ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಆನಂದ್‍ಸಿಂಗ್‍ ರಾಜೀನಾಮೆ

ಬೆಂಗಳೂರು, ಜು.1- ಅಚ್ಚರಿಯ ಬೆಳವಣಿಗೆಯಲ್ಲಿ ಬಳ್ಳಾರಿ ಜಿಲ್ಲೆ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಆನಂದ್‍ಸಿಂಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸಮ್ಮಿಶ್ರ ಸರ್ಕಾರಕ್ಕೆ ಮರ್ಮಾಘಾತ ನೀಡಿದ್ದಾರೆ.

ಈ ಮೂಲಕ ಕಳೆದ ಹಲವು ದಿನಗಳಿಂದ ತೆರೆಮರೆಗೆ ಸರಿದಿದ್ದ ಆಪರೇಷನ್ ಕಮಲ ಮತ್ತೆ ಮುಂಚೂಣಿಗೆ ಬಂದಿದ್ದು, ದೋಸ್ತಿ ಸರ್ಕಾರದ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ವಿಶೇಷವೆಂದರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಮೆರಿಕ ಪ್ರವಾಸದಲ್ಲಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.

ಆದರೆ, ಆನಂದ್‍ಸಿಂಗ್ ರಾಜೀನಾಮೆ ನೀಡಿರುವುದನ್ನು ಸ್ಪೀಕರ್ ರಮೇಶ್‍ಕುಮಾರ್ ನಿರಾಕರಿಸಿದ್ದಾರೆ. ನನ್ನ ಬಳಿ ಯಾರೂ ಬಂದು ರಾಜೀನಾಮೆ ಕೊಟ್ಟಿಲ್ಲ. ಒಂದು ವೇಳೆ ನನ್ನ ಆಪ್ತಕಾರ್ಯದರ್ಶಿ ಬಳಿ ಕೊಟ್ಟಿದ್ದರೆ ನನಗೆ ಅದರ ಬಗ್ಗೆ ಮಾಹಿತಿ ಇಲ್ಲ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಕೋಲಾರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಜಿಂದಾಲ್‍ಗೆ ಜಮೀನು ನೀಡುವ ವಿಷಯದಲ್ಲಿ ಆನಂದ್‍ಸಿಂಗ್ ರಾಜೀನಾಮೆ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಆದರೆ, ಇದನ್ನು ಸ್ಪಷ್ಟೀಕರಿಸಲು ಅವರು ದೂರವಾಣಿ ಸಂಪರ್ಕಕ್ಕೆ ಯಾರೊಬ್ಬರಿಗೂ ಸಿಗುತ್ತಿಲ್ಲ.

ಆನಂದ್‍ಸಿಂಗ್ ರಾಜೀನಾಮೆ ನೀಡಿರುವ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ಜೆಡಿಎಸ್‍ನಲ್ಲಿ ಅಸಮಾಧಾನಗೊಂಡಿರುವ ಸುಮಾರು 8ರಿಂದ 13 ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದು, ದೋಸ್ತಿ ಸರ್ಕಾರಕ್ಕೆ ಬಹುದೊಡ್ಡ ಕಂಟಕ ಎದುರಾಗಿದೆ.

ಇಂದು ಬೆಳಗ್ಗೆ ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್‍ಕುಮಾರ್ ಅವರನ್ನು ನಿವಾಸದಲ್ಲಿ ಭೇಟಿಯಾದ ಆನಂದ್‍ಸಿಂಗ್ ಪತ್ರ ನೀಡಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ರಾಜೀನಾಮೆಗೆ ಸ್ಪಷ್ಟ ಕಾರಣವನ್ನು ನೀಡಿಲ್ಲವಾದರೂ ರಾಜೀನಾಮೆಯನ್ನು ಅಂಗೀಕಾರ ಮಾಡುವಂತೆ ಸ್ಪೀಕರ್‍ಗೆ ಮನವಿ ಮಾಡಿದ್ದಾರೆ.

ಈ ಹಿಂದೆ ಕಾಂಗ್ರೆಸ್‍ನಿಂದ ಕಲಬುರ್ಗಿ ಜಿಲ್ಲೆ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಉಮೇಶ್‍ಜಾಧವ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಳಿಕ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಲಬುರ್ಗಿಯಿಂದ ಸ್ಪರ್ಧಿಸಿ ವಿಜೇತರಾಗಿದ್ದರು.

ಈ ಹಿಂದೆ ಬಳ್ಳಾರಿಯ ತೋರಣಗಲ್‍ನಲ್ಲಿರುವ ಜಿಂದಾಲ್‍ನ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ರಾಜ್ಯ ಸರ್ಕಾರ ಜಮೀನು ನೀಡಿರುವುದಕ್ಕೆ ಆನಂದ್‍ಸಿಂಗ್ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು.

ಸರ್ಕಾರ ತನ್ನ ತೀರ್ಮಾನವನ್ನು ಹಿಂಪಡೆಯದಿದ್ದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೂ ಬೆದರಿಕೆ ಹಾಕಿದ್ದರು. ಆದರೆ, ಇಂದು ಏಕಾಏಕಿ ರಾಜೀನಾಮೆ ಕೊಟ್ಟಿರುವುದು ದೋಸ್ತಿ ಪಕ್ಷಗಳಿಗೆ ಶಾಕ್ ನೀಡಿದಂತಾಗಿದೆ.

ಅಸಮಾಧಾನಗೊಂಡಿದ್ದ ಆನಂದ್‍ಸಿಂಗ್:
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಯಾದ ಮೇಲೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಆನಂದ್‍ಸಿಂಗ್ ಒಂದಿಲ್ಲೊಂದು ಕಾರಣಗಳಿಂದ ಅಸಮಾಧಾನಗೊಂಡಿದ್ದರು.

ಈ ಹಿಂದೆ ಆಪರೇಷನ್ ಕಮಲದಲ್ಲಿ ಆನಂದ್‍ಸಿಂಗ್ ಹೆಸರು ಕೇಳಿ ಬಂದಿತ್ತಾದರೂ ಕೆಲವು ಕಾರಣಗಳಿಂದ ಅದು ಅಷ್ಟೇ ವೇಗವಾಗಿ ತೆರೆಮರೆಗೆ ಸರಿದುಕೊಂಡಿತ್ತು.

ಬಿಡದಿಯ ಈಗಲ್‍ಟನ್ ರೆಸಾರ್ಟ್‍ನಲ್ಲಿ ಕಂಪ್ಲಿ ಶಾಸಕ ಜೆ.ಗಣೇಶ್ ಆನಂದ್‍ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಬಳಿಕ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು.ಕೆಲ ದಿನಗಳ ಹಿಂದೆ ಈ ಅಮಾನತು ಪ್ರಕರಣವನ್ನು ಹಿಂಪಡೆದಿದ್ದರಿಂದ ಅಸಮಾಧಾನಗೊಂಡಿದ್ದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದ ಆನಂದ್‍ಸಿಂಗ್, ರೆಸಾರ್ಟ್‍ನಲ್ಲಿ ಕಂಪ್ಲಿ ಶಾಸಕ ಜೆ.ಗಣೇಶ್ ಮೇಲೆ ಹಲ್ಲೆ ಮಾಡಿದ ಬಳಿಕ ರಾಜಕೀಯವಾಗಿ ತೆರೆಮರೆಗೆ ಸರಿದಿದ್ದರು.

ಕಾಂಗ್ರೆಸ್‍ನಲ್ಲಿ ಅಸಮಾಧಾನಗೊಂಡಿರುವ ಶಾಸಕರ ಪೈಕಿ ಇವರ ಹೆಸರು ಕೇಳಿ ಬಂದಿರಲಿಲ್ಲ. ಬಹುತೇಕ ಕ್ಷೇತ್ರದಲ್ಲೇ ಇದ್ದುಕೊಂಡು ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

ಮೂಲಗಳ ಪ್ರಕಾರ ನಿನ್ನೆ ನವದೆಹಲಿಗೆ ತೆರಳಿದ್ದ ಆನಂದ್‍ಸಿಂಗ್ ಕೇಂದ್ರದ ರಕ್ಷಣಾ ಖಾತೆ ಸಚಿವ ರಾಜನಾಥ್‍ಸಿಂಗ್ ಮತ್ತು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು ಎನ್ನಲಾಗಿದೆ.

ಅವರ ಸೂಚನೆ ಮೇರೆಗೆ ಕಳೆದ ರಾತ್ರಿ ದೆಹಲಿಯಿಂದ ಬೆಂಗಳೂರಿಗೆ ಬಂದ ಆನಂದ್‍ಸಿಂಗ್ ಇಂದು ಬೆಳಗ್ಗೆ ಸ್ಪೀಕರ್ ರಮೇಶ್‍ಕುಮಾರ್ ಅವರನ್ನು ಭೇಟಿಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಮೂಲತಃ ಆನಂದ್‍ಸಿಂಗ್ ಬಿಜೆಪಿಯಿಂದಲೇ ರಾಜಕೀಯ ಬೆಳವಣಿಗೆಗಳನ್ನು ಕಂಡವರು. ಈ ಹಿಂದೆ ಕಮಲ ಪಕ್ಷದಿಂದಲೇ ಎರಡು ಬಾರಿ ಸ್ಪರ್ಧಿಸಿ ಮಾಜಿ ಮುಖ್ಯಮಂತ್ರಿ ಜಗದೀಶ್‍ಶೆಟ್ಟರ್ ಅವಧಿಯಲ್ಲಿ ಪ್ರವಾಸೋದ್ಯಮ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

ಮಾಜಿ ಸಚಿವರಾದ ಜನಾರ್ಧನರೆಡ್ಡಿ ಮತ್ತು ಶ್ರೀರಾಮುಲು ಜತೆಗಿನ ಭಿನ್ನಾಭಿಪ್ರಾಯದಿಂದಾಗಿ 2018ರ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ತೊರೆದು ಕಾಂಗ್ರೆಸ್‍ಗೆ ಸೇರ್ಪಡೆಯಾಗಿ ವಿಜೇತರಾಗಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ