ಬೆಂಗಳೂರು, ಜು.2-ಯೋಗ ದೈಹಿಕ ವ್ಯಾಯಾಮ ಮತ್ತು ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವ ಸಾಧನ ಮಾತ್ರವಲ್ಲ, ಅದರ ಉಪಯುಕ್ತತೆ, ಅನುಕೂಲಗಳು, ಸಿದ್ಧಾಂತ, ಪರಿಕಲ್ಪನೆಗಳು ಬಲು ವಿಸ್ತಾರವಾದದ್ದು ಎಂದು ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದ ಪ್ರಾಂಶುಪಾಲ ನಾಗೇಶರಾವ್ ತಿಳಿಸಿದರು.
ಮಹಾಲಕ್ಷ್ಮೀಪುರದ ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರ ಹಮ್ಮಿಕೊಂಡಿದ್ದ ಐದನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವೇಳೆ ಮಾತನಾಡಿದ ಅವರು, ಭಗವದ್ಗೀತೆ, ಪುರಾಣ, ಉಪನಿಷತ್ತು, ಶಾಸನಗಳಲ್ಲಿ ಸಿಗುವಂತೆ, ಮುನಿವರ್ಯ ಪತಂಜಲಿ ತಿಳಿಸಿದಂತೆ, ವಿವೇಕಾನಂದರ ಪರಿಕಲ್ಪನೆಯಂತೆ, ಯೋಗವು ಪ್ರತಿಯೊಬ್ಬನ ದೈಹಿಕ, ಮಾನಸಿಕ, ಪಾರಮಾರ್ಥಿಕ ಸ್ಥಿತಿಯನ್ನು ಕಾಪಾಡುವುದರ ಜೊತೆಗೆ ಸಾರ್ವತ್ರಿಕ ಶಾಂತಿ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಕಾಪಾಡಲು ಉತ್ತೇಜನ ನೀಡುತ್ತದೆ. ಈ ನಿಟ್ಟಿನಲ್ಲಿ ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರವು ಹತ್ತು ಹಲವು ಸಮಾಜಕ್ಕೆ ಒಳಿತಾಗುವ, ಮಾದರಿ ಯೋಗ ಶಾಲೆಯಾಗಿ ಗುರುತಿಸಿಕೊಂಡಿದೆ ಎಂದರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಶುಭಾಶಯಗಳನ್ನು ತಿಳಿಸಿದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು ಹಲವಾರು ದೇಶಗಳು ಯೋಗವನ್ನು ಕೊಟ್ಟ ಭಾರತಕ್ಕೆ ಕೃತಜ್ಞರಾಗಿರುವ ಬಗ್ಗೆ ತಿಳಿಸಿದರು.
ಜೀವನ ಒಂದು ತಪಸ್ಸಿನಂತೆ. ಯೋಗ ಜೀವನ ನಮಗೆಲ್ಲರಿಗೂ ಶಕ್ತಿ, ಸ್ಫೂರ್ತಿಯನ್ನು ನೀಡುತ್ತದೆ. ಅಷ್ಟಾಂಗ ಯೋಗ ನಮ್ಮ ಜೀವನವನ್ನು ಉದ್ಧರಿಸುತ್ತದೆ ಎಂದು ಹೇಳಿದರು.
ವಿಶ್ವವಿಖ್ಯಾತ ಯೋಗಪಟು ಮೈಸೂರಿನ ಖುಷಿ ಅವರಿಗೆ ಯೋಗ ಚತುರೆ, ಎರಡು ಲಕ್ಷಕ್ಕೂ ಮೀರಿದ ಜನರಿಗೆ ಉಚಿತ ಯೋಗ ತರಬೇತಿಯನ್ನು ನೀಡಿರುವ ಮಂಗಳೂರಿನ ಗೋಪಾಲಕೃಷ್ಣ ದೇಲಂಪಾಡಿಯವರಿಗೆ ಯೋಗ ಭಾಸ್ಕರ ಹಾಗೂ ಯೋಗ ಮುದ್ರೆ ಪ್ರವೀಣ ಡಾ.ಕೆ.ರಂಗರಾಜ ಐಯಂಗಾರ್ ಅವರಿಗೆ ಯೋಗ ಮಾರ್ತಾಂಡ ಬಿರುದು ನೀಡಿ ಗೌರವಿಸಲಾಯಿತು.
ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.