ಬ್ಲ್ಯಾಕ್ ಮೇಲ್ ಮಾಡಲಿರುವ ಶಾಸಕರಿಗೆ ತಿರುಗೇಟು ನೀಡಲಿರುವ ಕಾಂಗ್ರೇಸ್

ಬೆಂಗಳೂರು, ಜು.2-ಶಾಸಕರಾದ ಆನಂದ್‍ಸಿಂಗ್ ಮತ್ತು ರಮೇಶ್‍ಜಾರಕಿ ಹೊಳಿ ಅವರ ರಾಜೀನಾಮೆ ಅಂಗೀಕಾರ ಮಾಡಿ ಸರ್ಕಾರವನ್ನು ಬ್ಲ್ಯಾಕ್‍ಮೇಲ್ ಮಾಡಲು ಯತ್ನಿಸುವ ಶಾಸಕರಿಗೆ ತಿರುಗೇಟು ನೀಡಲು ಕಾಂಗ್ರೆಸ್ ತಂತ್ರ ಹೆಣೆಯುತ್ತಿದೆ.

ಬಿಜೆಪಿ ಪದೇ ಪದೇ ಆಪರೇಷನ್ ಕಮಲ ನಡೆಸಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿದೆ. ಅದಕ್ಕೆ ತಕ್ಕಂತೆ ಕಾಂಗ್ರೆಸ್‍ನ ಕೆಲವು ಶಾಸಕರು ಕುಣಿಯುತ್ತಿದ್ದು, ಸಮ್ಮಿಶ್ರ ಸರ್ಕಾರವನ್ನು ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸುತ್ತಾರೆ. ಇದರಿಂದಾಗಿ ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರುತ್ತಿದ್ದು, ಅಧಿಕಾರಿಗಳ ವಲಯದಲ್ಲಿ ಸರ್ಕಾರ ಸ್ಥಿರವಾಗಿಲ್ಲ ಎಂಬ ಭಾವನೆ ಮೂಡುತ್ತಿದೆ. ಅಭಿವೃದ್ಧಿ ಕೆಲಸಗಳಿಗೂ ಹಿನ್ನಡೆಯಾಗುತ್ತಿದೆ.

ಹೀಗಾಗಿ ಬ್ಲ್ಯಾಕ್‍ಮೇಲ್ ತಂತ್ರಕ್ಕೆ ಬಗ್ಗದೆ ತಿರುಗೇಟು ನೀಡಲು ಕಾಂಗ್ರೆಸ್ ಸಿದ್ಧವಾಗಿದ್ದು, ರಮೇಶ್ ಜಾರಕಿ ಹೊಳಿ ಹಾಗೂ ಆನಂದ್‍ಸಿಂಗ್ ರಾಜೀನಾಮೆ ಪತ್ರ ಅಂಗೀಕಾರ ಮಾಡಿ ಉಪಚುನಾವಣೆ ಎದುರಿಸಲು ಕಾಂಗ್ರೆಸ್ ನಿರ್ಧರಿಸಿದೆ.

ಆನಂದ್‍ಸಿಂಗ್ ಅವರು ಜಿಂದಾಲ್‍ಗೆ ಭೂಮಿ ಪರಭಾರೆ ಮಾಡುತ್ತಿರುವುದನ್ನು ವಿರೋಧಿಸಿ ಬಹಿರಂಗ ಹೇಳಿಕೆ ನೀಡಿದ್ದರು. ಪ್ರತಿಭಟನೆಯ ಎಚ್ಚರಿಕೆಯನ್ನೂ ನೀಡಿದ್ದರು. ಅದರ ಬದಲಾಗಿ ಸರ್ಕಾರದ ಪ್ರಮುಖರ ಜೊತೆ, ಪಕ್ಷದ ನಾಯಕರ ಜೊತೆ ಚರ್ಚೆ ಮಾಡಿ ಒತ್ತಡ ಹೇರಿದರೆ ಜಿಂದಾಲ್ ವಿಷಯದಲ್ಲಿ ಅವರ ಇಚ್ಛೆಯಂತೆ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇತ್ತು. ಅದನ್ನು ಬಿಟ್ಟು ಬಹಿರಂಗ ಹೇಳಿಕೆ ನೀಡಿ ಮುಜುಗರ ಉಂಟು ಮಾಡುವುದು ಮತ್ತು ರಾಜೀನಾಮೆ ನೀಡುವ ಬೆದರಿಕೆ ತಂತ್ರಗಾರಿಕೆಯನ್ನು ಅನುಸರಿಸುತ್ತಿದ್ದಾರೆ.

ಸ್ಪೀಕರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡಿದ್ದೇ ವಿಪರೀತವಾಯಿತು ಎನ್ನುವ ಹಂತದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆಯ ಕುರಿತು ಮಾಹಿತಿ ನೀಡಿದ್ದಲ್ಲದೆ, ಸೂಕ್ತ ಕ್ರಮಕೈಗೊಳ್ಳುವಂತೆ ಪತ್ರ ನೀಡಿದ್ದಾರೆ.

ಅಲ್ಲಿಗೆ ಆನಂದ್‍ಸಿಂಗ್ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದೇ ರಾಜೀನಾಮೆ ಕೊಟ್ಟಿದ್ದಾರೆ. ಜಿಂದಾಲ್ ಭೂಮಿ ವಿವಾದ ನೆಪ ಮಾತ್ರ ಎಂಬುದು ಸ್ಪಷ್ಟವಾಗಿದೆ. ಅವರ ಬೆನ್ನ ಹಿಂದೆಯೇ ರಮೇಶ್ ಜಾರಕಿ ಹೊಳಿ ರಾಜೀನಾಮೆ ನೀಡಿರುವುದು ಆಪರೇಷನ್ ಕಮಲದ ಜೀವಂತಿಕೆಗೆ ಸಾಕ್ಷಿಯಾಗಿದೆ ಎಂದು ಮೂಲಗಳು ಹೇಳಿವೆ.

ಕಾಂಗ್ರೆಸ್ ನಾಯಕರ ಪ್ರಕಾರ ಈಗ ರಾಜೀನಾಮೆ ನೀಡಿರುವ ಇಬ್ಬರು ಶಾಸಕರು ಸೇರಿದಂತೆ ಇನ್ನೂ ನಾಲ್ವರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಒಟ್ಟು ಆರು ಮಂದಿ ರಾಜೀನಾಮೆ ನೀಡಿದರೂ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಸರಳ ಬಹುಮತ ಇದ್ದೇ ಇರುತ್ತದೆ. ಬಿಜೆಪಿ ವಿಧಾನಮಂಡಲ ಅಧಿವೇಶನದಲ್ಲಿ ವಿಶ್ವಾಸ ಮತ ಯಾಚನೆಗೆ ಒತ್ತಾಯ ಮಾಡಿದರೂ ರಾಜ್ಯಪಾಲರು ಮಧ್ಯಪ್ರವೇಶಿಸಿ ಸೂಚನೆ ನೀಡಿದರೂ ಕೂಡ ಈಗಿರುವ ಶಾಸಕರ ಸಂಖ್ಯಾಬಲದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ವಿಶ್ವಾಸ ಮತ ಗೆಲ್ಲುವುದರಲ್ಲಿ ಸಂಶಯವಿಲ್ಲ.

ಬಿಜೆಪಿಗೆ ತಕ್ಕ ಪಾಠ ಕಲಿಸಲು ರಿವರ್ಸ್ ಆಪರೇಷನ್ ನಡೆಸುವ ವ್ಯೂಹವನ್ನು ಕಾಂಗ್ರೆಸ್-ಜೆಡಿಎಸ್ ಸಿದ್ಧಗೊಳಿಸಿದೆ. ವಿಶ್ವಾಸ ಮತಯಾಚನೆಯಂತಹ ಪರಿಸ್ಥಿತಿ ಎದುರಾದರೆ ಬಿಜೆಪಿಯ ಮೂರ್ನಾಲ್ಕು ಮಂದಿಯ ರಾಜೀನಾಮೆ ಕೊಡಿಸುವುದು ಅಥವಾ ಅಧಿವೇಶನಕ್ಕೆ ಗೈರು ಹಾಜರುಪಡಿಸುವಂತಹ ರಣತಂತ್ರವನ್ನು ಉಭಯ ಪಕ್ಷಗಳ ನಾಯಕರು ಸಿದ್ಧಪಡಿಸಿಕೊಂಡಿದ್ದಾರೆ. ಹೀಗಾಗಿ ಪ್ರತಿ ಬಾರಿಯೂ ಬಿಜೆಪಿಯ ಆಪರೇಷನ್ ಕಮಲ, ಆಡಳಿತ ಪಕ್ಷದ ಶಾಸಕರ ಬ್ಲ್ಯಾಕ್‍ಮೇಲ್ ತಂತ್ರಕ್ಕೆ ಮಣಿಯದೆ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಎಂಬ ಚರ್ಚೆಯಾಗಿದೆ.

ಒಂದು ವೇಳೆ ಈ ಹೋರಾಟದಲ್ಲಿ ಸರ್ಕಾರ ಪತನಗೊಂಡರೆ ರಾಜ್ಯದ ಜನರ ಮುಂದೆ ಬಿಜೆಪಿಯ ಅಧಿಕಾರ ದಾಹವನ್ನು ಬಯಲು ಮಾಡಿ ಚುನಾವಣೆ ಎದುರಿಸುವ ಚರ್ಚೆಯನ್ನು ಉಭಯ ಪಕ್ಷಗಳ ನಾಯಕರು ನಡೆಸಿದ್ದಾರೆ.

ನಿನ್ನೆ ರಾತ್ರಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಕಾಂಗ್ರೆಸ್ ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ದೂರವಾಣಿ ಕರೆ ಮಾಡಿ ಪ್ರಸ್ತುತ ರಾಜಕೀಯ ಪರಿಸ್ಥಿತಿಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

ರಾಜೀನಾಮೆ ನೀಡಿರುವ ಶಾಸಕರು ತಮ್ಮಷ್ಟಕ್ಕೇ ತಾವೇ ಹಿಂಪಡೆದರೆ ಸರಿ, ಇಲ್ಲವಾದರೆ ರಾಜೀನಾಮೆ ಅಂಗೀಕಾರವಾದ ನಂತರ ಆ ಕ್ಷೇತ್ರಕ್ಕೆ ಪರ್ಯಾಯ ನಾಯಕತ್ವ ಹುಟ್ಟು ಹಾಕುವುದು ಎಂದು ನಿರ್ಧರಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ