿದ್ದಾರೆ.
ರಾಜ್ಯ ಸರ್ಕಾರದ ಜೊತೆಗೆ ನಾನು ಮಾತುಕತೆ ನಡೆಸುತ್ತೇನೆ. ವೈಜ್ಞಾನಿಕವಾಗಿ ಯೋಜನೆಯನ್ನು ಅನುಷ್ಠಾನ ಮಾಡಲಾಗುವುದು. ತಜ್ಞರ ತಂಡ ನೀಡುವ ವರದಿ ಮೇಲೆ ತುರ್ತು ಕ್ರಮ ಕೈಗೊಳ್ಳುತ್ತೇನೆ ಎಂಬ ಭರವಸೆ ನೀಡಿದ್ದಾರೆ.