ಬೆಂಗಳೂರು, ಜು.2- ಆಪರೇಷನ್ ಕಮಲದಿಂದ ಸುರಕ್ಷಿತ ಅಂತರ ಕಾಪಾಡಿಕೊಳ್ಳುತ್ತಿರುವ ಬಿಜೆಪಿ ನಾಯಕರಿಗೆ ನಿನ್ನೆಯಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಮೇಶ್ಜಾರಕಿಹೊಳಿ ಆಪದ್ಬಾಂಧವನಾಗಿ ಹೊರಹೊಮ್ಮಿದ್ದಾರೆ.
ಕಾಂಗ್ರೆಸ್ ಹಾಗೂ ಜೆಡಿಎಸ್ನಲ್ಲಿ ಅಸಮಾಧಾನಗೊಂಡಿರುವ ಶಾಸಕರನ್ನು ಸೆಳೆದು ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುವ ಹೊಣೆಗಾರಿಕೆಯನ್ನು ಬಿಜೆಪಿ ವರಿಷ್ಠರು ರಮೇಶ್ ಜಾರಕಿಹೊಳಿ ಹೆಗಲಿಗೆ ಹೊರಿಸಿದ್ದಾರೆ.
ಈ ಮೂಲಕ ದೋಸ್ತಿ ಸರ್ಕಾರ ಪತನವಾದರೆ ಬಿಜೆಪಿ ಪಾತ್ರ ಏನೂ ಇಲ್ಲ ಉಭಯ ಪಕ್ಷಗಳ ಮುಖಂಡರೆ ಕಿತ್ತಾಡಿಕೊಂಡು ಸರ್ಕಾರವನ್ನು ಅಸ್ಥಿರಗೊಳಿಸಿದ್ದಾರೆ ಎಂಬ ಸಂದೇಶ ರಾಜ್ಯದ ಜನರಿಗೆ ತಲುಪಲಿ ಎಂಬ ಲೆಕ್ಕಾಚಾರವನ್ನು ಬಿಜೆಪಿ ಹಾಕಿದೆ.
ಹೀಗಾಗಿ ಈ ಬಾರಿ ಆಪರೇಷನ್ ಕಮಲದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಯಾವುದೇ ನಾಯಕರ ಪಾತ್ರ ಇರುವುದಿಲ್ಲ. ಬದಲಿಗೆ ತೆರೆಮರೆಯಲ್ಲೇ ಕುಳಿತು ರಮೇಶ್ ಜಾರಕಿಹೊಳಿ ರಹಸ್ಯ ಕಾರ್ಯಚರಣೆಯನ್ನು ನಡೆಸಲಿದ್ದಾರೆ.
ಸದ್ಯ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿರುವ ಅವರು ರಾಷ್ಟ್ರೀಯ ಬಿಜೆಪಿ ನಾಯಕರ ಸೂಚನೆ ಮೇರೆಗೆ ಇಡೀ ಕಾರ್ಯತಂತ್ರವನ್ನು ರೂಪಿಸುತ್ತಿದ್ದಾರೆ. ಸೂಕ್ತ ಸ್ಥಾನಮಾನ ಸಿಗದೆ ಮುನಿಸಿಕೊಂಡಿರುವ ಭಿನ್ನಮತೀಯರನ್ನು ಒಬ್ಬೊಬ್ಬರನ್ನಾಗಿ ಸಂಪರ್ಕಿಸಿ ರಾಜೀನಾಮೆ ಕೊಡಿಸುವ ಕಾರ್ಯತಂತ್ರದಲ್ಲಿ ಜಾರಕಿಹೊಳಿ ತೊಡಗಿಸಿಕೊಂಡಿದ್ದಾರೆ.
ಆಪರೇಷನ್ ಕಮಲದಲ್ಲಿ ನೇರವಾಗಿ ಬಿಜೆಪಿ ಕೈವಾಡವಿದೆ ಎಂಬುದು ಬಹಿರಂಗಗೊಂಡರೆ ಕೇಂದ್ರ ಸರ್ಕಾರ ಮತ್ತು ಪಕ್ಷಕ್ಕೂ ಕೆಟ್ಟ ಹೆಸರು ಬರಲಿದೆ. ಇದೇ 5ರಂದು ಎನ್ಡಿಎ ಎರಡನೇ ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಲಿದೆ.
ಕರ್ನಾಟಕದ ವಿಷಯವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ಮತ್ತಿತರರು ಸಂಸತ್ನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಜೆಟ್ ಮಂಡನೆಗೆ ಅಡ್ಡಿಪಡಿಸಬಹುದೆಂಬ ಆತಂಕದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಅತ್ಯಂತ ಜಾಗರೂಕತೆಯಿಂದ ಜಾರಕಿಹೊಳಿ ಮೂಲಕವೇ ರಣತಂತ್ರವನ್ನು ರೂಪಿಸಿದ್ದಾರೆ.
ಯಾವುದೇ ಕಾರಣಕ್ಕೂ ರಾಜ್ಯ ನಾಯಕರು ಅಪ್ಪಿತಪ್ಪಿಯೂ ಭಿನ್ನಮತೀಯ ಶಾಸಕರಿಗೆ ದೂರವಾಣಿ ಕರೆ ಮಾಡುವುದಾಗಲಿ. ಇಲ್ಲವೇ ಅವರ ಜತೆ ಮಾತುಕತೆ ನಡೆಸಬಾರದು ಎಂದು ಸ್ಪಷ್ಟವಾಗಿ ಎಚ್ಚರಿಸಲಾಗಿದೆ.
ಏಕೆಂದರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ನಾಯಕರ ಪ್ರತಿ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡುವಂತೆ ಗುಪ್ತಚರ ವಿಭಾಗದ ಮುಖ್ಯಸ್ಥರಿಗೆ ಸೂಚನೆ ಕೊಟ್ಟಿದ್ದಾರೆ.
ಯಾವ ಶಾಸಕರು ಎಲ್ಲಿ? ಯಾವ ಸಂದರ್ಭದಲ್ಲಿ ಯಾರನ್ನು ಭೇಟಿ ಮಾಡಲಿದ್ದಾರೆ ? ಭೇಟಿಯಾಗಲೀರುವ ಸ್ಥಳಗಳು (ಹೋಟೆಲ್, ರೆಸಾರ್ಟ್, ನಿವಾಸ, ಪ್ರವಾಸಿ ಮಂದಿರ) ಸೇರಿದಂತೆ ಎಲ್ಲೇ ಭೇಟಿಯಾದರೂ ತಕ್ಷಣ ಮಾಹಿತಿ ನೀಡಬೇಕೆಂದು ಆದೇಶಿಸಿದ್ದಾರೆ.
ಅದರಲ್ಲೂ ಬಹುತೇಕ ಬಿಜೆಪಿಯ ಎಲ್ಲಾ ಶಾಸಕರ ದೂರವಾಣಿ ಸಂಖ್ಯೆಯನ್ನು ಸಂಗ್ರಹಿಸಿಟ್ಟಿಕೊಂಡಿರುವ ಕುಮಾರಸ್ವಾಮಿ ಇಂಚಿಂಚೂ ಮಾಹಿತಿ ಕಲೆ ಹಾಕಬೇಕೆಂದು ಗುಪ್ತಚರ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.
ಇದರ ಸುಳಿವು ಅರಿತಿರುವ ರಾಷ್ಟ್ರೀಯ ಬಿಜೆಪಿ ನಾಯಕರು ರಾಜ್ಯ ನಾಯಕರಿಂದ ಯಾವುದೇ ರೀತಿಯ ದೂರವಾಣಿ ಕರೆಗಳು ಹೋಗದಂತೆ ತಡೆಗಟ್ಟಿದ್ದಾರೆ.
ರಮೇಶ್ಜಾರಕಿಹೊಳಿ ಮೂಲಕವೇ ಅತೃಪ್ತರನ್ನು ಸೆಳೆಯುವ ಕಾರ್ಯಾಚರಣೆ ಮುಂದುವರೆದಿದೆ.
ಅತೃಪ್ತರನ್ನು ಸೆಳೆಯಲು ಕಸರತ್ತು:
ಇದೀಗ ರಮೇಶ್ ಜಾರಕಿಹೊಳಿ ಈ ಹಿಂದೆ ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶಾಸಕರನ್ನು ಸೆಳೆಯುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಪ್ರಮುಖವಾಗಿ ಬಳ್ಳಾರಿಯ ಬಿ.ನಾಗೇಂದ್ರ, ಪ್ರತಾಪ್ಗೌಡ ಪಾಟೀಲ್, ಮಹೇಶ್ಕುಮಟಳ್ಳಿ, ಸೀಮಂತ್ಪಾಟೀಲ್, ಕಂಪ್ಲಿಯ ಜೆ.ಎನ್.ಗಣೇಶ್, ಹಿರೇಕೆರೂರ್ನ ಬಿ.ಸಿ.ಪಾಟೀಲ್, ಶಿಡ್ಲಘಟ್ಟ ವಿ.ಮುನಿಯಪ್ಪ ಸೇರಿದಂತೆ ಜೆಡಿಎಸ್ನ ನಾಲ್ವರು ಶಾಸಕರಿಗೆ ಗಾಳ ಹಾಕಿದ್ದಾರೆ.
ಶುಕ್ರವಾರದೊಳಗೆ ಕನಿಷ್ಠ 13ರಿಂದ 15 ಶಾಸಕರು ರಾಜೀನಾಮೆ ಕೊಡಿಸುವ ಹೊಣೆಗಾರಿಕೆ ರಮೇಶ್ ಜಾರಕಿಹೊಳಿ ಮೇಲಿದೆ. ಇದರ ಸುಳಿವು ಅರಿತೇ ಸಚಿವ ಸತೀಶ್ ಜಾರಕಿಹೊಳಿ ಅವರು ಮಹೇಶ್ಕುಮಟಳ್ಳಿ ರಮೇಶನ ಜತೆ ಹೋದರೂ ಹೋಗಬಹುದೆಂಬ ಸುಳಿವು ನೀಡಿದ್ದಾರೆ.
ಹೀಗೆ ರಮೇಶ್ ಜಾರಕಿಹೊಳಿ ಸದ್ಯಕ್ಕೆ ಬಿಜೆಪಿ ಪಾಲಿಗೆ ಕಾಮಧೇನು ಕಲ್ಪವೃಕ್ಷ ಎಂಬಂತೆ ಹೊರ ಹೊಮ್ಮಿದ್ದಾರೆ.