ಬೆಂಗಳೂರು, ಜು.1- ಸ್ಮಾರ್ಟ್‍ಕಾರ್ಡ್ ಬಳಸಿ ಶುದ್ಧ ಕುಡಿಯುವ ನೀರು ಪಡೆಯುವ ಹೈಟೆಕ್ ಕುಡಿಯುವ ನೀರಿನ ಘಟಕ ಭೈರಸಂದ್ರ ವಾರ್ಡ್‍ನಲ್ಲಿ ಆರಂಭವಾಗಿದೆ.
ಹೈಟೆಕ್ ತಂತ್ರಜ್ಞಾನದ ಶುದ್ದ ಕುಡಿಯುವ ನೀರಿನ ಘಟಕವನ್ನು ಮೇಯರ್ ಗಂಗಾಂಬಿಕೆ, ಶಾಸಕಿ ಸೌಮ್ಯರೆಡ್ಡಿ ಇಂದು ಲೋಕಾರ್ಪಣೆ ಮಾಡಿದರು.
ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಶಾಶ್ವತ ಕುಡಿಯುವ ನೀರು ಕಲ್ಪಿಸುವ ಉದ್ದೇಶದಿಂದ ಹೈಟೆಕ್ ಘಟಕ ಸ್ಥಾಪನೆ ಮಾಡಿರುವುದು ಸ್ವಾಗರ್ತಾರ್ಹ ಎಂದು ಮೇಯರ್ ಗಂಗಾಂಬಿಕೆ ಅಭಿಪ್ರಾಯಪಟ್ಟರು.
ಬಿಪಿಎಲ್ ಕಾರ್ಡ್ ಹೊಂದಿರುವ 500 ಮಂದಿಗೆ ಸ್ಮಾರ್ಟ್‍ಕಾರ್ಡ್‍ಗಳನ್ನು ವಿತರಿಸಲಾಗಿದ್ದು, ಅವರು ಪ್ರತಿದಿನ 25 ಲೀಟರ್ ಶುದ್ದ ನೀರು ಪಡೆಯುವ ಸೌಲಭ್ಯ ಪಡೆಯಲಿದ್ದಾರೆ ಎಂದು ಅವರು ಹೇಳಿದರು.
ಇತ್ತೀಚೆಗೆ ಶುದ್ಧ ಕುಡಿಯುವ ನೀರು ದೊರೆಯುವುದು ಕಷ್ಟವಾಗಿದೆ. ಮಲೀನ ನೀರು ಸೇವನೆಯಿಂದ ಹಲವಾರು ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ನಗರದ ಎಲ್ಲ ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.
ಆರ್ಥಿಕವಾಗಿ ಹಿಂದುಳಿದವರ ಆರೋಗ್ಯ ಕಾಪಾಡುವ ಉದ್ದೇಶದಿಂದ ಭೈರಸಂದ್ರ ವಾರ್ಡ್‍ನಲ್ಲಿ ಹೈಟೆಕ್ ಕುಡಿಯುವ ನೀರಿನ ಘಟಕ ಸ್ಥಾಪಿಸುವಲ್ಲಿ ಬಿಬಿಎಂಪಿ ಸದಸ್ಯ ಎನ್.ನಾಗರಾಜ್ ಅವರ ಕಾರ್ಯ ಶ್ಲಾಘನೀಯ ಎಂದರು.
ನನ್ನ ವಾರ್ಡ್‍ನಲ್ಲಿ ಅತಿಹೆಚ್ಚಿನ ಕೊಳಗೇರಿ ನಿವಾಸಿಗಳಿದ್ದಾರೆ. ಅವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಎಲ್ಲ ವರ್ಗದ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯಬೇಕೆಂಬ ಉದ್ದೇಶದಿಂದ ಈ ಹೈಟೆಕ್ ಘಟಕ ಸ್ಥಾಪಿಸಲಾಗಿದೆ. ನೀರಿನ ಅವಶ್ಯಕತೆ ಇದ್ದವರು 600 ರೂ.ನೀಡಿ ಕಾರ್ಡ್ ಪಡೆದುಕೊಳ್ಳಬಹುದು. ಅದೇ ಕಾರ್ಡ್‍ಗಳನ್ನು ರಿಚಾರ್ಜ್ ಮಾಡಿಸಿಕೊಳ್ಳಬಹುದೆಂದು ಬಿಬಿಎಂಪಿ ಸದಸ್ಯ ನಾಗರಾಜ್ ಹೇಳಿದರು.