ಮಾಜಿ ಸಿಎಂ ಯಡಿಯೂರಪ್ಪನವರಿಗೆ ಖೆಡ್ಡ ತೋಡಲು ಷಡ್ಯಂತ್ರ-ಎಚ್ಚೆತ್ತುಕೊಂಡ ಮಾಜಿ ಸಿಎಂ

ಬೆಂಗಳೂರು, ಜು.4- ಅಧಿವೇಶನ ಆರಂಭವಾಗುವುದರೊಳಗೆ ಆಪರೇಷನ್ ಕಮಲದ ಮೂಲಕ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಿ ಆಷಾಡ ಮುಗಿದ ಬಳಿಕ ಮುಖ್ಯಮಂತ್ರಿಯಾಗುವ ಲೆಕ್ಕಾಚಾರದಲ್ಲಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಖೆಡ್ಡ ತೋಡಲು ಷಡ್ಯಂತ್ರ ರೂಪಿಸಲಾಗಿತ್ತೇ..?! ಹೌದೆನ್ನುತ್ತಿದೆ ಪಕ್ಷದ ಮೂಲಗಳು.

ಶಾಸಕರಾದ ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ ಮರುದಿನ ಅಂದರೆ ನಾಲ್ವರು ಅನಾಮಧೇಯ ವ್ಯಕ್ತಿಗಳು ತಾವು ಶಾಸಕರೆಂದು ಹೇಳಿಕೊಂಡು ಬಿಎಸ್‍ವೈಗೆ ಕರೆ ಮಾಡಿದ್ದರು.

ಸರ್, ನಾವು ಕೂಡ ಶೀಘ್ರದಲ್ಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದೇವೆ. ನೀವು ಯಾವಾಗ ಅಧಿಕಾರ ಸ್ವೀಕರಿಸುತ್ತೀರಿ? ರಾಜ್ಯಪಾಲರು ಸರ್ಕಾರ ರಚನೆಗೆ ಅನುಮತಿ ಕೊಟ್ಟಿದ್ದಾರಾ? ಈಗ ಮೊದಲ ಹಂತದಲ್ಲಿ ಎಷ್ಟು ಶಾಸಕರು ರಾಜೀನಾಮೆ ಕೊಡುತ್ತಾರೆ? ನಾವು ಯಾವಾಗ ರಾಜೀನಾಮೆ ನೀಡಬೇಕು ಎಂದು ಪ್ರಶ್ನಿಸಿದರು.

ಮೊದಲು ಯಡಿಯೂರಪ್ಪ ಈ ಅನಾಮಧೇಯ ವ್ಯಕ್ತಿಗಳ ಕರೆಯನ್ನು ನಂಬಿದರು. ಆದರೆ ಮರುಕ್ಷಣದಲ್ಲೇ ಮಾತಿನ ವರಸೆ ಬದಲಾಗುತ್ತಿದ್ದನ್ನು ಗಮನಿಸಿದ ಯಡಿಯೂರಪ್ಪ ಇದು ಯಾರೋ ವ್ಯವಸ್ಥಿತವಾಗಿ ರೂಪಿಸಿರುವ ಸಂಚು ಎಂಬುದನ್ನು ಬಹುಬೇಗನೆ ಅರ್ಥ ಮಾಡಿಕೊಂಡರು.

ನೋಡಣ್ಣ ರಾಜೀನಾಮೆ ಕೊಡುವುದಾದರೆ ನನ್ನ ಬಳಿ ಮಾತನಾಡಬೇಕಾದ ಅಗತ್ಯವಿಲ್ಲ. ಒಂದು ವೇಳೆ ಸಮ್ಮಿಶ್ರ ಸರ್ಕಾರದಲ್ಲಿ ಅಸಮಾಧಾನವಿದ್ದರೆ ನೇರವಾಗಿ ವಿಧಾನಸಭೆ ಸ್ಪೀಕರ್ ರಮೇಶ್‍ಕುಮಾರ್ ಅವರನ್ನು ಭೇಟಿಯಾಗಿ ರಾಜೀನಾಮೆ ಕೊಡು. ಅಷ್ಟಕ್ಕೂ ನನ್ನ ಬಳಿ ರಾಜೀನಾಮೆ ಪ್ರಸ್ತಾಪಿಸುವ ಅಗತ್ಯವಿಲ್ಲ ಎಂದು ಹೇಳಿದರು.

ಇಷ್ಟಕ್ಕೂ ಸುಮ್ಮನಾಗದ ಅನಾಮಧೇಯ ವ್ಯಕ್ತಿಗಳು ಸರ್ ನಾವು ನಿಮ್ಮನ್ನು ನಂಬಿ ಬಿಜೆಪಿಗೆ ಬರುತ್ತಿದ್ದೇವೆ. ನಮಗೆ ನಿಮ್ಮನ್ನು ಹೊರತುಪಡಿಸಿದರೆ ಬಿಜೆಪಿಯಲ್ಲಿ ಬೇರೊಬ್ಬರು ಕಾಣುತ್ತಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದರೆ ಗೆಲ್ಲಿಸುವ ಶಕ್ತಿ ನಿಮಗಿದೆ. ನೀವು ಅನುಮತಿ ಕೊಟ್ಟರೆ ಈಗಲೇ ನಾವು ತ್ಯಾಗಕ್ಕೆ ಸಿದ್ಧ ಎಂದು ಹೇಳಿದರು.

ಸಹನೆಯಿಂದಲೇ ಮಾತುಗಳನ್ನು ಆಲಿಸುತ್ತಿದ್ದ ಯಡಿಯೂರಪ್ಪ ನಾವು ಯಾವುದೇ ಆಪರೇಷನ್ ಕಮಲ ನಡೆಸುತ್ತಿಲ್ಲ. ಸುಖಾಸುಮ್ಮನೆ ನಮ್ಮ ಪಕ್ಷಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡಬೇಡಿ. ನಿಮಗೆ ರಾಜೀನಾಮೆ ಕೊಡುವುದಿದ್ದರೆ ಸ್ಪೀಕರ್ ಭೇಟಿಯಾಗಿ ಎಂದು ಸಲಹೆ ಮಾಡಿದರು.

ಇಷ್ಟಕ್ಕೂ ಸುಮ್ಮನಾಗದ ಅನಾಮಧೇಯರು ಪದೇ ಪದೇ ಸರ್ ನಾವು ಸುಳ್ಳು ಹೇಳುತ್ತಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೊದಲು ನಮಗೆ ನೀವು ಎಷ್ಟು ಕೊಡುತ್ತೀರಿ ಎಂಬುದನ್ನು ಹೇಳಿ. ನಾಳೆ ಬೆಳಗ್ಗೆಯೇ ರಮೇಶ್‍ಕುಮಾರ್ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.

ಅಲ್ಲಿಗೆ ಸಹನೆ ಕಳೆದುಕೊಂಡ ಯಡಿಯೂರಪ್ಪ ದೂರವಾಣಿ ಕರೆ ಮಾಡಿದ ನಾಲ್ವರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ನೀವು ರಾಜೀನಾಮೆ ಕೊಡುವುದಾದರೆ ಕೊಟ್ಟಿಕೊಳ್ಳಿ. ನನ್ನ ಬಳಿ ಮಾತನಾಡಬೇಕಾದ ಅಗತ್ಯವಿಲ್ಲ. ಇನ್ನೊಂದು ಬಾರಿ ಇದೇ ರೀತಿ ಕರೆ ಮಾಡಿದರೆ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಬೆದರಿಕೆ ಹಾಕಿದ ನಂತರ ಕರೆ ಕಡಿತಗೊಂಡಿದೆ.

ಮೂಲಗಳ ಪ್ರಕಾರ ಆಪರೇಷನ್ ಕಮಲ ಯಡಿಯೂರಪ್ಪನವರ ಉಸ್ತುವಾರಿಯಲ್ಲೇ ನಡೆಯುತ್ತಿದೆ ಎಂದು ಅರಿತಿದ್ದ ಸರ್ಕಾರ ಅವರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡುವಂತೆ ಗುಪ್ತಚರ ವಿಭಾಗಕ್ಕೆ ಸೂಚನೆ ಕೊಟ್ಟಿದೆ.

ಗುಪ್ತಚರ ವಿಭಾಗದವರು ತಮ್ಮ ಮೇಲೆ ಕಣ್ಣಿಡುವುದರ ಜೊತೆಗೆ ತಮ್ಮ ದೂರವಾಣಿ ಕರೆಗಳು ಕೂಡ ಟ್ರಾಪ್ ಆಗುತ್ತದೆ ಎಂಬುದನ್ನು ಯಡಿಯೂರಪ್ಪ ಸೂಕ್ಷ್ಮವಾಗಿ ಅರಿತುಕೊಂಡಿದ್ದರು.

ಇತ್ತ ಕೇಂದ್ರದ ಪ್ರಭಾವಿ ಸಚಿವರೊಬ್ಬರು ಬಿಎಸ್‍ವೈಗೆ ನಿಮಗೆ ಅನಾಮಧೇಯ ವ್ಯಕ್ತಿಗಳು ಕರೆ ಮಾಡಿದರೆ ಹೆಚ್ಚು ಮಾತನಾಡಬೇಡಿ, ದೂರವಾಣಿ ಕರೆಗಳು ಟ್ರ್ಯಾಪ್ ಆಗುತ್ತವೆ ಎಂಬ ಸುಳಿವು ಕೊಟ್ಟಿದ್ದರು.

ಹೀಗಾಗಿಯೇ ಇತ್ತೀಚಿನ ದಿನಗಳಲ್ಲಿ ಯಡಿಯೂರಪ್ಪ ತಮ್ಮ ಮೊಬೈಲ್‍ಗೆ ಯಾವುದೇ ಕರೆ ಬಂದರು ಹೆಚ್ಚು ಮಾತನಾಡದೆ ಎಷ್ಟು ಬೇಕೋ ಅಷ್ಟೇ ಪ್ರತಿಕ್ರಿಯೆ ನೀಡುತ್ತಾರೆ ಎಂದು ತಿಳಿದುಬಂದಿದೆ.

ರಾಯಚೂರು ಜಿಲ್ಲೆ ದೇವದುರ್ಗದಲ್ಲಿ ನಡೆದ ಮಿಡ್‍ನೈಟ್ ಆಪರೇಷನ್ ಕಮಲದ ಆಡಿಯೋವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಬಹಿರಂಗಗೊಳಿಸಿದ ನಂತರ ಬಿಎಸ್‍ವೈ ಎಚ್ಚೆತ್ತುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ