
ಬೆಂಗಳೂರು: ಬಾಂಗ್ಲಾದೇಶವನ್ನು ಮಣಿಸುವ ಮೂಲಕ ಭಾರತ ವಿಶ್ವಕಪ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಭಾರತ ಏಳನೇ ಬಾರಿಗೆ ಸೆಮೀಸ್ ತಲುಪಿದಂತಾಗಿದೆ. ನಿನ್ನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಉತ್ತಮವಾಗಿ ಬ್ಯಾಟ್ ಬೀಸಲಿಲ್ಲ. ಇದು ಅವರ ಅಭಿಮಾನಿಗಳಿಗೆ ಬೇಸರ ತಂದಿತ್ತು. ಆದರೆ, ಅವರು ಹಂಚಿಕೊಂಡ ಫೋಟೋ ಎಲ್ಲರ ಮನ ಗೆದ್ದಿದೆ.
ಚಾರುಲತಾ ಪಟೇಲ್ ಹೆಸರಿನ 87 ವರ್ಷದ ವೃದ್ಧೆ ಭಾರತ-ಬಾಂಗ್ಲಾ ಪಂದ್ಯವನ್ನು ವೀಕ್ಷಿಸಲು ಬಂದಿದ್ದರು. ಭಾರತದ ಕ್ರಿಕೆಟ್ ತಂಡ ಸಿಕ್ಸ್, ಬೌಂಡರಿ ಬಾರಿಸಿದಾಗ ಈ ವೃದ್ಧೆ ಅದನ್ನು ಸಂಭ್ರಮಿಸುತ್ತಿದ್ದರು. ಈ ಮೂಲಕ ಅವರು ಎಲ್ಲರ ಗಮನ ಸೆಳೆದಿದ್ದರು. ಇದು ಭಾರತ ಕ್ರಿಕೆಟ್ ತಂಡದ ಗಮನವನ್ನೂ ಸೆಳೆದಿದೆ.
ಪಂದ್ಯ ಮುಗಿಯುತ್ತಿದ್ದಂತೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಚಾರುಲತಾ ಬಳಿ ತೆರಳಿ ಅವರನ್ನು ಮಾತನಾಡಿಸಿದ್ದಾರೆ. ಅಷ್ಟೇ ಅಲ್ಲ ಅವರ ಬಳಿ ಆಶೀರ್ವಾದ ಕೂಡ ಪಡೆದಿದ್ದಾರೆ. ಈ ಫೋಟೋವನ್ನು ವಿರಾಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
“ಇಷ್ಟೊಂದು ಪ್ರೀತಿ ಹಾಗೂ ಬೆಂಬಲ ತೋರಿದ ಅಭಿಮಾನಿಗಳಿಗೆ ಧನ್ಯವಾದ. ಅದರಲ್ಲೂ ಚಾರುಲತಾ ಪಟೇಲ್ ಅವರಿಗೆ ತುಂಬು ಹೃದಯದಿಂದ ಧನ್ಯವಾದ ಅರ್ಪಿಸುತ್ತೇನೆ. ಅವರಿಗೆ 87 ವರ್ಷ ವಯಸ್ಸು. ಇಂಥ ಅಭಿಮಾನಿಯನ್ನು ನಾನು ಹಿಂದೆ ಎಂದಿಗೂ ನೋಡಿಲ್ಲ. ಮುಂದಿನ ಪಂದ್ಯಕ್ಕೆ ಅವರ ಆಶೀರ್ವಾದ ಪಡೆದಿದ್ದೇನೆ,” ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.
ವಿಶ್ವಕಪ್ ಮಂಡಳಿ ಕೂಡ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಸದ್ಯ ಈ ಫೋಟೋ ಹಾಗೂ ವಿಡಿಯೋಗಳು ನೆಟ್ಟಿಗರ ಮನ ಗೆದ್ದಿದೆ. ಭಾರತದವರು ಮಾತ್ರವಲ್ಲದೆ ಬೇರೆ ಬೇರೆ ದೇಶಗಳ ಅಭಿಮಾನಿಗಳು ಕೊಹ್ಲಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.