ಆಸ್ತಿ ವಿವರ ಸಲ್ಲಿಸದ ಬಿಬಿಎಂಪಿ ಸದಸ್ಯರಿಗೆ ಅನರ್ಹತೆ ಭೀತಿ

ಬೆಂಗಳೂರು,ಜು.2- ಆಸ್ತಿ ವಿವರ ಸಲ್ಲಿಸದ 34 ಬಿಬಿಎಂಪಿ ಸದಸ್ಯರಿಗೆ ಅನರ್ಹತೆ ಭೀತಿ ಎದುರಾಗಿದ್ದು, ಇವರೆಲ್ಲರಿಗೂ ಹೈಕೋರ್ಟ್‍ನಿಂದ ನೋಟಿಸ್ ಜಾರಿಯಾಗಿದೆ.

ಉಮಾದೇವಿ ನಾಗರಾಜ್, ಪದ್ಮಾವತಿ ಶ್ರೀನಿವಾಸ್, ಕೋದಂಡರೆಡ್ಡಿ, ಲಾವಣ್ಯ ಗಣೇಶ್‍ಶೆಟ್ಟಿ, ಮೀನಾಕ್ಷಿ, ರಾಜಾ.ಎಸ್, ವಿ.ಶಿವಪ್ರಕಾಶ್, ಬಾಲಕೃಷ್ಣ, ಸರಳಾ ಮಹೇಶ್‍ಬಾಬು, ಟಿ.ರಾಮಚಂದ್ರ, ಎಂ.ಚಂದ್ರಪ್ಪ, ಜಿ.ಮಂಜುನಾಥ್, ಆರ್ಯ ಶ್ರೀನಿವಾಸ್, ರಾಜಶೇಖರ.ಎನ್, ನೌಶೇರಾ ಅಹಮ್ಮದ್, ಪದ್ಮಾವತಿ ನರಸಿಂಹಮೂರ್ತಿ, ಪದ್ಮಾವತಿ ಶ್ರೀನಿವಾಸ್, ಶ್ವೇತಾ ವಿಜಯಕುಮಾರ್, ಮಹಾಲಕ್ಷ್ಮಿ, ಮಮತಾ.ಕೆ.ಎಂ, ವೇಲೂನಾಯ್ಕರ್, ಜಯಪ್ರಕಾಶ್, ಶ್ರೀಕಾಂತ್, ಏಳುಮಲೈ(ನಿಧನ), ಜಿ.ಮೋಹನ್‍ಕುಮಾರ್, ರಮೇಶ್.ಎನ್, ಫರೀದಾ ಇಸ್ತಿಯಾಕ್, ಜಿ.ಬಾಲಕೃಷ್ಣ, ಯುವರಾಜ್, ಪ್ರಮೋದ್, ಗಾಯಿತ್ರಿ, ಅಜ್ಬುಲ್ ಬೇಗ್, ಎನ್.ನಾಗರಾಜ್, ಅಂತರ್ ಪಾಷ ಅನರ್ಹತೆ ಭೀತಿಗೆ ಒಳಗಾಗಿರುವ ಸದಸ್ಯರು.

ಏನಿದು ಪ್ರಕರಣ: ಮಂಜುನಾಥ್ ರೆಡ್ಡಿ ಅವರು ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಪ್ರಥಮ ಮೇಯರ್ ಆಗಿ ಸೆಪ್ಟೆಂಬರ್ 11, 2015ರಲ್ಲಿ ಅಧಿಕಾರ ಸ್ವೀಕರಸಿದ್ದರು. ಪದಗ್ರಹಣ ಆದ ಒಂದು ತಿಂಗಳ ಒಳಗೆ ಎಲ್ಲ 198 ಸದಸ್ಯರು ಆಸ್ತಿ ವಿವರ ಸಲ್ಲಿಸಬೇಕಿತ್ತು. ಅದರಲ್ಲಿ ಕೆಲವರು ಸಲ್ಲಿಸಿರಲಿಲ್ಲ.

ಸದಸ್ಯರ ಧೋರಣೆ ಪ್ರಶ್ನಿಸಿ ಕೆ.ಅನಿಲ್‍ಕುಮಾರ್ ಶೆಟ್ಟಿ ಅವರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಯಾರು ಆಸ್ತಿ ವಿವರ ಸಲ್ಲಿಸಿಲ್ಲವೋ ಅಂತಹ ಸದಸ್ಯರ ಸದಸ್ಯತ್ವವನ್ನು ಕೆಎಂಸಿ ಕಾಯ್ದೆ 1976ರ ಕಲಂ 9(1)ರ ಪ್ರಕಾರ ಅಸಿಂಧುಗೊಳಿಸಬೇಕೆಂದು ಅರ್ಜಿಯಲ್ಲಿ ಕೋರಿದ್ದರು.

ಪ್ರಕರಣ ಕೈಗೆತ್ತಿಕೊಂಡ ಹೈಕೋರ್ಟ್ ನ್ಯಾಯಮೂರ್ತಿ ಜಿ.ನರೇಂದ್ರ ಅವರು ನಿನ್ನೆ ಆಸ್ತಿ ವಿವರ ಸಲ್ಲಿಸದ ಈ ಎಲ್ಲ ಸದಸ್ಯರು ಮತ್ತು ಪ್ರಾದೇಶಿಕ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ನಾಳೆಯೊಳಗೆ ಆಸ್ತಿ ವಿವರ ಏಕೆ ಸಲ್ಲಿಸಿಲ್ಲ, ಒಂದು ವೇಳೆ ಸಲ್ಲಿಸಿದ್ದರೆ ಮಾಹಿತಿ ನೀಡಿ ಎಂದು ಸೂಚಿಸಿ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ. ಈ ಪ್ರಕರಣ ನಾಳೆ ವಿಚಾರಣೆಗೆ ಬರುವುದರಿಂದ ಆಸ್ತಿ ವಿವರ ಸಲ್ಲಿಸದ ಸದಸ್ಯರಿಗೆ ಅನರ್ಹತೆ ಭೀತಿ ಎದುರಾಗಿದೆ.

34 ಸದಸ್ಯರಲ್ಲಿ ಪಕ್ಷೇತರ ಸದಸ್ಯ ಏಳುಮಲೈ ಅಕಾಲಿಕ ಮರಣಕ್ಕೆ ಈಡಾಗಿದ್ದು, ಉಳಿದ ಸದಸ್ಯರು ಆಸ್ತಿ ವಿವರ ಸಲ್ಲಿಸಲೇಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ