ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂದನಾಗೂ ವಾರ್ಷಿಕ ಪ್ರಶಸ್ತಿ – ಕೋಹ್ಲಿಗೆ ಪಾಲಿ ಉಮ್ರಿಗರ್ ಪ್ರಶಸ್ತಿ

ಮುಂಬೈ:

ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬಿಸಿಸಿಐನ ಪಾಲಿ ಉಮ್ರಿಗರ್ ಪ್ರಶಸ್ತಿಗೆ ಭಾಜನರಾಗಿದ್ದಾಾರೆ. ಕೊಹ್ಲಿ ನಾಲ್ಕನೇ ಬಾರಿ ಪಾಲಿ ಉಮ್ರಿಗರ್ ಪ್ರಶಸ್ತಿಯನ್ನು ಪಡೆಯುತ್ತಿದ್ದಾರೆ.

ಬಿಸಿಸಿಐ ಪ್ರತಿ ವರ್ಷ ವಿವಿಧ ವಿಭಾಗಗಳಲ್ಲಿ ಅತ್ಯುನ್ನತ ಪ್ರದರ್ಶನ ತೋರಿದ ಆಟಗಾರರಿಗೆ ಪ್ರಶಸ್ತಿ ಘೋಷಣೆ ಮಾಡುತ್ತದೆ. ಅಂತರಾಷ್ಟ್ರೀಯ ಪಂದ್ಯಗಳನ್ನಾಡುವ ಆಟಗಾರರಲ್ಲಿ ಉತ್ತಮ ಪ್ರದರ್ಶನ ತೋರುವವರಿಗೆ ಪಾಲಿ ಉಮ್ರಿಗರ್ ಪ್ರಶಸ್ತಿಯನ್ನು ನೀಡುತ್ತದೆ. ಈ ಪ್ರಶಸ್ತಿಗೆ ಕಳೆದ ವರ್ಷ ಉತ್ತಮ ಪ್ರದರ್ಶನ ನೀಡಿದ ಕೊಹ್ಲಿ ಭಾಜನರಾಗಿದ್ದಾರೆ.

ಪ್ರಸ್ತುತ ಏಕದಿನ ಪಂದ್ಯಗಳಲ್ಲಿ ನಂ.1 ಸ್ಥಾನದಲ್ಲಿರುವ ಕೊಹ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ 91.90 ಸರಾಸರಿಯಲ್ಲಿ 2757ರನ್ ಗಳಿಸಿದ್ದಾರೆ. ಒಂದೇ ವರ್ಷದಲ್ಲಿ ನಾಲ್ಕು ದ್ವಿಶತಕಗಳನ್ನು ಭಾರಿಸಿ ಸಾಧನೆಯನ್ನು ಮಾಡಿದ್ದಾರೆ.

ಜೂ.12ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಬಿಸಿಸಿಐ ನೀಡಲಿದೆ. ಬಿಸಿಸಿಐ ಮಹಿಳಾ ಆಟಗಾರ್ತಿಯರಿಗೂ ಪ್ರಶಸ್ತಿ ನೀಡಲು ಮುಂದಾಗಿದೆ. 2016-17ನೇ ಸಾಲಿನ ಅತ್ಯುತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ಹರ್ಮನ್ ಪ್ರೀತ್ ಕೌರ್ ಹಾಗೂ 2017-18ನೇ ಸಾಲಿಗೆ ಸ್ಮೃತಿ ಮಂದನಾ ಭಾಜನರಾಗಿದ್ದಾರೆ.

ಜೀವಮಾನದ ಸಾಧನೆಗಾಗಿ ನೀಡುವ ಕರ್ನಲ್ ಸಿ. ಕೆ. ನಾಯ್ಡು ಪ್ರಶಸ್ತಿಯು ಅನ್ಷುಮಾನ್ ಗಾಯಕ್ವಾಾಡ್ ಅವರಿಗೆ ಲಭ್ಯವಾಗಿದೆ. ಇದೇ ವಿಭಾಗದ ಮಹಿಳಾ ಪ್ರಶಸ್ತಿಯನ್ನು ಸುಧಾ ಶಾ ಅವರಿಗೆ ಘೋಷಿಸಲಾಗಿದೆ. ಬಿಸಿಸಿಐ ವಿಶೇಷ ಪ್ರಶಸ್ತಿಯನ್ನು ಭಾರತ ತಂಡ ಮಾಜಿ ವಿಕೆಟ್ ಕೀಪರ್ ಬುಧಿ ಕುಂದರನ್ ಅವರಿಗೆ ಘೋಷಿಸಲಾಗಿದೆ.

ಜಗಮೋಹನ್ ದಾಲ್ಮಿಯಾ ಹೆಸರಿನಲ್ಲಿ ದೇಸೀಯ ಮಟ್ಟದಲ್ಲಿ ಹಿರಿಯರ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ದೀಪ್ತಿ ಶರ್ಮಾ ಹಾಗೂ ಕಿರಿಯರ ವಿಭಾಗದಲ್ಲಿ ಜೇಮಿಮಾ ರೋಡ್ರಿಗಸ್ ಅವರಿಗೆ ಘೋಷಿಸಲಾಗಿದೆ.

ರಣಜಿ ಪಂದ್ಯದಲ್ಲಿ ಅತ್ಯಂತ ಹೆಚ್ಚು ರನ್ ಭಾರಿಸಿದ ಆಟಗಾರರಿಗೆ ನೀಡಲಾಗುವ ಮಾಧವರರಾವ್ ಸಿಂಧಿಯಾ ಪ್ರಶಸ್ತಿಯು ಕರ್ನಾಟಕ ಮಾಯಾಂಕ್ ಅಗರ್ವಾಲ್ ಗೆ ಘೋಷಣೆಯಾಗಿದೆ. ಅದೇ ರೀತಿ ಮಾಧವರಾವ್ ಸಿಂಧಿಯಾ ಹೆಸರಿನ ರಣಜಿ ಪಂದ್ಯದಲ್ಲಿ ಅತ್ಯಂತ ಹೆಚ್ಚು ವಿಕೆಟ್ ಪಡೆದ ಪ್ರಶಸ್ತಿಯು ಜಲಜ್ ಸಕ್ಸೇನಾಗೆ ಲಭ್ಯವಾಗಿದೆ. ರಣಜಿಯಲ್ಲಿನ ಅತ್ಯಂತ ಉತ್ತಮ ಪ್ರದರ್ಶನ ನೀಡಿದ ಆಲ್ ರೌಂಡರ್ ಗೆ ನೀಡಲಾಗುವ ಲಾಲಾ ಅಮರನಾಥ್ ಪ್ರಶಸ್ತಿಯು ಜಲಜ್ ಸಕ್ಸೇನಾ ಮುಡಿಗೇರಿದೆ. ಅದೇ ರೀತಿ ದೇಸೀಯ ಕ್ರೇಡೆಗಳಲ್ಲಿ ಸೀಮಿತ ಓವರ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಆಲ್ ರೌಂಡರ್ ಗೆ ನೀಡಲಾಗುವ ಲಾಲಾ ಅಮರನಾಥ್ ಹೆಸರಿನ ಪ್ರಶಸ್ತಿ ದಿವೇಶ್ ಪಠಾಣಿಯಾಗೆ ಘೋಷಣೆಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ