ನಾಳೆ ಅಲ್ಪಸಂಖ್ಯಾತರ ಸಭೆ ನಡೆಸಲಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಬೆಂಗಳೂರು, ಜು.2-ಪಕ್ಷ ಸಂಘಟನೆಗೆ ಒತ್ತು ನೀಡಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನಾಳೆ ಅಲ್ಪಸಂಖ್ಯಾತರ ಮುಖಂಡರ ಸಭೆ ನಡೆಸಲಿದ್ದಾರೆ.

ಮುಂಬರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಹಿನ್ನೆಲೆಯಲ್ಲಿ ನಿರಂತರವಾಗಿ ಸರಣಿ ಸಭೆಗಳನ್ನು ಗೌಡರು ನಡೆಸುತ್ತಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಭಾರೀ ಹಿನ್ನಡೆಯಾದ ನಂತರ ಗೌಡರು ಪಕ್ಷವನ್ನು ಬಲಗೊಳಿಸಲು ಮುಂದಾಗಿದ್ದಾರೆ. ಸೋಲಿನಿಂದ ಧೃತಿಗೆಡದೆ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಪಣತೊಟ್ಟಿದ್ದು, ನಿರಂತರವಾಗಿ ಸಭೆಗಳನ್ನು ನಡೆಸುತ್ತಾ ಬಂದಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದವರ ಸಭೆಯನ್ನು ನಡೆಸಿ ಲೋಕಸಭೆ ಚುನಾವಣೆ ಸೋಲಿನಿಂದ ಯಾರೂ ಆತಂಕಕ್ಕೊಳಗಾಗಬೇಕಿಲ್ಲ.

ಪಕ್ಷವನ್ನು ಸಂಘಟಿಸಲು ಪ್ರತಿಯೊಬ್ಬರೂ ಶ್ರಮಿಸಬೇಕೆಂದು ಕರೆ ನೀಡಿದರು. ಅದರ ಬೆನ್ನಲ್ಲೇ ಲೋಕಸಭೆ, ವಿಧಾನಸಭೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋತ ಅಭ್ಯರ್ಥಿಗಳ ಸಭೆಯನ್ನು ನಡೆಸಿದರು. ಹಿಂದುಳಿದ ವರ್ಗಗಳ ಮುಖಂಡರ ಸಭೆ ನಡೆಸಿ ಪಕ್ಷ ಸಂಘಟನೆ ಹಾಗೂ ಚುನಾವಣಾ ಸಿದ್ಧತೆ ಬಗ್ಗೆ ಮಾರ್ಗದರ್ಶನ ಮಾಡಿದರು. ನಂತರ ಮಹಿಳಾ ಘಟಕದ ಸಭೆ ನಡೆಸಿ ರಾಜ್ಯ ಮತ್ತು ಬೆಂಗಳೂರು ನಗರ ಘಟಕಗಳಿಗೆ ನೂತನ ಅಧ್ಯಕ್ಷರನ್ನೂ ಕೂಡ ನೇಮಕ ಮಾಡಿದರು.

ಇದಾದ ಬಳಿಕ ಆಗಸ್ಟ್ 20 ರಿಂದ ಕೈಗೊಳ್ಳಲಿರುವ ಪಕ್ಷದ ಪಾದಯಾತ್ರೆಯ ಪೂರ್ವಸಿದ್ಧತಾ ಸಭೆಯನ್ನು ನಡೆಸಿದರು. ನಂತರ ಬೆಂಗಳೂರು ನಗರ ಘಟಕ ಹಾಗೂ ಮುಖಂಡರ ಸಭೆಯನ್ನು ನಡೆಸಿ ತಳಮಟ್ಟದಿಂದ ಪಕ್ಷ ಸಂಘಟಿಸುವುದು ಹಾಗೂ ಮುಂಬರುವ ಬಿಬಿಎಂಪಿ ಚುನಾವಣೆ ಬಗ್ಗೆ ಈಗಿನಿಂದಲೇ ತಯಾರು ಆಗುವಂತೆ ಸಲಹೆ ಮತ್ತು ಮಾರ್ಗದರ್ಶನ ಮಾಡಿದರು.

ನಾಳೆ ಅಲ್ಪಸಂಖ್ಯಾತ ಮುಖಂಡರ ಸಭೆ ನಡೆಸುವ ಮೂಲಕ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸುತ್ತಿದ್ದಾರೆ. ಸರಣಿ ಸಭೆಗಳನ್ನು ಗೌಡರು ನಡೆಸುತ್ತಿರುವುದರಿಂದ ವಿಧಾನಸಭೆಗೆ ಮಧ್ಯಂತರ ಚುನಾವಣೆ ಎದುರಾಗಬಹುದೆಂಬ ನಿರೀಕ್ಷೆಯಲ್ಲಿ ಪಕ್ಷವನ್ನು ಸಜ್ಜುಗೊಳಿಸುತ್ತಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಭಾವಿಸಲಾಗುತ್ತಿದೆ. ನಾಳಿನ ಸಭೆಯಲ್ಲೂ ಪಕ್ಷ ಸಂಘಟನೆ, ಕಳೆದ ಚುನಾವಣೆಗಳ ಸೋಲು-ಗೆಲುವಿನ ವಿಚಾರ, ಮೈತ್ರಿ ಸರ್ಕಾರದ ಕಾರ್ಯವೈಖರಿ ಹಾಗೂ ಎದುರಾಗುತ್ತಿರುವ ಗಂಡಾಂತರಗಳ ಬಗ್ಗೆ ಸಮಾಲೋಚನೆ ನಡೆಸುವ ಸಾಧ್ಯತೆಗಳಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ