ಬೆಂಗಳೂರು, ಜು.2-ನಾವೇನು ಕಣ್ಣು ಮುಚ್ಚಿಕೊಂಡು ರಾಜಕೀಯ ಮಾಡುತ್ತಿಲ್ಲ. ಯಾರು, ಏನು ಮಾಡುತ್ತಿದ್ದಾರೆ ಎಂದು ನಮಗೂ ಗೊತ್ತಿದೆ. ಸರ್ಕಾರ ಪತನಗೊಳಿಸುವ ಯಾವ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ಐದು ವರ್ಷ ಅಧಿಕಾರ ಪೂರೈಸಲಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಏನು ಆಟವಾಡುತ್ತಿದ್ದಾರೆ ಎಂದು ನನಗೆ ಗೊತ್ತಿದೆ. ಬಿಜೆಪಿಯವರು ಏನು ಮಾಡುತ್ತಿದ್ದಾರೆ, ನಮ್ಮವರು ಏನೆಲ್ಲ ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ನಾವು ಕಣ್ಮುಚ್ಚಿಕೊಂಡು ಕುಳಿತಿಲ್ಲ. ನಮಗೂ ರಾಜಕೀಯ ಗೊತ್ತಿದೆ ಎಂದು ಹೇಳಿದರು.
ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಮಾತುಕತೆ ನಡೆಸಿದ ನಂತರವೂ ಕೆಲವರು ರಾಜೀನಾಮೆ ಕೊಟ್ಟಿದ್ದಾರೆ. ರಾಜೀನಾಮೆ ಕೊಟ್ಟವರ ಮನವೊಲಿಸುವ ಅಗತ್ಯವಿಲ್ಲ ಎಂದು ಹೇಳುವ ಮೂಲಕ ರಮೇಶ್ ಜಾರಕಿ ಹೊಳಿ ಅವರಿಗೆ ಡಿ.ಕೆ.ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.
ಆನಂದ್ಸಿಂಗ್ ಅವರು ಜಿಂದಾಲ್ ವಿಷಯಕ್ಕೆ ರಾಜೀನಾಮೆ ಕೊಟ್ಟಿದ್ದರೆ ಅದು ಸ್ವೀಕಾರಾರ್ಹವಲ್ಲ . ಜಿಂದಾಲ್ ವೈಯಕ್ತಿಕ ನಿರ್ಧಾರ ಅಲ್ಲ. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗಲೇ ಗಣಿಗಾರಿಕೆಗಾಗಿ ಜಿಂದಾಲ್ಗೆ ಭೂಮಿ ನೀಡಲಾಗಿತ್ತು. ಅದನ್ನು ಯಡಿಯೂರಪ್ಪ ಅವರೇ ಹೇಳಿಕೊಂಡಿದ್ದಾರೆ. ನಾವು ಗಣಿಗಾರಿಕೆಗೆ ಜಮೀನು ಕೊಟ್ಟಿಲ್ಲ, ಕಾರ್ಖಾನೆಗೆ ಕೊಟ್ಟಿದ್ದೇವೆ. ಗಣಿಗಾರಿಕೆ ಮಾಡಬೇಕಾದರೆ ಸಾರ್ವಜನಿಕ ಹರಾಜಿನಲ್ಲಿ ಭಾಗವಹಿಸಿ ಭೂಮಿ ಪಡೆದುಕೊಳ್ಳಬೇಕು. ಈ ವಿಚಾರವಾಗಿ ಸಂಪುಟದಲ್ಲಿ ಚರ್ಚೆ ನಡೆದಾಗ ನಾನು ಸಭೆಯಲ್ಲಿ ಭಾಗವಹಿಸಿರಲಿಲ್ಲ ಎಂದು ಹೇಳಿದರು.
ಹಿಂದೆ ಯಡಿಯೂರಪ್ಪ ಜಮೀನು ನೀಡಿದ ಕಡತಕ್ಕೆ ಸಹಿ ಹಾಕಿದಂತೆ, ಜಾರ್ಜ್ ಅವರು ಈಗ ಅದೇ ಕೆಲಸ ಮಾಡಿದ್ದಾರೆ. ಬಿಜೆಪಿಯವರ ವಿರೋಧ ಅಪ್ರಸ್ತುತ. ಎಚ್.ಕೆ.ಪಾಟೀಲ್ ಅವರು ಕೆಲವು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿದೆ. ಒಟ್ಟು ಪ್ರಕ್ರಿಯೆಯನ್ನೇ ಮರುಪರಿಶೀಲಿಸುತ್ತಿದೆ.
ಈ ಹಿಂದೆ ಜಮೀನು ಮಂಜೂರಾಗಿದೆ. ಅದಕ್ಕೆ ಹಣವನ್ನೂ ಕಂಪನಿಯವರು ಕಟ್ಟಿದ್ದಾರೆ. ಸಣ್ಣಪುಟ್ಟ ಲೋಪದೋಷಗಳಿದ್ದರೆ ಅದನ್ನು ಪರಿಶೀಲನೆ ಮಾಡಲು ಸಂಪುಟ ಉಪಸಮಿತಿ ರಚಿಸಲಾಗಿದೆ ಎಂದು ಹೇಳಿದರು.
ಇದು ಕೇವಲ ಜಿಂದಾಲ್ನ ಪ್ರಶ್ನೆಯಲ್ಲ. ರಾಜ್ಯದಲ್ಲಿ ಕೈಗಾರಿಕೆಗಳು ಬೇಕೇ, ಬೇಡವೇ ಎಂಬ ಚರ್ಚೆಯೂ ಅಡಗಿದೆ. ಆರ್ಥಿಕ ಪ್ರಗತಿಗಾಗಿ ನಾವು ಬಂಡವಾಳ ಹೂಡಿಕೆಯನ್ನು ಆಹ್ವಾನಿಸುತ್ತೇವೆ. ಜಾಗತಿಕ ಬಂಡವಾಳದಾರರ ಸಮಾವೇಶವನ್ನೂ ನಡೆಸಿದ್ದೇವೆ. ಅವರಿಗೆ ಜಮೀನು ಕೊಡುವುದಿಲ್ಲ ಎಂದರೆ ಹೇಗೆ? ಎಂದು ಪ್ರಶ್ನಿಸಿದರು.
ನನ್ನ ತಾಲೂಕಿನಲ್ಲಿ ಯಾರಾದರೂ ಬಂದು ಕೈಗಾರಿಕೆ ಸ್ಥಾಪಿಸಿ ಎಂದು ಉದ್ಯಮಿಗಳನ್ನು ನಾನು ಆಹ್ವಾನಿಸುತ್ತಿದ್ದೇನೆ. ರಾಜ್ಯದ ಉದ್ದಗಲಕ್ಕೂ ಬಂಡವಾಳ ಹೂಡಿಕೆಯಾಗಬೇಕು. ಉದ್ಯೋಗಗಳು ಸಿಗಬೇಕು. ಬಳ್ಳಾರಿಯಲ್ಲಿ ಟೆಕ್ಸ್ಟೈಲ್ ಉದ್ಯಮ ಚೆನ್ನಾಗಿ ನಡೆಯುತ್ತಿದೆ. ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿ ಬಳ್ಳಾರಿ ಸೇರಿದೆ. ಅಲ್ಲಿ ಉದ್ಯಮ ಆರಂಭಿಸುವವರಿಗೆ ಪ್ರೋತ್ಸಾಹ ನೀಡುವುದು ಸರ್ಕಾರದ ಕರ್ತವ್ಯ ಎಂದರು.
ಶಾಸಕರ ರಾಜೀನಾಮೆಯಿಂದಾಗಿ ಸರ್ಕಾರ ಪತನಗೊಳ್ಳುತ್ತದೆ ಎಂಬುದು ಭ್ರಮೆಯಷ್ಟೆ. ಯಾರಿಗೂ ಸದ್ಯದ ಪರಿಸ್ಥಿತಿಯಲ್ಲಿ ಮಧ್ಯಂತರ ಚುನಾವಣೆ ಬೇಕಿಲ್ಲ.
ಬಿಜೆಪಿ ನಾಯಕರು ಖಾಸಗಿಯಾಗಿ ಏನು ಮಾತನಾಡುತ್ತಿದ್ದಾರೆ ಎಂದು ಗೊತ್ತಿದೆ. ಇನ್ನೊಂದಿಷ್ಟು ಮಂದಿ ರಾಜೀನಾಮೆ ಕೊಟ್ಟರೂ ಸರ್ಕಾರಕ್ಕೆ ಏನೂ ಆಗಲ್ಲ.
ಎಲ್ಲರಿಗೂ ವೈಯಕ್ತಿಕ ಕಾರಣಗಳಿರುತ್ತವೆ. ಎಲ್ಲ ಸಂದರ್ಭದಲ್ಲೂ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ಆನಂದ್ಸಿಂಗ್ ನನಗೆ ಉತ್ತಮ ಸ್ನೇಹಿತರು.
ರಾಹುಲ್ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದರು. ಅವರ ರಾಜೀನಾಮೆ ನನಗೆ ಶಾಕ್ ನೀಡಿದೆ. ನಾನು ಆಸ್ಪತ್ರೆಯಲ್ಲಿದ್ದಾಗ ಈ ಸುದ್ದಿ ಕೇಳಿಬಂತು. ಕೂಡಲೇ ಅವರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಅವರ ವಿದೇಶಿ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಸರ್ಕಾರ ಸುಭದ್ರವಾಗಿದೆ ಎಂದು ಅವರಿಗೆ ಗೊತ್ತಿದೆ.
ಹಾಗಾಗಿ ವಿದೇಶಿ ಪ್ರವಾಸ ತೆರಳಿದ್ದಾರೆ. ಎಲ್ಲರಿಗೂ ಅವರದೇ ರೀತಿಯಲ್ಲಿ ಕಾರ್ಯಶೈಲಿಗಳಿರುತ್ತವೆ. ದಿನೇಶ್ಗುಂಡೂರಾವ್ ನಾವಾಗಲು ಸಾಧ್ಯವಿಲ್ಲ.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ತರ ಬೇರೆಯವರು ಆಗಲು ಸಾಧ್ಯವಿಲ್ಲ ಎಂದರು.