ಗಾಂಧಿನಗರ/ ಬೆಂಗಳೂರು: ದಕ್ಷಿಣ ಗುಜರಾತ್ನಲ್ಲಿ ಮಳೆ ಅಬ್ಬರಿಸುತ್ತಿದ್ದು ವಲ್ಸಾದ್ನಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದು ಬಿದ್ದಿದೆ.
ದಕ್ಷಿಣ ಗುಜರಾತಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಭಾನುವಾರ 203 ಮಿ.ಮೀ. ಮಳೆಯಾಗಿದೆ. ಅನುರಾಗ ಮತ್ತು ಪಾರ್ ನದಿಗಳು ತುಂಬಿ ಹರಿಯುತ್ತಿವೆ.
ಮುಂಬೈ ಮತ್ತು ಸೂರತ್ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮಳೆಯಿಂದಾಗ ನೀರು ನಿಂತಿದ್ದು ಹಲವೆಡೆ ಟ್ರಾಫಿಕ್ ಜಾಮ್ ಆಗಿದೆ. ಮುಂದಿನ 24 ಗಂಟೆಯಲ್ಲಿ ದಕ್ಷಿಣ ಗುಜರಾತಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಈ ತಿಂಗಳಲ್ಲಿ ಮಳೆ: ತಡವಾಗಿ ಎಂಟ್ರಿ ಕೊಟ್ಟಿರುವ ಮುಂಗಾರು ಮಳೆ ಮೊದಲ ತಿಂಗಳಲ್ಲಿ ಕೈ ಕೊಟ್ಟರೂ ಜುಲೈ ಆರಂಭದಲ್ಲಿ ಕರ್ನಾಟಕಕ್ಕೆ ಖುಷಿ ನೀಡುವ ಸಾಧ್ಯತೆ ಇದೆ.
ಭಾನುವಾರದಿಂದ ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆ ಆಗುತ್ತಿದ್ದು, ಕೊಂಚ ಸಮಾಧಾನ ತಂದಿದೆ. ಬೆಳಗಾವಿ, ಹುಬ್ಬಳ್ಳಿ-ಧಾರವಾಡದಲ್ಲಿ ಧಾರಾಕಾರ ಮಳೆ ಆಗಿದೆ. ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆಯಲ್ಲಿ ಸಾಧಾರಣ ವರ್ಷಧಾರೆ ಆಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಭದ್ರಾ ನದಿ, ಬೆಳಗಾವಿ ಜಿಲ್ಲೆಯಲ್ಲಿ ಮಲಪ್ರಭಾ ನದಿ ತುಂಬಿ ಹರಿಯುತ್ತಿದ್ದಾಳೆ. ಮಹಾರಾಷ್ಟ್ರದಲ್ಲಿ ಭರ್ಜರಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದತ್ತ ನೀರಿನ ಹರಿವು ಹೆಚ್ಚಾಗಿದೆ. ಮಹಾರಾಷ್ಟ್ರದ ಜಲ್ನಾದಲ್ಲಿ ನೀರಿನ ರಭಸಕ್ಕೆ ರಸ್ತೆಯೊಂದು ಕೊಚ್ಚಿಹೋಗಿದ್ದು, ಕಾರು ಮತ್ತು ಬೈಕ್ ಸವಾರರು ಸ್ವಲ್ಪದರಲ್ಲೇ ಬಚಾವಾಗಿದ್ದಾರೆ.